‘ಅವರ ಪಾದದ ದೂಳು ಸೋಕಿ…’ ಸುಂದರನ ಸನ್ಯಾಸಿ ಮಾಡಬಹುದೇ ಜನಪದ ಗಾಯಕನ ಅಣ್ಣಾವ್ರ ಪ್ರೀತಿ ಅನಂತ
Malavalli Mahadevaswamy: 'ಈ ಸುಂದರನ ಸನ್ಯಾಸಿ ಮಾಡಬಹುದೆ ' ಹಾಡು ಹಾಡಿರುವ ಜನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿಯವರು ಡಾ ರಾಜ್ಕುಮಾರ್ ಮೇಲಿರುವ ತಮ್ಮ ಅಗಾಧ ಪ್ರೀತಿ-ಭಕ್ತಿಯನ್ನು ವಿವರಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ (Social Media) ‘ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೆ’ (Sanyasi Madabhude) ಹಾಡು ಬಹಳ ವೈರಲ್ (Viral) ಆಗಿದೆ. ಈ ಹಾಡನ್ನು ಯುವಕರು ರೀಲ್ಗಳಲ್ಲಿ ಬಳಸುತ್ತಿದ್ದಾರೆ. ಭಾರಿ ವೈರಲ್ ಆಗಿರುವ ಈ ಹಾಡನ್ನು ಹಾಡಿದವರು ನಾಡಿನ ಹೆಸರಾಂತ ಜನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿಯವರು (Malavalli Mahadevaswamy). ಹಾಡು ವೈರಲ್ ಆಗುತ್ತಿದ್ದಂತೆ ಮಾಧ್ಯಮಗಳು, ಯೂಟ್ಯೂಬ್ ಚಾನೆಲ್ಗಳವರು ಗಾಯಕರ ಸಂದರ್ಶನ ಮಾಡುತ್ತಿವೆ. ಬಹುತೇಕ ಎಲ್ಲ ಸಂದರ್ಶನಗಳಲ್ಲಿಯೂ ಮಹದೇವಸ್ವಾಮಿವರು ಡಾ ರಾಜ್ಕುಮಾರ್ (Dr Rajkumar) ಅವರನ್ನು ನೆನಪಿಸಿಕೊಂಡಿದ್ದಾರೆ. ತಾವು ಕಲಾವಿದನಾಗಲು ಆ ಪುಣ್ಯಾತ್ಮನೇ ಕಾರಣ ಎಂದಿದ್ದಾರೆ.
ಟಿವಿ9 ಜೊತೆಗಿನ ಸುದೀರ್ಘ ಸಂದರ್ಶನದಲ್ಲಿ ಮಾತನಾಡಿರುವ ಮಳವಳ್ಳಿ ಮಹದೇವಸ್ವಾಮಿಯರು ಸಂದರ್ಶನದುದ್ದಕ್ಕೂ ಹಲವು ಬಾರಿ ರಾಜ್ಕುಮಾರ್ ಅವರನ್ನು ಅವರ ಸಿನಿಮಾಗಳನ್ನು ನೆನಪಿಸಿಕೊಂಡಿದ್ದಾರೆ. ಮಹದೇವಸ್ವಾಮಿಯವರು ಸಣ್ಣವರಿದ್ದಾಗ ಅವರ ತಂದೆ ಅಣ್ಣಾವ್ರು ನಟಿಸಿದ್ದ ಮಲ್ಲಮ ಪವಾಡ ಸಿನಿಮಾಕ್ಕೆ ಕರೆದುಕೊಂಡು ಹೋಗಿದ್ದರಂತೆ. ಅಂದಿನಿಂದಲೂ ಅಣ್ಣಾವ್ರು ಎಂದರೆ ಮಹದೇವಸ್ವಾಮಿಯವರಿಗೆ ಹುಚ್ವು ಪ್ರೇಮ. ಮೊದಲು ಹಾಡಲು ಪ್ರಾರಂಭಿಸಿದ್ದೆ ಅಣ್ಣಾವ್ರ ಸಿನಿಮಾ ಹಾಡುಗಳನ್ನು. ಮಹದೇವಸ್ವಾಮಿಯವರ ಹಾಡುಗಳನ್ನು ಮೆಚ್ಚಿ ಕೆಲವರು ನೀಡಿದ ಪ್ರೋತ್ಸಾಹದಿಂದ ಜನಪದ ಗಾಯನ ಅಥವಾ ಕತೆ ಕಲಿಯಲು ಆರಂಭಿಸಿದರಂತೆ ಮಹದೇವಸ್ವಾಮಿ.
ರಾಜ್ಕುಮಾರ್ ಎಂದರೆ ನನಗೆ ಊಟವೂ ಬೇಡ ನಿದ್ದೆಯೂ ಬೇಡ ಅಷ್ಟು ಪ್ರೀತಿ. ಅವರ ಸಿನಿಮಾಗಳನ್ನು ಅದೆಷ್ಟು ಬಾರಿ ನೋಡಿದ್ದೇನೆಯೋ ನನಗೇ ನೆನಪಿಲ್ಲ. ಬಂಗಾರದ ಮನುಷ್ಯ ಸಿನಿಮಾವನ್ನು 99 ಬಾರಿ ನೋಡಿದ್ದೇನೆ. ಅವರ ಸಿನಿಮಾಗಳನ್ನು ಹತ್ತಕ್ಕಿಂತಲೂ ಹೆಚ್ಚು ಬಾರಿ ನೋಡಿದ್ದೇನೆ. ಅವರು ಸಿನಿಮಾ ಮೂಲಕ ಕಲಿಸಿದ ಜೀವನ ಪಾಠ ಬಹಳ ದೊಡ್ಡದು. ಅವರು ಹೋದ ಮೇಲೆ ನಾನು ಸಿನಿಮಾಗಳನ್ನು ನೋಡುವುದೇ ಬಿಟ್ಟುಬಿಟ್ಟೆ” ಎಂದಿದ್ದಾರೆ.
ಇದನ್ನೂ ಓದಿ:ವೈರಲ್ ಆಗಿರುವ ‘ಈ ಸುಂದರನ ಸನ್ಯಾಸಿ ಮಾಡಬಹುದೆ’ ಹಾಡಿನ ಹಿನ್ನೆಲೆ ಏನು? ಹಾಡಿದ್ದು ಯಾರು?
ರಾಜ್ಕುಮಾರ್ ಅವರನ್ನು ಹಲವು ಬಾರಿ ನೋಡಿರುವುದಾಗಿ ಹೇಳಿದ ಮಹದೇವಸ್ವಾಮಿಯವರು, ಕಾಮನಬಿಲ್ಲು ಸಿನಿಮಾ ಮಾಡುವಾಗ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಒಮ್ಮೆ ಅವರನ್ನು ಭೇಟಿಯಾಗಿ ಕಾಲುಮುಟ್ಟಿ ಆಶೀರ್ವಾದ ಪಡೆದಿದ್ದೇನೆ. ದೊಡ್ಡಗಾಜನೂರಿಗೆ ಬಂದಾಗಲೂ ಒಮ್ಮೆ ಆಶೀರ್ವಾದ ಪಡೆದಿದ್ದೇನೆ. ಮಲೆ ಮಹದೇಶ್ವರ ಸ್ವಾಮಿ ಬೆಟ್ಟಕ್ಕೆ ಬಂದಾಗ ಅವರೊಟ್ಟಿಗೆ ಫೋಟೊ ತೆಗೆಸಿಕೊಂಡಿದ್ದೇನೆ. ಶೂಟಿಂಗ್ ಒಂದಕ್ಕೆ ಮುಡುಕುತೆರೆಗೆ ಬಂದಿದ್ದಾಗ ಅವರನ್ನು ನೋಡಿದ್ದೆ. ಅವರ ಪಾದ ಮುಟ್ಟಿದಾಗ ಅವರ ಪಾದದ ದೂಳು ಸೋಕಿ ನಾನು ಕಲಾವಿದನಾಗಿ ಉಳಿದುಬಿಟ್ಟೆ. ಇಷ್ಟು ಎತ್ತರಕ್ಕೆ ಏರಿಬಿಟ್ಟೆ. ಎಲ್ಲ ಅವರ ಕೃಪೆ” ಎಂದಿದ್ದಾರೆ ಮಳವಳ್ಳಿ ಮಹದೇವಸ್ವಾಮಿ.
ಅಣ್ಣಾವ್ರ ಸಿನಿಮಾಗಳನ್ನು ನೋಡಿ ಅವರ ಮೆಟ್ಟಿದ ನೆಲವನ್ನು ಮುಟ್ಟಬೇಕೆನ್ನುವ ಆಸೆಯಿಂದಲೋ ಏನೋ, ಅವರ ಸಿನಿಮಾ ಚಿತ್ರೀಕರಣವಾದ ಜಾಗಗಳಿಗೆ ಮಹದೇವಸ್ವಾಮಿಯವರು ಹೋಗಿದ್ದಾರಂತೆ. ಗಂಧದ ಗುಡಿ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯ ಚಿತ್ರೀಕರಣವಾಗಿರುವ ಮಸಾಲೆ ಬೆಟ್ಟಕ್ಕೆ ಹೋಗಿದ್ದಾರೆ, ಭಕ್ತ ಕುಂಬಾರ ಸಿನಿಮಾ ನೋಡಿ ಪಂಡರಾಪುರಕ್ಕೆ ಹೋಗಿದ್ದಾರೆ. ಸತ್ಯ ಹರಿಶ್ಚಂದ್ರ ಸಿನಿಮಾ ನೋಡಿ ಕಾಶಿ ಪಟ್ಟಣಕ್ಕೆ ಹೋಗಿ ಹರಿಶ್ಚಂದ್ರ ಘಾಟ್ ನೋಡಿದ್ದಾರೆ. ಪ್ರೇಮದ ಕಾಣಿಕೆ ಸಿನಿಮಾದಲ್ಲಿ ಹಿಮದ ಮೇಲೆ ಅಣ್ಣಾವ್ರು ಜಾರು ದೃಶ್ಯ ನೋಡಿ ಕಾಶ್ಮೀರಕ್ಕೆ ಹೋಗಬೇಕೆಂದುಕೊಂಡಿದ್ದಾರಂತೆ ಮಹದೇವಸ್ವಾಮಿ, ಸಾಯುವ ಮುಂಚೆ ಅಲ್ಲಿಗೂ ಹೋಗಿಯೇ ಹೋಗುತ್ತಾನೆ ಎಂಬ ಆಸೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ