ಬೆಂಗಳೂರು: ಕನ್ನಡಿಗರ ಕಣ್ಮಣಿ ಪುನೀತ್ ರಾಜಕುಮಾರ್ ಕಣ್ಮರೆಯಾಗಿ ಇಂದಿಗೆ ಆರು ದಿವಸ ಸಂದಿವೆ. ಅಭಿಮಾನಿಗಳಿಗೆ ಅಪ್ಪು ದರ್ಶನಕ್ಕೆ ಅವಕಾಶ ಮಾಡಿಕೊಡುವುದಾಗಿ ಈ ಹಿಂದೆ ತಿಳಿಸಲಾಗಿತ್ತು. ಅದರಂತೆ, ಇಂದಿನಿಂದ ಅಭಿಮಾನಿಗಳಿಗೆ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ನೆಚ್ಚಿನ ನಟನ ಸಮಾಧಿ ಸಮೀಪಕ್ಕೆ ತೆರಳಿ ನಮಸ್ಕರಿಸಲು ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆಯಿಂದಲೇ ಸಾರ್ವಜನಿಕ ದರ್ಶನಕ್ಕೆ ಅನುಮತಿ ನೀಡಲಾಗಿದ್ದು, ಬೆಳಿಗ್ಗೆ 9 ರಿಂದ ಸಂಜೆ 6ರವರೆಗೂ ದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಭದ್ರತೆಯ ನಡುವೆಯೇ ಅಭಿಮಾನಿಗಳಿಗೆ ಸಮಾಧಿ ದರ್ಶನಕ್ಕೆ ಅನುವು ಮಾಡಿಕೊಡಲಾಗಿದ್ದು, ಅಹಿತಕರ ಘಟನೆಗಳಾಗದಂತೆ ತಡೆಯಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪೊಲೀಸರ ಜೊತೆ, ಕೆಎಸ್ಆರ್ಪಿ, ಆರ್.ಎ.ಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಅಭಿಮಾನಿಗಳ ಸಂಖ್ಯೆ ಕಡಿಮೆಯಾಗುವವರೆಗೂ ಬಿಗಿ ಭದ್ರತೆ ಮುಂದುವರಿಯಲಿದೆ.
ಇಂದು ಅಪ್ಪು ಸಮಾಧಿ ದರ್ಶನ ಪಡೆಯಲು ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ದರ್ಶನಕ್ಕೆ ಕಾದಿದ್ದರು. ಮುಂಜಾನೆ 9 ಗಂಟೆಯಿಂದ ದರ್ಶನ ಪ್ರಾರಂಭ ಎಂಬ ಸುದ್ದಿ ತಿಳಿದು, ಬೇಗ ದರ್ಶನಕ್ಕೆ ಬಿಡುವಂತೆ ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ. 9 ಗಂಟೆಗೆ ಇನ್ನೂ ಜನ ಹೆಚ್ಚಾಗಲಿದೆ. ಈಗಲೇ ಒಳಗೆ ಬಿಡಿ ಎಂದು ಅಭಿಮಾನಿಗಳು ಪಟ್ಟುಹಿಡಿದಿದ್ದಾರೆ.
ನವೆಂಬರ್ 16ಕ್ಕೆ ನಡೆಯಲಿದೆ ‘ಪುನೀತ್ ನಮನ’ ಕಾರ್ಯಕ್ರಮ; ಚಲನಚಿತ್ರ ವಾಣಿಜ್ಯ ಮಂಡಳಿ ಅದ್ಯಕ್ಷ ಜಯರಾಜ್ ಮಾಹಿತಿ
ಅಗಲಿದ ಪುನೀತ್ಗೆ ಚಿತ್ರರಂಗದ ವತಿಯಿಂದ ನಮನ ಸಲ್ಲಿಸುವ ಉದ್ದೇಶದಿಂದ ‘ಪುನೀತ್ ನಮನ’ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅದ್ಯಕ್ಷ ಜಯರಾಜ್ ಮಾಹಿತಿ ನೀಡಿದ್ದಾರೆ. ನವೆಂಬರ್ 16ರಂದು ‘ಪುನೀತ್ ನಮನ’ ಕಾರ್ಯಕ್ರಮವು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಕರ್ನಾಟಕ ಸೇರಿದಂತೆ ಹಲವು ಚಿತ್ರೋದ್ಯಮದ ಗಣ್ಯರನ್ನ ಕರೆದು ಕಾರ್ಯಕ್ರಮ ಮಾಡೋ ಯೋಜನೆ ನಡೆದಿದೆ.
ಚಲನಚಿತ್ರ ವಾಣಿಜ್ಯ ಮಂಡಳಿ ಅದ್ಯಕ್ಷ ಜಯರಾಜ್ ಮಾತನಾಡಿರುವ ವಿಡಿಯೋ ವರದಿ ಇಲ್ಲಿದೆ:
ಇದನ್ನೂ ಓದಿ:
ಪುನೀತ್ ರಾಜಕುಮಾರ್ ಅವರಿಗೆ ರೀಯಲ್ ಲೈಫ್ನಲ್ಲಂತೆ ರೀಲ್ ಲೈಫ್ನಲ್ಲೂ ಓಡಿಸಿದ್ದು ಥರಾವರಿ ಬೈಕ್ಗಳು