ನಟ ದರ್ಶನ್ (Darshan) ಬಗ್ಗೆ ಎಲ್ಲೆಲ್ಲೂ ಚರ್ಚೆ ಆಗುತ್ತಿದೆ. ಸದ್ಯ ದರ್ಶನ್ ತೂಗುದೀಪ ಗೆ ಕಷ್ಟ ಕಾಲ ಎದುರಾಗಿದೆ. ಕೊಲೆ ಕೇಸ್ನಲ್ಲಿ ಆರೋಪಿ ಆಗಿರುವ ಅವರು ಪರಪ್ಪನ ಅಗ್ರಹಾರ ಸೇರಿಕೊಂಡಿದ್ದಾರೆ. ಜೈಲು ವಾಸದಲ್ಲಿ ಇರುವ ಅವರನ್ನು ನೋಡಲು ಆಪ್ತರು ಆಗಮಿಸುತ್ತಿದ್ದಾರೆ. ಹೀಗಿರುವಾಗ, ದರ್ಶನ್ ಕೇಸ್ಗೆ ಸಂಬಂಧಿಸಿದ ವಿಷಯಗಳನ್ನೇ ಇಟ್ಟುಕೊಂಡು ಸಿನಿಮಾ (Kannada Cinema) ಟೈಟಲ್ ನೋಂದಣಿ ಮಾಡಿಸಲು ಕೆಲವರು ಆಸಕ್ತಿ ತೋರಿಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ‘ಡಿ ಗ್ಯಾಂಗ್’ ಎಂಬ ಶೀರ್ಷಿಕೆಗೆ ಬೇಡಿಕೆ ಬಂದಿತ್ತು. ಈಗ ದರ್ಶನ್ ಅವರಿಗೆ ನೀಡಿದ ಖೈದಿ ನಂಬರ್ (Darshan Jail Number) ಕೂಡ ಬೇಡಿಕೆಯಲ್ಲಿದೆ.
ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಖೈದಿ ಆಗಿರುವ ದರ್ಶನ್ಗೆ 6106 ನಂಬರ್ ನೀಡಲಾಗಿದೆ. ಇದೇ ನಂಬರ್ನಲ್ಲಿ ಶೀರ್ಷಿಕೆ ಇಟ್ಟುಕೊಂಡು ಸಿನಿಮಾ ಮಾಡಲು ಕೆಲವರು ಮುಂದಾಗಿದ್ದಾರೆ. ಯಾವುದೇ ಸಿನಿಮಾ ಆಗಬೇಕು ಎಂದರೆ ಅದರ ಶೀರ್ಷಿಕೆಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಈಗ ‘ಖೈದಿ ನಂಬರ್ 6106’ ಟೈಟಲ್ಗೆ ಬೇಡಿಕೆ ಬಂದಿದೆ.
ಚಿತ್ರತಂಡಕ್ಕೆ ಶೀರ್ಷಿಕೆ ಬಳಸಲು ಅನುಮತಿ ನೀಡುವುದಕ್ಕೂ ಮುನ್ನ ವಾಣಿಜ್ಯ ಮಂಡಳಿಯವರು ಕೆಲವು ಮಾನದಂಡಗಳನ್ನು ಪಾಲಿಸುತ್ತಾರೆ. ಹಾಗಾಗಿ ‘ಖೈದಿ ನಂಬರ್ 6106’ ಟೈಟಲ್ಗೆ ಅನುಮತಿ ನೀಡಿಲ್ಲ. ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್, ಪವಿತ್ರಾ ಗೌಡ ಪ್ರಮುಖ ಆರೋಪಿ ಆಗಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ, ಈ ಹಂತದಲ್ಲಿ ಈ ಟೈಟಲ್ ನೀಡಲು ಸಾಧ್ಯವಿಲ್ಲ ಎಂದು ವಾಣಿಜ್ಯ ಮಂಡಳಿ ಹೇಳಿದೆ.
‘ಖೈದಿ ನಂಬರ್ 6106’ ಶೀರ್ಷಿಕೆ ಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ‘ಭದ್ರಾವತಿ ಮೂವೀ ಮೇಕರ್ಸ್’ ಸಂಸ್ಥೆಯು ಅರ್ಜಿ ಸಲ್ಲಿಸಿರುವ ಫೋಟೋ ಲಭ್ಯವಾಗಿದೆ. ನಿರ್ಮಾಪಕರ ಬೇಡಿಕೆಯನ್ನು ‘ಶೀರ್ಷಿಕೆ ಸಮಿತಿ’ಯಲ್ಲಿ ಪರಿಶೀಲಿಸಲಾಗಿದೆ. ಲಭ್ಯವಾಗಿರುವ ಫೋಟೋದಲ್ಲಿ ‘ಸದ್ಯಕ್ಕೆ ಪೆಂಡಿಂಗ್ ಇಡಲಾಗಿದೆ’ ಎಂದು ನಮೂದಿಸಲಾಗಿದೆ.
ಇದನ್ನೂ ಓದಿ: ಬಲವಾದ ಕಾರಣ ನೀಡಿ ದರ್ಶನ್ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ
ಇತ್ತೀಚೆಗೆ ಕೆಲವು ಅಭಿಮಾನಿಗಳ ತಮ್ಮ ವಾಹನ ಮೇಲೆ ‘ಖೈದಿ ನಂಬರ್ 6106’ ಎಂದು ಸ್ಟಿಕ್ಕರ್ ಅಂಟಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಇನ್ಮುಂದೆ ಇದು ತಮ್ಮ ಲಕ್ಕಿ ನಂಬರ್ ಎಂದು ಕೂಡ ಅಂಥವರು ಹೇಳುತ್ತಿದ್ದಾರೆ. ಹೊಸ ವಾಹನಗಳ ನೋಂದಣಿಗೆ ಈ ನಂಬರ್ ಬೇಕು ಎಂದು ದರ್ಶನ್ ಅಭಿಮಾನಿಗಳು ಬೇಡಿಕೆ ಇಡುತ್ತಿದ್ದಾರೆ ಎಂಬ ಮಾಹಿತಿ ಕೂಡ ಕೇಳಿಬಂದಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 4:15 pm, Wed, 26 June 24