ಬಹುನಿರೀಕ್ಷಿತ ‘ಕೊರಗಜ್ಜ’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಲಿರುವ ಗೋಪಿ ಸುಂದರ್

|

Updated on: Jan 07, 2024 | 3:06 PM

‘ಕೊರಗಜ್ಜ’ ಚಿತ್ರಕ್ಕೆ ಹಿನ್ನೆಲೆ ಸಂಗೀತದ ಜೊತೆಗೆ ಎಲ್ಲ ಹಾಡುಗಳನ್ನು ಗೋಪಿ ಸುಂದರ್​ ಅವರು ಹೊಸದಾಗಿ ಕಂಪೋಸ್​ ಮಾಡುತ್ತಿದ್ದಾರೆ. ಬಹುಕೋಟಿ ಬಜೆಟ್​ನಲ್ಲಿ ತ್ರಿವಿಕ್ರಮ ಸಪಲ್ಯ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಸುಧೀರ್ ಅತ್ತಾವರ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಬಹುನಿರೀಕ್ಷಿತ ‘ಕೊರಗಜ್ಜ’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಲಿರುವ ಗೋಪಿ ಸುಂದರ್
ಸುಧೀರ್ ಅತ್ತಾವರ, ಗೋಪಿ ಸುಂದರ್​
Follow us on

ಅನೇಕ ಕಾರಣಗಳಿಂದಾಗಿ ಕೊರಗಜ್ಜ’ ಸಿನಿಮಾ (Koragajja Movie) ಕೌತುಕ ಮೂಡಿಸಿದೆ. ಈ ಸಿನಿಮಾ ಸೆಟ್ಟೇರಿದಾಗಿನಿಂದಲೂ ಸಾಕಷ್ಟು ಅಡೆತಡೆಗಳು ಉಂಟಾಗಿವೆ. ಅವುಗಳನ್ನೆಲ್ಲ ನಿವಾರಿಸಿಕೊಂಡು ಚಿತ್ರತಂಡ ಮುನ್ನುಗ್ಗುತ್ತಿದೆ. ಮೊದಲು ಈ ಸಿನಿಮಾದ ಹೆಸರು ಬದಲಾಯಿತು. ಬಳಿಕ ಸಾಕಷ್ಟು ಬದಲಾವಣೆಗಳು ಆದವು. ಹಲವಾರು ಬಾರಿ ಮರು ಚಿತ್ರೀಕರಣ ಮಾಡಿದ್ದೂ ಉಂಟು! ಈಗ ಸಿನಿಮಾದ ಸಂಗೀತ ಕೂಡ ಬದಲಾಗಿದೆ. ಹೌದು, ‘ಕೊರಗಜ್ಜ’ (Koragajja) ಚಿತ್ರತಂಡಕ್ಕೆ ಸಂಗೀತ ನಿರ್ದೇಶಕರಾಗಿ ಗೋಪಿ ಸುಂದರ್​ (Gopi Sundar) ಸೇರ್ಪಡೆ ಆಗಿದ್ದಾರೆ. ಈ ಹೊಸ ಮಾಹಿತಿಯನ್ನು ಚಿತ್ರತಂಡದವರು ಹಂಚಿಕೊಂಡಿದ್ದಾರೆ.

ಸುಧೀರ್ ಅತ್ತಾವರ ಅವರು ‘ಕೊರಗಜ್ಜ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಸಂಗೀತದ ವಿಚಾರದಲ್ಲಿ ಈ ಸಿನಿಮಾ ತಂಡ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಚಿತ್ರಕ್ಕಾಗಿ ಈವರೆಗೆ ಸಿದ್ಧಗೊಂಡಿದ್ದ ಸಂಗೀತವನ್ನೇ ಸಂಪೂರ್ಣವಾಗಿ ಬದಲಾಯಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ದಕ್ಷಿಣ ಭಾರತದ ಖ್ಯಾತ ಮ್ಯೂಸಿಕ್​ ಡೈರೆಕ್ಟರ್​ ಗೋಪಿ ಸುಂದರ್ ಅವರ ಈಗ ‘ಕೊರಗಜ್ಜ’ ಸಿನಿಮಾಗೆ ಸಂಗೀತ ನೀಡಲಿದ್ದಾರೆ.

‘ಕೊರಗಜ್ಜ’ ಚಿತ್ರಕ್ಕೆ ಹಿನ್ನೆಲೆ ಸಂಗೀತದ ಜೊತೆಗೆ ಎಲ್ಲ ಹಾಡುಗಳನ್ನು ಗೋಪಿ ಸುಂದರ್​ ಅವರು ಹೊಸದಾಗಿ ಕಂಪೋಸ್​ ಮಾಡುತ್ತಿದ್ದಾರೆ. ಬಹುಕೋಟಿ ಬಜೆಟ್​ನಲ್ಲಿ ತ್ರಿವಿಕ್ರಮ ಸಪಲ್ಯ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ‘ತ್ರಿವಿಕ್ರಮ ಸಿನಿಮಾಸ್ ’ ಹಾಗೂ ‘ಸಕ್ಸಸ್ ಫಿಲ್ಮ್ಸ್​’ ಬ್ಯಾನರ್ ಮೂಲಕ ‘ಕೊರಗಜ್ಜ’ ಚಿತ್ರ ತಯಾರಾಗುತ್ತಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಲಿದ್ದು, ‘ಆರ್​ಆರ್​ಆರ್​’, ‘ಪುಷ್ಪ’ ಮುಂತಾದ ಯಶಸ್ವಿ ಸಿನಿಮಾಗಳ ತಂತ್ರಜ್ಞರು ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ: ‘ಕೊರಗಜ್ಜ’ ಸಿನಿಮಾ ಶೂಟಿಂಗ್​ಗೆ ಗೂಂಡಾಗಳ ಅಡ್ಡಿ; ಚಿತ್ರೀಕರಣ ಸ್ಥಗಿತಗೊಳಿಸಿದ ತಂಡ

ಈ ಚಿತ್ರದಲ್ಲಿ ಬಾಲಿವುಡ್​ನ ಹಿರಿಯ ನಟ ಕಬೀರ್ ಬೇಡಿ ಅಭಿನಯಿಸುತ್ತಿರುವುದು ವಿಶೇಷ. ಸಂದೀಪ್ ಸೋಪರ್ಕರ್, ಗಣೇಶ್ ಆಚಾರ್ಯ, ಭವ್ಯ, ಶ್ರುತಿ ಮುಂತಾದ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಹೊಸ ನಟಿ ಋತಿಕ ಅವರು ಕೊರಗಜ್ಜನ ತಾಯಿ ಕೊರೊಪೊಳು ಪಾತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪರಿಚಯಗೊಳ್ಳುತ್ತಿದ್ದಾರೆ. ಅಂದಾಜು 800 ವರ್ಷಗಳ ಹಿಂದಿನ ಕಥೆ ‘ಕೊರಗಜ್ಜ’ ಸಿನಿಮಾದಲ್ಲಿ ಇರಲಿದೆ.

ಇದನ್ನೂ ಓದಿ:  ಮಂಗಳೂರು: ಕೊರಗಜ್ಜ ಕವಿತೆಗಳಲ್ಲಿನ ಆಕ್ಷೇಪಾರ್ಹ ಪದಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಮಾರ್ಚ್ ತಿಂಗಳ ಕೊನೆ ವಾರದಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂಬ ಗುರಿ ಇಟ್ಟುಕೊಂಡು ಚಿತ್ರತಂಡ ಕಾರ್ಯನಿರತವಾಗಿದೆ. ಜೀತ್ ಜೊಸ್ಸಿ ಹಾಗೂ ವಿದ್ಯಾಧರ್ ಶೆಟ್ಟಿ ಅವರು ಈ ಸಿನಿಮಾಗೆ ಸಂಕಲನ ಮಾಡುತ್ತಿದ್ದಾರೆ. ಮನೋಜ್ ಪಿಳ್ಳೈ ಮತ್ತು ಪವನ್ ವಿ. ಛಾಯಾಗ್ರಹಣ ಈ ಚಿತ್ರಕ್ಕಿದೆ. ಸುಧೀರ್ ಅತ್ತಾವರ್ ಅವರು ಕಲಾ ನಿರ್ದೇಶನ ಹಾಗೂ ಬಿಬಿನ್ ದೇವ್ ಅವರು ಸೌಂಡ್ ಡಿಸೈನಿಂಗ್ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ