
ಬೆಂಗಳೂರು: ‘ಕನ್ನಡದ ಶಿವಮಣಿ’ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ಹಾಗೂ ಪ್ರಸಿದ್ಧ ಡ್ರಮ್ಮರ್ ದೇವ ಅವರು ತೀವ್ರ ಅನಾರೋಗ್ಯದಿಂದ ಭಾನುವಾರ (ಸೆಪ್ಟೆಂಬರ್ 27) ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು. ಕಳೆದ ಮೂರೂವರೆ ವರ್ಷಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಇತ್ತೀಚೆಗೆ ಗ್ಯಾಂಗ್ರಿನ್ ಸಮಸ್ಯೆಗೆ ತುತ್ತಾಗಿ ತಮ್ಮ ಒಂದು ಕಾಲನ್ನು ಕಳೆದುಕೊಂಡಿದ್ದರು. ಆದಾಗ್ಯೂ, ಧೃತಿಗೆಡದೆ ಕೃತಕ ಕಾಲನ್ನು ಬಳಸಿಕೊಂಡು ಡ್ರಮ್ಸ್ ಬಾರಿಸುವುದನ್ನು ಮುಂದುವರಿಸಿದ್ದರು.
ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡ್ರಮ್ಮರ್ ದೇವ ಅವರು ಮನೆಗೆ ಮರಳಿದ್ದರು. ಆದರೆ, ಕಳೆದ ಎರಡು ದಿನಗಳಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಇಂದು (ಸೆ.27) ಕೊನೆಯುಸಿರೆಳೆದಿದ್ದಾರೆ.
ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ಡಾ. ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ಅನೇಕ ಹೀರೋಗಳ 300ಕ್ಕೂ ಹೆಚ್ಚು ಹಾಡುಗಳಿಗೆ ದೇವ ಅವರು ಡ್ರಮ್ಸ್ ಬಾರಿಸಿದ್ದಾರೆ. ಸಾಧುಕೋಕಿಲ, ಗುರುಕಿರಣ್ ಸೇರಿದಂತೆ ಕನ್ನಡದ ಹಲವು ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದರು. ‘5 ಈಡಿಯಟ್ಸ್’ ಹಾಗೂ ‘ಪ್ರೀತಿ ನೀ ಹಿಂಗ್ಯಾಕೆ’ ಸಿನಿಮಾಗಳಿಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದರು.
ತಂದೆಯ ಅಗಲಿಕೆಯ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ದೇವ ಅವರ ಮಗಳು ರಿಶೋನಾ, ‘ನನ್ನ ತಂದೆಗೆ ಡ್ರಮ್ಸ್ ಎಂದರೆ ಪ್ರಾಣವಾಗಿತ್ತು. ಆಸ್ಪತ್ರೆಯಲ್ಲಿದ್ದಾಗಲೂ ಬೆಡ್ ಮೇಲೆಯೇ ಡ್ರಮ್ಸ್ ನುಡಿಸುತ್ತಿದ್ದರು. ಕೈಗೆ ಸ್ಟಿಕ್ಸ್ ಕೊಡಿ ಎಂದು ಕೇಳುತ್ತಿದ್ದರು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯ ತೀರಾ ಕ್ಷೀಣಿಸಿ ಇಂದು ನಮ್ಮನ್ನು ಅಗಲಿದ್ದಾರೆ’ ಎಂದು ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ: ಹಿರಿಯ ನಟಿ ಸಾಹುಕಾರ್ ಜಾನಕಿ ನಿಧನ: 94ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಕಲಾವಿದೆ
ಡ್ರಮ್ಮರ್ ದೇವ ಅವರ ಅಂತ್ಯಕ್ರಿಯೆಯನ್ನು ಭಾನುವಾರ (ಸೆಪ್ಟೆಂಬರ್ 27) ಮಧ್ಯಾಹ್ನ 3 ಗಂಟೆಗೆ ಕ್ರೈಸ್ತ ಪದ್ಧತಿಯಂತೆ ನೆರವೇರಿಸಲಾಗುವುದು. ಅಂತ್ಯಕ್ರಿಯೆ ನಡೆಯುವ ಸ್ಥಳವನ್ನು ಕುಟುಂಬಸ್ಥರು ನಿರ್ಧರಿಸಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.