ತಪ್ಪಿಸಿಕೊಳ್ಳುವ ಅವಕಾಶ ಸಿಕ್ಕರೂ ಓಡಿ ಹೋಗಲಿಲ್ಲ ರೇಣುಕಾ ಸ್ವಾಮಿ
ರೇಣುಕಾ ಸ್ವಾಮಿ ಪ್ರಕರಣದಲ್ಲಿ ದಿನಕ್ಕೊಂದು ಹೊಸ ವಿಷಯ ಬೆಳಕಿಗೆ ಬರುತ್ತಿವೆ. ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದುಕೊಂಡು ಬರಬೇಕಾದರೆ ರೇಣುಕಾ ಸ್ವಾಮಿಗೆ ತಪ್ಪಿಸಿಕೊಳ್ಳಲು ಹಲವು ಅವಕಾಶ ಸಿಕ್ಕಿತ್ತಂತೆ ಆದರೆ ತಪ್ಪಿಸಿಕೊಳ್ಳಲಿಲ್ಲವಂತೆ.
ರೇಣುಕಾ ಸ್ವಾಮಿ (Renuka Swamy) ಕೊಲೆಯ ಬಗ್ಗೆ ದಿನಕ್ಕೊಂದು ಹೊಸ ಹೊಸ ವಿಷಯಗಳು ಹೊರಬರುತ್ತಿವೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಈಗಾಗಲೇ ಹಲವಾರು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಹಲವು ಆರೋಪಿಗಳನ್ನು ಬಂಧಿಸಿದ್ದು ಮಹಜರು ಪ್ರಕ್ರಿಯೆ ಸಹ ಬಹುತೇಕ ಮುಗಿದೆ. ರೇಣುಕಾ ಸ್ವಾಮಿಯನ್ನು ಅಪಹರಣ ಮಾಡಲಾಗಿದ್ದ ಚಿತ್ರದುರ್ಗಕ್ಕೂ ತೆರಳಿ ಅಲ್ಲಿಯೂ ಮಹಜರು ಮಾಡಲಾಗಿದೆ. ಪ್ರಕರಣದ ಎ8 ಆರೋಪಿ ರವಿ ಪೊಲೀಸರಿಗೆ ಶರಣಾಗಿದ್ದಾನೆ. ರವಿಯ ಗೆಳೆಯ, ಮೋಹನ್ ಎಂಬುವರು ರೇಣುಕಾ ಸ್ವಾಮಿಯ ಅಪಹರಣದ ಬಗ್ಗೆ ರವಿ ತಮಗೆ ಹೇಳಿದ ವಿಷಯಗಳನ್ನು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.
ಪ್ರಕರಣದ ಎ8 ಆರೋಪಿ ರವಿ, ಕ್ಯಾಬ್ ಚಾಲಕ. ಟೊಯೊಟಾ ಇಟಿಯಾಸ್ ಕಾರು ಇಟ್ಟುಕೊಂಡು ಬಾಡಿಗೆ ಕಾರು ಓಡಿಸುತ್ತಿರುವ ರವಿಗೆ ಅವರ ಇನ್ನೊಬ್ಬ ಗೆಳೆಯ ಕರೆ ಮಾಡಿ, ಬೆಂಗಳೂರಿಗೆ ಬಾಡಿಗೆಗೆ ಹೋಗಲು ಹೇಳಿದ್ದಾರೆ. ಅಂತೆಯೇ ರವಿ, ಜಗ್ಗು ಎಂಬಾತನ ಬೇಡಿಕೆ ಮೇರೆಗೆ ಇಟಿಯಾಸ್ ಕಾರು ತೆಗೆದುಕೊಂಡು ಹೋಗಿದ್ದಾರೆ. ಚಿತ್ರದುರ್ಗದ ಬಳಿ ಜಗ್ಗು, ಅನು, ರಘು ಹಾಗೂ ರೇಣುಕಾ ಸ್ವಾಮಿ ಕಾರಿಗೆ ಹತ್ತಿದ್ದಾರೆ.
ಕಾರಿನಲ್ಲಿ ಹೋಗುವಾಗಲೇ ರೇಣುಕಾ ಸ್ವಾಮಿಯನ್ನು ರಘು, ಜಗ್ಗು ಇನ್ನಿತರರು ಫೋಟೊ ಕಳಿಸಿದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ರೇಣುಕಾ ಸ್ವಾಮಿ, ಅದು ತನ್ನ ಅಭ್ಯಾಸ ಹಲವರಿಗೆ ಮೆಸೇಜ್ ಮಾಡುತ್ತಿರುತ್ತೇನೆ. ಎಂದೆಲ್ಲ ಹೇಳಿದನೆಂದು ರವಿ ತಮ್ಮ ಬಳಿ ಹೇಳಿದ್ದಾಗಿ ಮೋಹನ್ ಹೇಳಿದ್ದಾರೆ. ಅಲ್ಲದೆ ತುಮಕೂರಿನಲ್ಲಿ ಒಟ್ಟಿಗೆ ಎಲ್ಲರೂ ತಿಂಡಿ ತಿಂದಿದ್ದು, ಅಲ್ಲಿಯೂ ಸಹ ರೇಣುಕಾ ಸ್ವಾಮಿಯೇ ಬಿಲ್ ಕೊಟ್ಟನೆಂದು ಸಹ ರವಿ ಮೋಹನ್ ಬಳಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ರೇಣುಕಾ ಸ್ವಾಮಿ ಹತ್ಯೆ ಕೇಸ್; ಕೊಲೆ ಸ್ಪಾಟ್ನಲ್ಲಿ ಸಿಕ್ತಾ ಸ್ಟ್ರಾಂಗ್ ಎವಿಡನ್ಸ್?
ಬೆಂಗಳೂರು ತಲುಪುವಷ್ಟರಲ್ಲಿ ಹಲವು ಬಾರಿ ಕಾರು ನಿಲ್ಲಿಸಿದ್ದೆ, ರೇಣುಕಾ ಸ್ವಾಮಿ ಅಲ್ಲಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಅವಕಾಶ ಇತ್ತು. ಆದರೆ ಅವನು ತಪ್ಪಿಸಿಕೊಳ್ಳಲಿಲ್ಲ ಎಂದು ಸಹ ರವಿ, ಮೋಹನ್ ಬಳಿ ಹೇಳಿದ್ದರಂತೆ. ಕಾರನ್ನು ನೇರವಾಗಿ ಶೆಡ್ ಬಳಿಯೇ ತೆಗೆದುಕೊಂಡು ಹೋದರಂತೆ. ಅಲ್ಲಿ ಅದಾಗಲೇ ಸುಮಾರು 30 ಜನ ಇದ್ದರಂತೆ. ರೇಣುಕಾ ಸ್ವಾಮಿಯನ್ನು ನೋಡಿ ಇವನನ್ನು ಹೊಡೆಯಲು ಇಷ್ಟೋಂದು ಜನರು ಬೇಕಾ ಎಂದುಕೊಂಡು ಕೆಲವರು ಹೊರಟು ಹೋದರಂತೆ. ಕಾರು ಚಾಲಕ ರವಿ, ಜಗ್ಗು ಹಾಗೂ ಅನು ಅನ್ನು ಶೆಡ್ನ ಹೊರಗೇ ಇರುವಂತೆ ಹೇಳಿ ರಾಘು ಹಾಗೂ ರೇಣುಕಾ ಸ್ವಾಮಿಯನ್ನು ಮಾತ್ರ ಒಳಗೆ ಕರೆದುಕೊಂಡು ಹೋದರಂತೆ.
ಬಹಳ ಹೊತ್ತು ರವಿ, ಜಗ್ಗು, ಅನು ಹೊರಗೆ ನಿಂತಿದ್ದರಂತೆ. 2:30 ಸುಮಾರಿಗೆ ರಘು ಹೊರಗೆ ಬಂದು, ಕೊಲೆ ಆಗಿಬಿಟ್ಟಿದೆ ಅಪ್ರೂವರ್ ಆಗುತ್ತೀಯ ಎಂದು ರವಿಯನ್ನು ಕೇಳಿದರಂತೆ. ಆದರೆ ಅದಕ್ಕೆ ರವಿ ಒಪ್ಪಿಕೊಂಡಿಲ್ಲ. ಕೊನೆಗೆ ರಘು ನೀಡಿದ ನಾಲ್ಕು ಸಾವಿರ ಕಾರಿನ ಬಾಡಿಗೆ ಪಡೆದು, ಜಗ್ಗು ಹಾಗೂ ಅನು ಅನ್ನು ಕಾರಿಗೆ ಹತ್ತಿಸಿಕೊಂಡು ಚಿತ್ರದುರ್ಗಕ್ಕೆ ವಾಪಸ್ಸಾಗಿದ್ದಾರೆ. ಪ್ರಕರಣ ದಾಖಲಾಗಿ ಎರಡು ದಿನದ ಬಳಿಕ ತಾನೇ ಹೋಗಿ ಪೊಲೀಸರ ಮುಂದೆ ಶರಣಾಗಿದ್ದಾರೆ ರವಿ. ಈಗ ರವಿ ಪೊಲೀಸರ ವಶದಲ್ಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ