ಚಿನ್ನ ಕಳ್ಳ ಸಾಗಣೆ ಕೇಸ್: ರನ್ಯಾ ರಾವ್ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದ ಪ್ರಭಾವಿ ವ್ಯಕ್ತಿಗಳು

ದುಬೈನಿಂದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಚಿನ್ನವನ್ನು ಅಕ್ರಮವಾಗಿ ಭಾರತಕ್ಕೆ ತಂದ ಆರೋಪದಲ್ಲಿ ರನ್ಯಾ ರಾವ್ ತನಿಖೆ ಎದುರಿಸುತ್ತಿದ್ದಾರೆ. ಈ ದಂಧೆಯಲ್ಲಿ ಅವರ ಜೊತೆ ಇನ್ನೂ ಅನೇಕ ಪ್ರಭಾವಿಗಳು ಭಾಗಿ ಆಗಿರುವ ಶಂಕೆ ವ್ಯಕ್ತವಾಗಿದೆ. ರನ್ಯಾ ಅವರ ಸ್ನೇಹಿತ ತರುಣ್ ಬಂಧನ ಆಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದ್ದು, ಹಲವರ ಹೆಸರು ಹೊರಬರುವ ಸಾಧ್ಯತೆ ಇದೆ.

ಚಿನ್ನ ಕಳ್ಳ ಸಾಗಣೆ ಕೇಸ್: ರನ್ಯಾ ರಾವ್ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದ ಪ್ರಭಾವಿ ವ್ಯಕ್ತಿಗಳು
Ranya Rao

Updated on: Mar 10, 2025 | 3:49 PM

ನಟಿ ರನ್ಯಾ ರಾವ್ (Ranya Rao) ಅವರು ಅಕ್ರಮ ಚಿನ್ನ ಸಾಗಾಣಿಕೆ (Gold Smuggling) ವೇಳೆ ಡಿಆರ್​ಐ ಅಧಿಕಾರಿಗಳ ಬಲೆಗೆ ಬಿದ್ದಿದ್ದು, ತನಿಖೆ ತೀವ್ರಗೊಂಡಿದೆ. ರನ್ಯಾ ಅವರು ಒಬ್ಬರೇ ಈ ಕೃತ್ಯ ಮಾಡಿರಲು ಸಾಧ್ಯವಿಲ್ಲ. ಅವರ ಜೊತೆ ಅನೇಕ ಪ್ರಭಾವಿಗಳು ನಂಟು ಹೊಂದಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಉದ್ಯಮಿ ತರುಣ್ ಕೊಂಡೂರು ರಾಜು ಬಂಧನ ಆಗಿದೆ. ಪಂಚತಾರಾ ಹೋಟೆಲ್ ಮಾಲೀಕನ ತಮ್ಮನ ಮಗ ಈ ತರುಣ್. ರನ್ಯಾ ಮತ್ತು ತರುಣ್ ಅವರು ವರ್ಷಗಳಿಂದ ಸ್ನೇಹಿತರಾಗಿದ್ದರು. ರನ್ಯಾ ರಾವ್ ಮೂಲಕ ತರುಣ್ ರಾಜು ಅಕ್ರಮವಾಗಿ ಚಿನ್ನ ತರಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.

ಅಧಿಕಾರಿಗಳು ರನ್ಯಾ ರಾವ್ ಅವರ ಮೊಬೈಲ್ ಮತ್ತು ಲ್ಯಾಪ್​ಟಾಪ್​ನಲ್ಲಿ ಇರುವ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ರನ್ಯಾ ಮೊಬೈಲ್​ನಲ್ಲಿ ರಾಜಕೀಯ ನಾಯಕರ ಮತ್ತು ಪೊಲೀಸ್ ಅಧಿಕಾರಿಗಳ ಸಂಪರ್ಕ ಸಂಖ್ಯೆಗಳು ಪತ್ತೆಯಾಗಿವೆ. ಆ ಪೈಕಿ ಕೆಲವರ ಜೊತೆ ಅವರು ನಿರಂತರ ಸಂಪರ್ಕದಲ್ಲಿ ಇದ್ದರು ಎಂಬುದು ಅಧಿಕಾರಿಗಳಿಗೆ ತಿಳಿದುಬಂದಿದೆ.

ಈ ಕೇಸ್​ನಲ್ಲಿ ಸಚಿವರೊಬ್ಬರ ಕೈವಾಡ ಇದೆ ಎಂಬ ಆರೋಪ ಕೂಡ ಕೇಳಿಬಂದಿದೆ. ತನಿಖೆ ನಡೆದಂತೆಲ್ಲ ಹಲವು ಸತ್ಯಗಳು ಹೊರಬರುತ್ತಿವೆ. ರನ್ಯಾ ಅವರನ್ನು ಡಿಆರ್​ಐ ಅಧಿಕಾರಿಗಳು ಕಸ್ಟಡಿಗೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಇಂದು (ಮಾರ್ಚ್​ 10) ಡಿಆರ್​ಐ ಕಸ್ಟಡಿ ಅಂತ್ಯವಾಗಲಿದೆ. ಸಂಜೆ ಅವರನ್ನು ಕೋರ್ಟ್​ ಮುಂದೆ ಹಾಜರುಪಡಿಸಲಾಗುವುದು. ಮತ್ತೆ ಅವರನ್ನು ಡಿಆರ್​ಐ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ.

ಇದನ್ನೂ ಓದಿ
ಅಪ್ಪ ಪೋಲಿಸ್.. ಮಗಳು ಕಳ್ಳಿ.. ನಟಿ ರನ್ಯಾ ಚಿನ್ನದ ರಹಸ್ಯ!
ನಟಿ ರನ್ಯಾ ಚಿನ್ನ ಸ್ಮಗ್ಲಿಂಗ್​ನಲ್ಲಿ ಮಲತಂದೆ ಡಿಜಿಪಿಯ ಕೈವಾಡವೂ ಇತ್ತೇ?
ರನ್ಯಾ ರಾವ್ ಪ್ರಕರಣ, ಚಿನ್ನ, ನಗದು ಸೇರಿ 17.29 ಕೋಟಿ ಪತ್ತೆ
ಚಿನ್ನ ಕಳ್ಳಸಾಗಣೆ: ಮಾರ್ಚ್ 18ರವರೆಗೆ ನಟಿ ರನ್ಯಾ ರಾವ್​ಗೆ ನ್ಯಾಯಾಂಗ ಬಂಧನ

ರನ್ಯಾ ರಾವ್ ಭಾಗಿ ಆಗಿರುವ ಗೋಲ್ಡ್ ಸ್ಮಗ್ಲಿಂಗ್ ಜಾಲ ತುಂಬ ದೊಡ್ಡದಾಗಿದೆ. ಹವಾಲಾ ಹಣದ ಮೂಲಕ ಈ ವ್ಯವಹಾರ ನಡೆಸುತ್ತಿದ್ದರು ಎಂಬುದು ತಿಳಿದುಬಂದಿದೆ. ಹವಾಲಾ ಮೂಲಕ ದುಬೈಗೆ ರನ್ಯಾ ರಾವ್ ಹಣ ಸಾಗಿಸುತ್ತಿದ್ದರು. ದುಬೈನಿಂದ ಗೋಲ್ಡ್ ರೂಪದಲ್ಲಿ ಚಿನ್ನ ತರುತ್ತಿದ್ದರು. ಹವಾಲಾ ಮೂಲದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದರ ಹಿಂದೆ ಯಾರ ಕೈವಾಡವಿದೆ ಎಂಬುದರ ಬಗ್ಗೆ ಡಿಆರ್​ಐ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಗೋಲ್ಡ್ ಸ್ಮಗ್ಲಿಂಗ್ ಹಿಂದಿರೋ ಸಚಿವರು ಯಾರು? ಸದನದಲ್ಲೂ ಸದ್ದು ಮಾಡಿದ ರನ್ಯಾ ರಾವ್ ಕೇಸ್

ಭಾರತಕ್ಕೆ ಚಿನ್ನ ತಂದ ಬಳಿಕ ಅದನ್ನು ರನ್ಯಾ ರಾವ್ ಯಾರಿಗೆ ನೀಡುತ್ತಿದ್ದರು ಎಂಬುದು ಕೂಡ ಪತ್ತೆ ಆಗಬೇಕಿದೆ. ತನಿಖೆ ವೇಳೆ ರನ್ಯಾ ಅವರು ಸೂಕ್ತವಾಗಿ ಸಹಕರಿಸುತ್ತಿಲ್ಲ ಎಂಬ ಮಾಹಿತಿ ಕೂಡ ಇದೆ. ‘ನಾನು ಟ್ರ್ಯಾಪ್ ಆಗಿದ್ದೇನೆ. ನನ್ನನ್ನು ಬ್ಲ್ಯಾಕ್ ಮೇಲ್ ಮಾಡಲಾಗಿದೆ. ಈ ಹಿಂದೆ ನಾನು ಯಾವತ್ತೂ ಈ ರೀತಿ ಮಾಡಿಲ್ಲ’ ಎಂದಷ್ಟೇ ಅವರು ಹೇಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.