ಹೊಂಬಾಳೆ ಫಿಲ್ಮ್ಸ್ (Hombale Films) ಇಂದು ಭಾರತದ ಟಾಪ್ ನಿರ್ಮಾಣ ಸಂಸ್ಥೆಗಳಲ್ಲಿ ಒಂದು. ಕನ್ನಡ ಮಾತ್ರವೇ ಅಲ್ಲದೆ ಹಲವಾರು ಭಾಷೆಗಳಲ್ಲಿ ಸಿನಿಮಾಗಳನ್ನು ನಿರ್ಮಿಸುತ್ತಿದೆ. ಭಾರಿ ಅದ್ಧೂರಿ ಸಿನಿಮಾಗಳ ಜೊತೆಗೆ ಕಂಟೆಂಟ್ ಹೊಂದಿರುವ, ಸಮಾಜಮುಖಿ ಸಿನಿಮಾಗಳನ್ನು ಸಹ ನಿರ್ಮಾಣ ಮಾಡುತ್ತಿದೆ. ‘ರಾಜಕುಮಾರ’, ‘ಕೆಜಿಎಫ್’, ‘ಕಾಂತಾರ’, ‘ಸಲಾರ್’ ಮೂಲಕ ಭಾರಿ ಲಾಭವನ್ನು ಕಂಡು ಮುನ್ನುಗ್ಗುತ್ತಿರುವ ಹೊಂಬಾಳೆ ಸಿನಿಮಾ ನಿರ್ಮಾಣ ಪ್ರಾರಂಭಿಸಿ ಹತ್ತು ವರ್ಷಗಳಾಗಿವೆ. ಈ ಸಮಯದಲ್ಲಿ ಹೊಂಬಾಳೆ ಶುರುವಾಗಿದ್ದು ಹೇಗೆಂಬುದರ ಬಗ್ಗೆ ಸಣ್ಣ ವಾಕ್ಯದಲ್ಲಿ ಹೊಂಬಾಳೆ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹೇಳಿಕೊಂಡಿದೆ.
ಇಂದು ಒಮ್ಮೆಲೆ ಸಾವಿರಾರು ಕೋಟಿ ಹಣವನ್ನು ಸಿನಿಮಾಗಳ ಮೇಲೆ ಹೂಡಿರುವ ಹೊಂಬಾಳೆ, ಸಿನಿಮಾ ನಿರ್ಮಾಣ ಪ್ರಾರಂಭ ಮಾಡಿದ್ದು, ಪುನೀತ್ ರಾಜ್ಕುಮಾರ್ ನಟಿಸಿದ್ದ ‘ನಿನ್ನಿಂದಲೇ’ ಸಿನಿಮಾದ ಮೂಲಕ. ಆ ಸಿನಿಮಾ ಭಾರಿ ಹಿಟ್ ಆಗದಿದ್ದರೂ ಸಹ, ಸಿನಿಮಾ ನಿರ್ಮಾಣವನ್ನು ಮುಂದುವರೆಸುವ ಭರವಸೆಯನ್ನು ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ನೀಡಿತು. ಆ ಭರವಸೆಯಿಂದಲೇ ಮುಂದುವರೆದ ವಿಜಯ್ ಕಿರಗಂದೂರು ಇಂದು ಭಾರತದ ಹಲವು ಭಾಷೆಗಳಲ್ಲಿ ಹಲವು ಸ್ಟಾರ್ಗಳೊಟ್ಟಿಗೆ ಒಟ್ಟೊಟ್ಟಿಗೆ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ.
ಇದನ್ನೂ ಓದಿ:ಮಲ್ಟಿಪ್ಲೆಕ್ಸ್ಗಳ ವಿರುದ್ಧ ಸಿಡಿದೆದ್ದ ಹೊಂಬಾಳೆ, ಸರಣಿ ಟ್ವೀಟ್ ಮಾಡಿದ ಪಿವಿಆರ್ ಸಿಇಒ
ಹೊಂಬಾಳೆ ಸಿನಿಮಾ ನಿರ್ಮಾಣ ಸಂಸ್ಥೆ ಪ್ರಾರಂಭವಾಗಿ ಹತ್ತು ವರ್ಷಗಳಾದ ಸಂದರ್ಭದಲ್ಲಿ ಆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಹೊಂಬಾಳೆ, ‘ನಿನ್ನಿಂದಲೆ’ ಸಿನಿಮಾದ ಚಿತ್ರವನ್ನು ಹಂಚಿಕೊಂಡಿರುವ ಜೊತೆಗೆ ‘ಅಪ್ಪುರವರ ಅಪ್ಪುಗೆ ಇಂದ ಶುರುವಾದ ನಮ್ಮ ಕನಸಿನ ಪಯಣಕ್ಕಿಂದು ದಶಕದ ಸಂಭ್ರಮ’ ನಾವು ಪುನೀತ್ ರಾಜ್ಕುಮಾರ್ ಅವರಿಗೆ ಸದಾ ಚಿರಋಣಿಗಳಾಗಿರುತ್ತೇವೆ ಹಾಗೂ ಸಿನಿಮಾಗಳನ್ನು ವೀಕ್ಷಿಸಿ ಬೆಂಬಲ ನೀಡುತ್ತಿರುವ ಪ್ರೇಕ್ಷಕರಿಗೂ ನಾವು ಸದಾ ಋಣಿ’ ಎಂದಿದ್ದಾರೆ.
ಹೊಂಬಾಳೆ ಫಿಲ್ಮ್ಸ್, ಕಾಲ ಕಾಲಕ್ಕೆ ಅಪ್ಪು ಅವರನ್ನು ನೆನೆಯುತ್ತಲೇ ಇರುತ್ತದೆ. ‘ನಿನ್ನಂದಲೆ’ ಸಿನಿಮಾದ ಜೊತೆಗೆ ಶುರುವಾದ ಹೊಂಬಾಳೆ ಹಾಗೂ ಅಪ್ಪು ಸಂಬಂಧ ‘ರಾಜಕುಮಾರ’, ‘ಯುವರಾಜ’ ಸಿನಿಮಾದ ವರೆಗೆ ಮುಂದುವರೆಯಿತು. ಹೊಂಬಾಳೆ ಹಾಗೂ ಅಪ್ಪು ಹೊಸದೊಂದು ಸಿನಿಮಾ ಘೋಷಣೆ ಮಾಡಿದ್ದರು. ಸಿನಿಮಾಕ್ಕೆ ‘ದ್ವಿತ್ವ’ ಎಂದು ಹೆಸರಿಡಲಾಗಿತ್ತು. ಆದರೆ ಆ ಸಿನಿಮಾ ಸೆಟ್ಟೇರುವ ಮುನ್ನವೇ ಅಪ್ಪು ನಿಧನ ಹೊಂದಿದರು. ಇದೀಗ ಅಪ್ಪು ಅವರಿಗಾಗಿ ಮಾಡಿದ್ದ ಕತೆಯನ್ನೇ ತುಸು ಬದಲಿಸಿ ಯುವ ರಾಜ್ಕುಮಾರ್ ಅವರಿಗಾಗಿ ‘ಯುವ’ ಹೆಸರಿನ ಸಿನಿಮಾ ನಿರ್ಮಾಣ ಮಾಡುತ್ತಿದೆ ಹೊಂಬಾಳೆ.
ಹೊಂಬಾಳೆ ಪ್ರಸ್ತುತ ಕನ್ನಡದಲ್ಲಿ ‘ಬಘೀರ’, ‘ಯುವ’, ‘ರಿಚರ್ಡ್ ಆಂಟೊನಿ’, ‘ಕಾಂತಾರ 2’ ಸಿನಿಮಾಗಳನ್ನು ನಿರ್ಮಿಸುತ್ತಿದೆ. ಮಲಯಾಳಂನಲ್ಲಿ ‘ಟೈಸನ್’, ತಮಿಳಿನಲ್ಲಿ ‘ರಘುತಾತ’ ಸಿನಿಮಾಗಳಿಗೆ ಬಂಡವಾಳ ಹೂಡಿದೆ. ಹಿಂದಿಯಲ್ಲಿ ಅಕ್ಷಯ್ ಕುಮಾರ್ ಜೊತೆಗೆ ಸಿನಿಮಾ ಮಾಡಲು ಚರ್ಚೆ ಪ್ರಗತಿಯಲ್ಲಿದೆ. ಜೂ ಎನ್ಟಿಆರ್ ಜೊತೆಗೂ ಸಹ ಸಿನಿಮಾ ಮಾಡಲು ಮಾತುಕತೆ ನಡೆಯುತ್ತಿದೆ. ಇದೆಲ್ಲದರ ಜೊತೆಗೆ ‘ಕೆಜಿಎಫ್ 3’ ಸಿನಿಮಾ ಸಹ ಘೋಷಣೆ ಮಾಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ