ನಟ ದ್ವಾರಕೀಶ ನಿಧನ: ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ, ಬುಧವಾರ ಬೆಂಗಳೂರಿನಲ್ಲಿ ಅಂತ್ಯಕ್ರಿಯೆ
ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ (81) ನಿಧನರಾಗಿದ್ದು, ಅಂತ್ಯಕ್ರಿಯೆ ಬುಧವಾರ (ಏ.17) ಬೆಳಿಗ್ಗೆ 11:30ಕ್ಕೆ ಚಾಮರಾಜಪೇಟೆಯ ಟಿಆರ್ ಮೀಲ್ನಲ್ಲಿ ನಡೆಯಲಿದೆ. ಬುಧವಾರ ಬೆಳಿಗ್ಗೆ 7.30ರ ನಂತರ ರವೀಂದ್ರ ಕಲಾಕ್ಷೆತ್ರದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರು, ಏಪ್ರಿಲ್ 16: ಕನ್ನಡ ಚಿತ್ರರಂಗದ (Kannada Film Industry) ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ (Dwarakish) (81) ನಿಧನರಾಗಿದ್ದು, ಅಂತ್ಯಕ್ರಿಯೆ ಬುಧವಾರ (ಏ.17) ಬೆಳಿಗ್ಗೆ 11:30ಕ್ಕೆ ಚಾಮರಾಜಪೇಟೆಯ ಟಿಆರ್ ಮೀಲ್ನಲ್ಲಿ ನಡೆಯಲಿದೆ. ದರ್ಶನಕ್ಕೆ ದ್ವಾರಕೀಶ ಅವರ ಪಾರ್ಥೀವ ಶರೀರವು ಬುಧವಾರ ಬೆಳಗಿನ ಜಾವದವರೆಗು ಅವರ ನಿವಾಸದಲ್ಲಿಯೇ ಇರಲಿದ್ದು, ಗಣ್ಯರ ಮತ್ತು ಕುಟುಂಬಸ್ಥರು ಅಂತಿಮ ದರ್ಶನ ಪಡೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 7.30 ರ ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಕಲಾವಿದರು ಹಾಗೂ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 11 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, 11 ಗಂಟೆಯ ನಂತರ ಶವವನ್ನು ಚಾಮರಾಜಪೇಟೆಯ ಟಿಆರ್ಮೀಲ್ ಚಿತಾಗಾರಕ್ಕೆ ತರಲಾಗುತ್ತದೆ. ಇಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ದ್ವಾರಕೀಶ್ ಅವರ ನಿಧನವಾರ್ತೆ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಹಾಗೂ ಅವರ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ. ಅವರು ಮೃತಪಟ್ಟ ಬಗ್ಗೆ ಈ ಮೊದಲು ಹಲವು ಬಾರಿ ವದಂತಿ ಹಬ್ಬಿತ್ತು. ಈ ಬಾರಿಯೂ ಸಾವಿನ ಸುದ್ದಿ ಫೇಕ್ ಇರಬಹುದು ಎಂದು ಎಲ್ಲರೂ ಭಾವಿಸಿದ್ದರು. ಈಗ ಅವರ ಕುಟುಂಬದ ಕಡೆಯಿಂದಲೇ ಇದಕ್ಕೆ ಸ್ಪಷ್ಟನೆ ನೀಡಲಾಗಿದೆ.
ಇದನ್ನೂ ಓದಿ: ಹಲವು ದಿಗ್ಗಜರ ಜೊತೆ ನಟನೆ, ಸೂಪರ್ ಹಿಟ್ ಸಿನಿಮಾ ನಿರ್ಮಾಣ; ದ್ವಾರಕೀಶ್ ನಡೆದುಬಂದ ಹಾದಿ
‘ರಾತ್ರಿ ಲೂಸ್ ಮೋಷನ್ ಆಯ್ತು. ರಾತ್ರಿ ನಿದ್ದೆ ಮಾಡಿರಲಿಲ್ಲ. ಬೆಳಿಗ್ಗೆ ಕಾಫಿ ಕುಡಿದು ಎರಡು ಗಂಟೆ ಮಲಗುತ್ತೇನೆ ಎಂದು ನಿದ್ರಿಸಿದ್ದರು. ಮಲಗಿದವರು ಎದ್ದೇ ಇಲ್ಲ. ಅವರಿಗೆ ಹೃದಯಾಘಾತ ಆಗಿದೆ’ ಎಂದು ದ್ವಾರಕೀಶ್ ಪುತ್ರ ಯೋಗಿ ಅವರು ಟಿವಿ9 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.
ದ್ವಾರಕೀಶ್ ಅವರು ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ನಿರ್ಮಾಪಕನಾಗಿ, ನಿರ್ದೇಶಕನಾಗಿ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ತುಂಬಾನೇ ದೊಡ್ಡದು. ‘ಮಮತೆಯ ಬಂಧನ’ ಅವರ ನಿರ್ಮಾಣದ ಮೊದಲ ಸಿನಿಮಾ. ‘ವೀರ ಸಂಕಲ್ಪ’ ಅವರ ನಟನೆಯ ಮೊದಲ ಸಿನಿಮಾ.
ನಿರ್ದೇಶಕರಾಗಿಯೂ ದ್ವಾರಕೀಶ್ ಹೆಸರು ಮಾಡಿದ್ದರು. ‘ನೀ ಬರೆದ ಕಾದಂಬರಿ’ ಅವರ ನಿರ್ದೇಶನದ ಮೊದಲ ಸಿನಿಮಾ. ಆ ಬಳಿಕ, ‘ಆಫ್ರಿಕಾದಲ್ಲಿ ಶೀಲಾ’, ‘ಕಿಲಾಡಿಗಳು’ ಮೊದಲಾದ ಸಿನಿಮಾಗಳನ್ನು ಅವರು ನಿರ್ದೇಶಿಸಿದರು. 2001ರ ಈಚೆಗೆ ಅವರು ಸಿನಿಮಾ ನಿರ್ಮಾಣಕ್ಕೆ ಇಳಿದಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:49 pm, Tue, 16 April 24