ಪರಪ್ಪನ ಅಗ್ರಹಾರದಲ್ಲಿ ಇರುವ ದರ್ಶನ್ ಅವರನ್ನು ನಿರ್ದೇಶಕ ತರುಣ್ ಸುಧೀರ್ ಇಂದು (ಜುಲೈ 19) ಭೇಟಿ ಆಗಿದ್ದಾರೆ. ದರ್ಶನ್ ಅರೆಸ್ಟ್ ಆದ ಬಳಿಕ ಇದೇ ಮೊದಲ ಬಾರಿಗೆ ತರುಣ್ ಬಂದು ನೋಡಿದ್ದಾರೆ. ಇಬ್ಬರ ನಡುವೆ ಹಲವು ವರ್ಷಗಳಿಂದ ಆತ್ಮೀಯತೆ ಇದೆ. ಇನ್ನೇನು ಕೆಲವೇ ದಿನಗಳಲ್ಲಿ ತರುಣ್ ಸುಧೀರ್ ಅವರು ನಟಿ ಸೋನಲ್ ಮಾಂಥೆರೋ ಜೊತೆ ಮದುವೆ ಆಗಲಿದ್ದಾರೆ. ಆ ಮದುವೆಗೆ ತಾವು ಕೂಡ ಬರುವುದಾಗಿ ದರ್ಶನ್ ಭರವಸೆ ನೀಡಿದ್ದಾರೆ ಎಂದು ತರುಣ್ ಹೇಳಿದ್ದಾರೆ. ಪರಪ್ಪನ ಅಗ್ರಹಾರದಿಂದ ಹೊರಬಂದ ಬಳಿಕ ತರುಣ್ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
‘ದರ್ಶನ್ ಅವರಿಗೆ ಸ್ವಲ್ಪ ಹುಷಾರಿರಲಿಲ್ಲ. ವಾತಾವರಣ ಬದಲಾವಣೆಯಿಂದ ಆ ರೀತಿ ಆಗಿತ್ತು. ಈಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ನನ್ನನ್ನು ಯಾವಾಗಲೂ ನಗುತ್ತ ಮಾತನಾಡಿಸುವ ರೀತಿಯೇ ಇಂದು ಕೂಡ ಮಾತಾಡಿದರು. ಅವರಿಗೆ ಹೋಲಿಸಿದರೆ ನಾವೇ ವೀಕ್ ಆಗಿದ್ದೇವೆ. ಅವರ ಆರೋಗ್ಯದ ಬಗ್ಗೆ ವಿಚಾರಿಸಿದೆ. ಆರಾಮಾಗಿದ್ದೇನೆ ಮಗನೆ ಅಂತ ಹೇಳಿದ್ರು’ ಎಂದಿದ್ದಾರೆ ತರುಣ್ ಸುಧೀರ್.
ಇದನ್ನೂ ಓದಿ: ದರ್ಶನ್ ಯಾಕೆ ಜೈಲಿನಲ್ಲೇ ಇರಬೇಕು? ಪೊಲೀಸರು ನೀಡಿದ 30 ಕಾರಣಗಳು ಇಲ್ಲಿವೆ..
‘ನನ್ನ ಮದುವೆ ಬಗ್ಗೆ ದರ್ಶನ್ ಅವರಿಗೆ ಮೊದಲೇ ಗೊತ್ತಿತ್ತು. ಈ ವಿಚಾರದಲ್ಲಿ ನನಗೆ ಮೊದಲಿನಿಂದಲೂ ತೊಳಲಾಟ ಇತ್ತು. ಯಾವುದೇ ಕಾರಣಕ್ಕೂ ಮದುವೆ ದಿನಾಂಕ ಬದಲಾಯಿಸಬೇಡ ಅಂತ ಅವರು ಹೇಳಿದ್ದಾರೆ. ‘ನಾನು ಬಂದೇ ಬರ್ತೀನಿ’ ಎನ್ನುವ ನಂಬಿಕೆ ಅವರಲ್ಲಿ ಇದೆ. ದರ್ಶನ್ ಏನೂ ತಪ್ಪು ಮಾಡಿಲ್ಲ ಎಂಬ ನಂಬಿಕೆಯಲ್ಲೇ ನಾವು ಕೂಡ ಇದ್ದೇವೆ. ಹಾಗೆಯೇ ಆಗಲಿ ಅಂತ ಪ್ರಾರ್ಥಿಸುತ್ತೇವೆ’ ಎಂದಿದ್ದಾರೆ ತರುಣ್.
‘ನನ್ನ ಮದುವೆಗೆ ಬರಲು ವಿಶೇಷ ಅನುಮತಿ ಇದೆಯೋ ಇಲ್ಲವೋ ಎಂಬ ನನಗೆ ತಿಳಿದಿಲ್ಲ. ಮದುವೆ ದಿನಾಂಕಕ್ಕೂ ಮೊದಲೇ ದರ್ಶನ್ ಅವರು ಹೊರಗೆ ಬರುತ್ತಾರೆ ಎಂಬ ನಂಬಿಕೆ ನನಗೆ ಇದೆ. ಇಂದು ಆಮಂತ್ರಣ ಪತ್ರಿಕೆ ನೀಡಲು ಸಾಧ್ಯವಾಗಿಲ್ಲ. ಯಾಕೆಂದರೆ ಜೈಲಿನ ಒಳಗೆ ಏನನ್ನೂ ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಹೋಗಿ ಆಶೀರ್ವಾದ ಪಡೆದುಕೊಂಡು ಬಂದಿದ್ದೇನೆ’ ಎಂದು ತರುಣ್ ಸುಧೀರ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.