ಹಿಂದಿ ಹೇರಿಕೆ ವಿರುದ್ಧ ಕೀರ್ತಿ ಹೋರಾಟ: ಹೊಂಬಾಳೆಯ ತಮಿಳು ಸಿನಿಮಾ ಟೀಸರ್ ಬಿಡುಗಡೆ
Hombale Films: ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡಿರುವ ಮೊದಲ ತಮಿಳು ಸಿನಿಮಾದ ಟೀಸರ್ ಇದೀಗ ಬಿಡುಗಡೆ ಆಗಿದೆ. ಸಿನಿಮಾ ‘ಹಿಂದಿ ಹೇರಿಕೆ’ ವಿರುದ್ಧ ಸಂದೇಶ ಹೊಂದಿದೆ.
ಕರ್ನಾಟಕದ ಹೆಮ್ಮೆಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಮ್ಸ್ (Hombale Films) ಕನ್ನಡ ಸಿನಿಮಾಗಳು ಮಾತ್ರವೇ ಅಲ್ಲದೆ ಹಲವು ಭಾಷೆಗಳ ಸಿನಿಮಾಗಳ ಮೇಲೆ ಏಕಕಾಲದಲ್ಲಿ ಬಂಡವಾಳ ಹೂಡಿದೆ. ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡಿರುವ ಬಹುಕೋಟಿ ಪ್ಯಾನ್ ಇಂಡಿಯಾ ಸಿನಿಮಾ ‘ಸಲಾರ್’ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಆಗಿದೆ. ‘ಸಲಾರ್’ ಸಿನಿಮಾದ ಗೆಲುವಿನ ಖುಷಿಯನ್ನು ಚಿತ್ರತಂಡ ಆಚರಿಸುತ್ತಿರುವಾಗಲೇ ಹೊಂಬಾಳೆ ನಿರ್ಮಾಣದ ಹೊಸ ತಮಿಳು ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು ಗಮನ ಸೆಳೆಯುತ್ತಿದೆ.
ಹೊಂಬಾಳೆ ನಿರ್ಮಾಣ ಮಾಡಿರುವ ಮೊದಲ ತಮಿಳು ಸಿನಿಮಾ ‘ರಘುತಾತ’ ಟೀಸರ್ ಇದೀಗ ಬಿಡುಗಡೆ ಆಗಿದ್ದು, ಸಿನಿಮಾಕ್ಕೆ ಆಯ್ಕೆ ಸೂಕ್ಷ್ಮ ವಿಷಯ ಆಯ್ದುಕೊಂಡಿರುವುದು ಆದರೆ ಅದನ್ನು ಲವಲವಿಕೆಯಿಂದ ಪ್ರೆಸೆಂಟ್ ಮಾಡಿರುವುದು ಟೀಸರ್ನಿಂದ ಕಂಡು ಬರುತ್ತಿದೆ. ಸಿನಿಮಾದ ಕತೆಯು ಹಿಂದಿ ಹೇರಿಕೆಯ ವಿರುದ್ಧ ಇದೆ. ಸಿನಿಮಾದಲ್ಲಿ ಕೀರ್ತಿ ಸುರೇಶ್, ಹಿಂದಿ ಹೇರಿಕೆ ವಿರೋಧಿ ಹೋರಾಟಗಾರ್ತಿಯಾಗಿ ನಟಿಸಿದ್ದಾರೆ. ಸಿನಿಮಾ ರೆಟ್ರೋ ಕಾಲದಲ್ಲಿ ನಡೆಯುವ ಕತೆ ಒಳಗೊಂಡಿದೆ.
ಇದನ್ನೂ ಓದಿ:ಮಲ್ಟಿಪ್ಲೆಕ್ಸ್ಗಳ ವಿರುದ್ಧ ಸಿಡಿದೆದ್ದ ಹೊಂಬಾಳೆ, ಸರಣಿ ಟ್ವೀಟ್ ಮಾಡಿದ ಪಿವಿಆರ್ ಸಿಇಒ
ದಕ್ಷಿಣ ಭಾರತದ ರಾಜ್ಯಗಳು ದಶಕಗಳಿಂದಲೂ ಹಿಂದಿ ಹೇರಿಕೆಯ ವಿರುದ್ಧ ದನಿ ಎತ್ತುತ್ತಲೇ ಬಂದಿವೆ. ತಮಿಳುನಾಡಿನಲ್ಲಿ ಈ ಬಗ್ಗೆ ದೊಡ್ಡ ಆಂಧೊಲದ ದಶಕಗಳ ಹಿಂದೆಯೇ ನಡೆದಿತ್ತು. ಅದೇ ವಿಷಯವನ್ನು ಇರಿಸಿಕೊಂಡು ‘ರಘುತಾತ’ ಹೆಸರಿನ ಸಿನಿಮಾವನ್ನು ಹೊಂಬಾಳೆ ನಿರ್ಮಿಸಿದೆ. ಕೀರ್ತಿ ಸುರೇಶ್ ಸಿನಿಮಾದ ನಾಯಕಿಯಾಗಿ ನಟಿಸಿದ್ದು, ವಿದ್ಯಾರ್ಥಿನಿಯಾಗಿ ನಂತರ ಶಿಕ್ಷಕಿಯಾಗಿ ಹೋರಾಟಗಾರ್ತಿಯಾಗಿ ಅವರ ಪಾತ್ರ ಹಿಂದಿ ಹೇರಿಕೆಯ ವಿರುದ್ಧ ಮಾಡಿದ ಹೋರಾಟ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ಮರ್ಡರ್ ಮಿಸ್ಟರಿ, ಲವ್ ಸ್ಟೋರಿ, ತಾತ-ಮೊಮ್ಮಗಳ ಭಾವುಕ ಸಂಬಂಧದ ಎಳೆಗಳು ಸಹ ಇವೆಯೆಂಬುದನ್ನು ಟೀಸರ್ ಹೇಳುತ್ತಿದೆ.
‘ರಘು ತಾತ’ ಸಿನಿಮಾದಲ್ಲಿ ಕೀರ್ತಿ ಸುರೇಶ್ ಜೊತೆಗೆ ಎಂಎಸ್ ಭಾಸ್ಕರ್, ರವೀಂದ್ರ ವಿಜಯ್ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾ ಬರೆದು ನಿರ್ದೇಶನ ಮಾಡಿರುವುದು ಸುಮನ್ ಕುಮಾರ್, ಸಿನಿಮಾಕ್ಕೆ ಸಂಗೀತ ನೀಡಿರುವುದು ಸೀನ್ ರೋಲ್ಡನ್. ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿಲ್ಲ, ಆದರೆ ಟೀಸರ್ನ ಅಂತ್ಯದಲ್ಲಿ ಶೀಘ್ರವೇ ಬಿಡುಗಡೆ ಆಗಲಿದೆ ಎಂದು ಹೇಳಲಾಗಿದೆ.
ಹೊಂಬಾಳೆ ಪ್ರಸ್ತುತ ಕನ್ನಡದ ‘ಬಘೀರ’, ‘ಯುವ’, ‘ಕಾಂತಾರ 2’, ರಕ್ಷಿತ್ ಶೆಟ್ಟಿ ನಿರ್ದೇಶನದ ‘ರಿಚರ್ಡ್ ಆಂಟೊನಿ’ ಸಿನಿಮಾಗಳ ಮೇಲೆ ಬಂಡವಾಳ ಹೂಡಿದೆ. ಮಲಯಾಳಂನ ‘ಟೈಸನ್’ ಸಿನಿಮಾ ನಿರ್ಮಿಸುತ್ತಿದೆ. ಅಕ್ಷಯ್ ಕುಮಾರ್ ಜೊತೆ ಹಿಂದಿ ಸಿನಿಮಾ ನಿರ್ಮಾಣ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಎನ್ಟಿಆರ್ಗಾಗಿ ಹೊಸ ಸಿನಿಮಾ ನಿರ್ಮಿಸುವ ಆಲೋಚನೆಯೂ ನಿರ್ಮಾಣ ಸಂಸ್ಥೆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:02 pm, Sat, 13 January 24