ಚಿಕ್ಕಣ್ಣನ ಹೇಳಿಕೆಯಿಂದ ಪೊಲೀಸರಿಗೆ ತಿಳಿದಿದ್ದು ಏನು? ವಾದ ಮಂಡಿಸಿದ ಎಸ್‌ಪಿಪಿ
ದರ್ಶನ್ ಮತ್ತು ಗ್ಯಾಂಗ್ನವರು ಆರೋಪಿಗಳಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿವರಗಳು ಬೆಚ್ಚಿ ಬೀಳಿಸುವಂತಿವೆ. ಜಾಮೀನು ಪಡೆಯಲು ಆರೋಪಿಗಳ ಪರ ವಕೀಲರು ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ನಡೆದಿದೆ. ಪೊಲೀಸರ ಪರವಾಗಿ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ವಾದ ಮಾಡಿದ್ದಾರೆ. ಚಿಕ್ಕಣ್ಣನ ಹೇಳಿಕೆ ಬಗ್ಗೆಯೂ ಉಲ್ಲೇಖ ಆಗಿದೆ.
ರೇಣುಕಾಸ್ವಾಮಿ ಹತ್ಯೆ ನಡೆದ ದಿನ ದರ್ಶನ್ ಕೆಲವರನ್ನು ಭೇಟಿ ಆಗಿದ್ದರು. ಅಂಥವರ ಪೈಕಿ ಚಿಕ್ಕಣ್ಣ ಕೂಡ ಇದ್ದರು. ಆ ಕಾರಣದಿಂದ ಅವರನ್ನು ಪೊಲೀಸರು ತನಿಖೆಗೆ ಒಳಪಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಣನ ಹೇಳಿಕೆಯನ್ನು ಪಡೆಯಲಾಗಿತ್ತು. ಅದಕ್ಕೆ ಇದ್ದ ನಿರ್ದಿಷ್ಟ ಕಾರಣ ಏನು ಎಂಬುದು ತಿಳಿದುಬಂದಿದೆ. ‘ಎ3 ಪವನ್ ಶೆಡ್‌ನಿಂದ ಸ್ಟೋನಿ ಬ್ರೂಕ್‌ಗೆ ಬಂದು ದರ್ಶನ್ ಜತೆ ಮಾತನಾಡಿದ್ದ. ಇದಕ್ಕೆ ಸಾಕ್ಷಿಯಾಗಷ್ಟೇ ನಟ ಚಿಕ್ಕಣ್ಣ ಹೇಳಿಕೆ ಪಡೆಯಲಾಗಿದೆ. ದರ್ಶನ್ ಕಿವಿಯಲ್ಲಿ ಪವನ್ ಮಾತನಾಡಿದ ಬಗ್ಗೆ ಚಿಕ್ಕಣ್ಣ ಅವರ ಹೇಳಿಕೆಯಿದೆ. ಅಲ್ಲಿಂದ ದರ್ಶನ್ ತೆರಳಿರುವುದಕ್ಕೆ ಸಿಸಿಟಿವಿ ದೃಶ್ಯಗಳ ಸಾಕ್ಷಿಯಿದೆ’ ಎಂದು ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಾಡಿದ್ದಾರೆ.
ಪೊಲೀಸರೇ ಸಾಕ್ಷಿ ಸೃಷ್ಟಿಸಲು ಪ್ರಯತ್ನಿಸಿದ್ದರು ಎಂದು ದರ್ಶನ್ ಪರ ವಕೀಲರು ಈ ಮೊದಲು ವಾದ ಮಾಡಿದ್ದರು. ಅದಕ್ಕೆ ಎಸ್‌ಪಿಪಿ ಈಗ ಉತ್ತರಿಸಿದ್ದಾರೆ. ‘ದರ್ಶನ್ ಬಟ್ಟೆ, ಶೂನಲ್ಲಿ ರೇಣುಕಾಸ್ವಾಮಿ ರಕ್ತದ ಡಿಎನ್ಎ ಪತ್ತೆಯಾಗಿದೆ. ಕೊಲೆ ನಡೆದ ಸ್ಥಳದ ಮಣ್ಣಿನಲ್ಲೂ ಡಿಎನ್‌ಎ ಪತ್ತೆಯಾಗಿದೆ. ಪೋಸ್ಟ್ ಮಾರ್ಟಮ್ ಮಾಡಿದ್ದ ವೈದ್ಯರು ರೇಣುಕಾಸ್ವಾಮಿಯ ರಕ್ತವಿದ್ದ ಸೀಲ್ ಮಾಡಿದ ಬಾಟಲ್ ಕಳುಹಿಸಿದ್ದಾರೆ. ಡಿಎನ್‌ಎ ಮ್ಯಾಚ್ ಮಾಡಲು ಇದನ್ನು ಸಂಗ್ರಹಿಸಲಾಗಿದೆ. ಇದರಲ್ಲಿ ತನಿಖೆ ಮಾಡಿದ ಪೊಲೀಸರ ಪಾತ್ರವೇನಿಲ್ಲ. FSLನವರು ಆ ಬಾಟಲ್‌ನಿಂದ ರಕ್ತ ಹಾಕಿದ್ದಾರೆಂಬ ವಾದ ಒಪ್ಪಲಾಗುವುದಿಲ್ಲ’ ಎಂದು ಎಸ್‌ಪಿಪಿ ಹೇಳಿದ್ದಾರೆ.
ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ಉಲ್ಲೇಖಿಸಿಲ್ಲ ಎಂದು ದರ್ಶನ್ ಪರ ವಕೀಲರು ಹೇಳಿದ್ದರು. ಆದರೆ ಕೇಸ್ ಡೈರಿಯನ್ನು ಮ್ಯಾಜಿಸ್ಟ್ರೇಟ್‌ಗೆ ನೀಡಲಾಗಿತ್ತು ಎಂದು ಎಸ್‌ಪಿಪಿ ವಾದಿಸಿದ್ದಾರೆ. ಕೃತ್ಯಕ್ಕೆ ಪೂರಕವಾಗಿ ತಾಂತ್ರಿಕ ಸಾಕ್ಷ್ಯಗಳನ್ನೂ ಕಲೆ ಹಾಕಲಾಗಿದೆ. ಆರೋಪಿಗಳು ಫೋಟೋಗಳು, ರೆಕಾರ್ಡಿಂಗ್ ಡಿಲೀಟ್ ಮಾಡಿದ್ದಾರೆ. ವಾಹನವನ್ನು ಕ್ಲೀನ್ ಮಾಡಿದ್ದಾರೆ, ಬಟ್ಟೆ ಒಗೆದಿದ್ದಾರೆ. ಇವೆಲ್ಲವೂ ಸಾಕ್ಷ್ಯಾಧಾರ ನಾಶದ ಪ್ರಯತ್ನಗಳು. ಕುಕ್ಕಿ ಕುಕ್ಕಿ ಬಟ್ಟೆ ಒಗೆದರೂ ಡಿಎನ್‌ಎ ಅವರನ್ನು ಬಿಟ್ಟಿಲ್ಲ’ ಎಂದಿದ್ದಾರೆ ಎಸ್‌ಪಿಪಿ.
ಇದನ್ನೂ ಓದಿ: ಎದೆಗೂಡಿನ 17 ಮೂಳೆ ಮುರಿದಿವೆ; ಕೊಲೆ ಎನ್ನಲು ಹಲವು ಸಾಕ್ಷ್ಯಗಳಿವೆ: ಎಸ್‌ಪಿಪಿ ವಾದ
‘ದರ್ಶನ್ ತಾನು ಧರಿಸಿದ್ದ ಎಲ್ಲ ವಸ್ತುಗಳನ್ನು ತೋರಿಸುತ್ತೇನೆ ಎಂದಿದ್ದರು. ದರ್ಶನ್ ಏನು ಹೇಳಿದ್ದರೋ ಅದನ್ನೇ ದಾಖಲಿಸಿದ್ದೇವೆ. ದರ್ಶನ್ ಹೀಗೆಯೇ ಹೇಳಬೇಕೆಂದು ತನಿಖಾಧಿಕಾರಿ ಸೂಚಿಸಲಾಗುವುದಿಲ್ಲ. ಚಪ್ಪಲಿ ಎಂದಿದೆ, ಶೂ ಏಕೆ ರಿಕವರಿ ಮಾಡಿದ್ರಿ ಎಂದು ಅವರ ಪರ ವಕೀಲರು ಪ್ರಶ್ನಿಸಿದ್ದಾರೆ. ಆದರೆ ದರ್ಶನ್ ಹೇಳಿದ್ದನ್ನಷ್ಟೇ ಕಾನೂನು ಪ್ರಕಾರ ದಾಖಲಿಸಿದ್ದೇವೆ. ರಿಕವರಿಗಾಗಿ ಮನೆಗೆ ತೆರಳಿದಾಗ ಆ ಶೂಗಳು ಇರಲಿಲ್ಲ. ಕಾಸ್ಟ್ಯೂಮ್ ಅಸಿಸ್ಟೆಂಟ್ ರಾಜು ತೆಗೆದುಕೊಂಡು ಹೋಗಿದ್ದಾಗಿ ಹೇಳುತ್ತಾರೆ. ರಾಜು ಮನೆಗೆ ಹೋಗಿ ಕರೆ ಮಾಡಿ ಕೇಳಿದಾಗ ಪತ್ನಿಗೆ ನೀಡಿರುವುದಾಗಿ ಮಾಹಿತಿ ತಿಳಿಸಿದರು. ದರ್ಶನ್ ಪತ್ನಿಗೆ ಕರೆ ಮಾಡಿದಾಗ ಶೂಗಳನ್ನು ನೀಡಿರುತ್ತಾರೆ. ಈ ಶೂನಲ್ಲಿ ಶೆಡ್‌ನ ಮಣ್ಣು, ರೇಣುಕಾಸ್ವಾಮಿ ರಕ್ತದ ಕಲೆ ಸಿಕ್ಕಿದೆ’ ಎಂದು ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ವಾದ ಮಾಡಿದ್ದಾರೆ.
ಟಿ-ಶರ್ಟ್, ಪ್ಯಾಂಟ್ ವಾಷ್ ಮಾಡಲಾಗಿತ್ತು. ಆದರೂ ರಕ್ತದ ಕಲೆ ಹೇಗೆ ಸಿಗಲು ಸಾಧ್ಯ ಎಂಬ ದರ್ಶನ್ ಪರ ವಕೀಲರ ವಾದಕ್ಕೆ ಎಸ್‌ಪಿಪಿ ಉತ್ತರಿಸಿದ್ದಾರೆ. ಈ ಬಗ್ಗೆ ವೈಜ್ಞಾನಿಕ ಸಂಶೋಧನೆಯ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿದೆ. ‘ಬಟ್ಟೆ ಒಗೆದ ನಂತರ ಡಿಎನ್ಎ ಸಿಗುತ್ತದೆಯೇ ಎಂಬುದಕ್ಕೆ ಸಂಶೋಧನೆ ಇದೆ. ಲಾಂಡ್ರಿ ಡಿಟರ್ಜೆಂಟ್‌ನಲ್ಲಿ ಒಗೆದು ಸಂಶೋಧನೆ ಮಾಡಲಾಗಿದೆ. 60 ಡಿಗ್ರಿ, 90 ಡಿಗ್ರಿ ತಾಪಮಾನಗಳಲ್ಲಿ ಬಟ್ಟೆ ಒಗೆದು ಸಂಶೋಧನೆ ನಡೆಸಲಾಗಿದೆ. ಆದರೂ ಇಂತಹ ಬಟ್ಟೆಗಳಲ್ಲಿ ರಕ್ತದ ಡಿಎನ್‌ಎ ಪತ್ತೆಯಾಗಿರುವ ಫಲಿತಾಂಶವಿದೆ. ಬರಿಗಣ್ಣಿನಲ್ಲಿ ಕಾಣದ ರಕ್ತದ ಕಲೆಗಳು ಡಿಎನ್‌ಎಯಲ್ಲಿ ಪತ್ತೆಯಾಗುತ್ತವೆ. ನೈಲಾನ್ ಬಟ್ಟೆ, ಕಾಟನ್ ಬಟ್ಟೆಗಳಲ್ಲಿ ಅಧ್ಯಯನ ನಡೆಸಲಾಗಿದೆ. ವ್ಯಾನಿಷ್, ಬ್ಲೀಚ್‌ಗಳನ್ನು ಮಾಡಿಯೂ ವರದಿ ಪಡೆಯಲಾಗಿದೆ. ಬಟ್ಟೆ ಒಗೆದಾಗ ಸಿಲ್ಕ್ ಬಟ್ಟೆಯಲ್ಲಿ ಡಿಎನ್‌ಎ ಪ್ರಮಾಣ ಕಡಿಮೆಯಾಗುತ್ತದೆ. ಕಾಟನ್ ಬಟ್ಟೆಗೆ ಹೋಲಿಸಿದರೆ ಸಿಲ್ಕ್ ಬಟ್ಟೆಯಲ್ಲಿ ಕಡಿಮೆ ಪತ್ತೆಯಾಗುತ್ತದೆ’ ಎಂದು ಪ್ರಸನ್ನ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ದರ್ಶನ್ ಮಧ್ಯಂತರ ಜಾಮೀನು ಅವಧಿ ವಿಸ್ತರಣೆ; ದಾಸನಿಗೆ ತಾತ್ಕಾಲಿಕ ರಿಲೀಫ್
ದರ್ಶನ್ ಕಳುಹಿಸಿದ್ದ ಹಣವನ್ನು ರಿಕವರಿ ಮಾಡಲಾಗಿದೆ. ಆರೋಪಿಗಳ ಬಳಿಯಿಂದ ದರ್ಶನ್ ಹಣ ರಿಕವರಿ ಮಾಡಲಾಗಿದೆ. ಜೂನ್ 10ರಂದು ಎ15, ಎ16, ಎ17 ಸರೆಂಡರ್ ಆದರು. ಎ14 ಇವರೆಲ್ಲರನ್ನೂ ಡ್ರಾಪ್ ಮಾಡಿ ಹೊರಟುಹೋದ. ನಂತರ ಘಟನೆ ಬಗ್ಗೆ ಆರೋಪಿಗಳು ಬಾಯಿಬಿಟ್ಟರು. ಎ4 ಕರೆತಂದು ವಿಚಾರಣೆ ನಡೆಸಿದಾಗ ಘಟನೆ ಬಗ್ಗೆ ಬಾಯಿಬಿಟ್ಟ. ಇಂಥ ಹಲವು ವಿವರನ್ನು ಎಸ್‌ಪಿಪಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ವಾದ ಪ್ರತಿವಾದ ಆಲಿಸಿರುವ ಹೈಕೋರ್ಟ್ ಆದೇಶ ಕಾಯ್ದಿರಿಸಿದೆ. ದರ್ಶನ್ ಅವರ ಮಧ್ಯಂತರ ಜಾಮೀನು ಅವಧಿ ಸದ್ಯಕ್ಕೆ ವಿಸ್ತರಣೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.