Prajwal Devaraj: ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಹೊರಟ ಪ್ರಜ್ವಲ್ ದೇವರಾಜ್; ಈ ಚಿತ್ರದ ಹೆಸರು ‘ಜಾತರೆ’
Pan India Movie: ಇದೇ ಮೊದಲ ಬಾರಿಗೆ ಪ್ರಜ್ವಲ್ ದೇವರಾಜ್ ಅವರು ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಈ ಪ್ಯಾನ್ ಇಂಡಿಯಾ ಚಿತ್ರವು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆ ಆಗಲಿದೆ.
ಇದು ಪ್ಯಾನ್ ಇಂಡಿಯಾ ಸಿನಿಮಾಗಳ (Pan India Movies) ಜಮಾನಾ. ಎಲ್ಲ ಹೀರೋಗಳು ದೇಶವ್ಯಾಪಿ ಮಾರುಕಟ್ಟೆ ಮೇಲೆ ಕಣ್ಣು ಇಟ್ಟಿದ್ದಾರೆ. ಕನ್ನಡದ ಸ್ಟಾರ್ ನಟರು ಕೂಡ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಆ ಸಾಲಿಗೆ ಹೊಸ ಸೇರ್ಪಡೆ ಪ್ರಜ್ವಲ್ ದೇವರಾಜ್. ಕನ್ನಡದಲ್ಲಿ ಅನೇಕ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿರುವ ಅವರು ಈಗ ತಮ್ಮ ಗಡಿ ವಿಸ್ತರಿಸುತ್ತಿದ್ದಾರೆ. ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾಗೆ ಸಕಲ ಸಿದ್ಧತೆ ನಡೆದಿದೆ. ಈ ಚಿತ್ರಕ್ಕೆ ‘ಜಾತರೆ’ (Jathare Movie) ಎಂದು ಶೀರ್ಷಿಕೆ ಇಡಲಾಗಿದೆ. ಇತ್ತೀಚೆಗೆ ಸಿನಿಮಾ ಟೈಟಲ್ ಅನಾವರಣ ಮಾಡಲಾಯಿತು. ಈಗಾಗಲೇ ಲವ್, ಆ್ಯಕ್ಷನ್, ಫ್ಯಾಮಿಲಿ ಸೆಂಟಿಮೆಂಟ್ ಸೇರಿದಂತೆ ಅನೇಕ ಬಗೆಯ ಸಿನಿಮಾಗಳನ್ನು ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿರುವ ಪ್ರಜ್ವಲ್ ದೇವರಾಜ್ (Prajwal Devaraj) ಅವರು ಪ್ಯಾನ್ ಇಂಡಿಯಾ ಸಿನಿಮಾಗೆ ಸಹಿ ಮಾಡಿದ್ದಾರೆ.
ಇದೇ ಮೊದಲ ಬಾರಿಗೆ ಪ್ರಜ್ವಲ್ ದೇವರಾಜ್ ಅವರು ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಅವರು ನಟಿಸಲಿರುವ ಪ್ಯಾನ್ ಇಂಡಿಯಾ ಚಿತ್ರವು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ನಿರ್ಮಾಣ ಆಗುತ್ತಿದೆ. ‘ಜಾತರೆ’ ಸಿನಿಮಾದಲ್ಲಿ ಲವ್, ಫ್ಯಾಮಿಲಿ ಸೆಂಟಿಮೆಂಟ್ ಕಥಾಹಂದರ ಇರಲಿದೆ. ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಅವರು ಈವರೆಗೆ ಮಾಡಿರದ ಡಿಫರೆಂಟ್ ಪಾತ್ರ ಮಾಡಲಿದ್ದು, ಅವರ ಲುಕ್ ಕೂಡ ಸಖತ್ ಭಿನ್ನವಾಗಿ ಇರಲಿದೆ.
ಟಾಲಿವುಡ್ನಲ್ಲಿ ಹಲವಾರು ಯಶಸ್ವಿ ಚಿತ್ರಗಳನ್ನು ನಿರ್ದೇಶನ ಮಾಡಿರುವ ಉದಯ ನಂದನವನಂ ಅವರು ಈಗ ಪ್ರಜ್ವಲ್ ದೇವರಾಜ್ ಅವರ ಪ್ಯಾನ್ ಇಂಡಿಯಾ ಸಿನಿಮಾವಾದ ‘ಜಾತರೆ’ಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಹೈದರಾಬಾದ್ ಮೂಲದ ಪ್ರತಿಷ್ಠಿತ ವರ್ಧಮಾನ್ ಫಿಲಂಸ್ ಹಾಗೂ ಲೋಟಸ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಮೂಲಕ ಗೋವರ್ಧನ್ ರೆಡ್ಡಿ ಅವರು ‘ಜಾತರೆ’ ಸಿನಿಮಾವನ್ನು ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ನಾಯಕಿ ಯಾರು? ಉಳಿದ ಪಾತ್ರವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.
ಇದನ್ನೂ ಓದಿ: Prajwal Devaraj: ಟೈಮ್ ಲೂಪ್ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್; ‘ಮಮ್ಮಿ’ ಖ್ಯಾತಿಯ ಲೋಹಿತ್ ನಿರ್ದೇಶನ
ಸಹಕಾರ ನಗರದಲ್ಲಿ ಇರುವ ನಿರ್ಮಾಪಕರ ಕಚೇರಿಯಲ್ಲಿ ಇತ್ತೀಚೆಗೆ ‘ಜಾತರೆ’ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ನಡೆಯಿತು. ಆಗಸ್ಟ್ ತಿಂಗಳಲ್ಲಿ ಸಿನಿಮಾ ಶೂಟಿಂಗ್ ಪ್ರಾರಂಭಿಸಿ, 2024ರ ಜನವರಿಯಲ್ಲಿ ಸಂಕ್ರಾಂತಿ ವೇಳೆಗೆ ರಿಲೀಸ್ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಭೀಮ್ಸ್ ಸೆಸಿರೋಲಿಯೋ ಅವರ ಸಂಗೀತ, ಸಾಯಿಶ್ರೀರಾಂ ಅವರ ಛಾಯಾಗ್ರಹಣ, ಬಿ. ವಾಸುದೇವರೆಡ್ಡಿ ಅವರ ಕಥೆ, ಮಾಸ್ತಿ ಅವರ ಸಂಭಾಷಣೆಯಲ್ಲಿ ‘ಜಾತರೆ’ ಸಿನಿಮಾ ಮೂಡಿಬರಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.