ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಮರಣ ವಾರ್ತೆಯನ್ನು ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಪುನೀತ್ ನಿಧನದಿಂದ ಅವರ ಅಭಿಮಾನಿಗಳು ಶಾಕ್ಗೆ ಒಳಗಾಗಿದ್ದಾರೆ. ಅವರು ಮೃತಪಟ್ಟು ಒಂದೂವರೆ ತಿಂಗಳು ಕಳೆಯುತ್ತಾ ಬಂದರೂ ನೋವು ಎಂಬುದು ಕಿಂಚಿತ್ತೂ ಕಡಿಮೆ ಆಗುತ್ತಿಲ್ಲ. ಪುನೀತ್ಗೆ ಕರ್ನಾಟಕ ಮಾತ್ರವಲ್ಲದೆ ಪರಭಾಷೆಯಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಬೇರೆ ರಾಜ್ಯಗಳಲ್ಲೂ ಪುನೀತ್ಗೆ ನಮನ ಸಲ್ಲಿಸುವ ಕಾರ್ಯ ನಡೆದಿದೆ. ಕನ್ನಡ ಚಿತ್ರರಂಗ ಮಾತ್ರವಲ್ಲದೆ ಪರಭಾಷೆಯಲ್ಲಿರುವ ಅಭಿಮಾನಿಗಳು ಕೂಡ ಪುನೀತ್ ಅವರನ್ನು ನೆನೆಯುತ್ತಿದ್ದಾರೆ. ಅವರ ಮೇಲಿನ ಅಭಿಮಾನವನ್ನು ನಾನಾ ರೀತಿಯಲ್ಲಿ ವ್ಯಕ್ತಪಡಿಸಲಾಗುತ್ತಿದೆ. ಕೆಲವರು ಪುನೀತ್ ದಾರಿಯಲ್ಲಿ ಸಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ. ಸಾಕಷ್ಟು ಮಂದಿ ಆಂಧ್ರ ಪ್ರದೇಶದಲ್ಲಿ ಪುನೀತ್ ಅವರ ಪ್ರತಿಮೆ ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ, ಅಲ್ಲಿನ ಶಿಲ್ಪಿಗಳಿಗೆ ಸಾಕಷ್ಟು ಆರ್ಡರ್ಗಳು ಬರುತ್ತಿವೆ.
ಪುನೀತ್ ರಾಜ್‌ಕುಮಾರ್ ಭೌತಿಕವಾಗಿ ನಮ್ಮ ನಡುವೆ ಇಲ್ಲದಿದ್ದರೂ ಕೋಟಿ ಜನರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅವರ ಒಳ್ಳೆಯತನ, ಅವರು ಕೈಗೊಂಡ ಸೇವಾ ಕಾರ್ಯಕ್ರಮಗಳು ಅವರನ್ನು ಈಗಲೂ ನೆನಪಿಸಿಕೊಳ್ಳುವಂತೆ ಮಾಡಿದೆ. ಎಲ್ಲಾ ಏರಿಯಾಗಳಲ್ಲಿ ಪುನೀತ್ ಪ್ರತಿಮೆ ಸ್ಥಾಪಿಸಲು ಆಸಕ್ತಿ ತೋರಿದ್ದಾರೆ. ಆಂಧ್ರ ಪ್ರದೇಶದಲ್ಲೂ ಈ ರೀತಿ ಮಾಡಲಾಗುತ್ತಿದೆ. ಇಲ್ಲಿನ ಗುಂಟೂರು ಜಿಲ್ಲೆಯ ತೆನಾಲಿ ಜಿಲ್ಲೆಯ ಶಿಲ್ಪಿ ಕಾಟೂರಿ ವೆಂಕಟೇಶ್ವರರಾವ್ ಅವರಿಗೆ ಪುನೀತ್ ಪ್ರತಿಮೆ ನಿರ್ಮಾಣಕ್ಕೆ ಭಾರೀ ಆರ್ಡರ್ಗಳು ಬರುತ್ತಿವೆ.
ವೆಂಕಟೇಶ್ವರ್ ಅವರು ಮಕ್ಕಳಾದ ರವಿಚಂದ್ರನ್ ಮತ್ತು ಶ್ರೀ ಹರ್ಷಲಾ ಜತೆ ಸೇರಿ 3ಡಿ ಪ್ರಿಂಟಿಂಗ್ ತಂತ್ರಜ್ಞಾನದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಪ್ರತಿಮೆಗಳನ್ನು ತಯಾರಿಸುತ್ತಿದ್ದಾರೆ. ಅಭಿಮಾನಿಗಳ ಆಸೆಯಂತೆ 3ಡಿ ತಂತ್ರಜ್ಞಾನದಿಂದ ಮೂರ್ತಿಗಳ ತಯಾರಿಕೆ ಆರಂಭವಾಗಿದೆ. ಈ ತಂತ್ರಜ್ಞಾನದಿಂದ 3 ಇಂಚುಗಳಿಂದ ಹಿಡಿದು 100 ಅಡಿವರೆಗೆ ಮೂರ್ತಿಗಳನ್ನು ತಯಾರಿಸಬಹುದು. ಇದರಿಂದ ಸಿದ್ಧಪಡಿಸಿದ ಮೂರ್ತಿಗಳು ತುಂಬಾನೇ ಅದ್ಭುತವಾಗಿ ಮೂಡಿ ಬರುತ್ತವೆ. ಈಗ ಪುನೀತ್ ಅವರ ಪ್ರತಿಮೆ ನಿರ್ಮಾಣಕ್ಕೆ ಸಾಕಷ್ಟು ಆರ್ಡರ್ ಬರುತ್ತಿದ್ದು, ಇವರು ಹಗಲು ರಾತ್ರಿ ಎನ್ನದೇ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಗ್ರಾಹಕರ ಬೇಡಿಕೆಯನ್ನು ಈಡೇರಿಸಲು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ: ಪುನೀತ್ ನಿಧನದ ಬಳಿಕ ರಾಘಣ್ಣ ನಟನೆಯ ಮೊದಲ ಚಿತ್ರ ‘ರಾಜಿ’; ಮುಹೂರ್ತದ ವೇಳೆ ಭಾವುಕ ಮಾತು
ಮ್ಯೂಸಿಯಂ ಆಗಲಿದೆ ಡಾ. ರಾಜ್ ಆಡಿ ಬೆಳೆದ ಮನೆ; ಪುನೀತ್ ಆಸೆ ಈಡೇರಿಸಲು ಕುಟುಂಬದ ನಿರ್ಧಾರ