
ನಟ ದರ್ಶನ್ (Darshan Thoogudeepa) ಅವರು ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾರೆ. ಹಾಗಿದ್ದರೂ ಕೂಡ ‘ದಿ ಡೆವಿಲ್’ (The Devil) ಸಿನಿಮಾದ ಕೆಲಸಗಳನ್ನು ಮುಂದುವರಿಸಲು ಚಿತ್ರತಂಡ ತೀರ್ಮಾನಿಸಿದೆ. ಪ್ರಚಾರದ ಮೊದಲ ಹಂತವಾಗಿ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡನ್ನು ಬಿಡುಗಡೆ ಮಾಡಲಾಗಿದೆ. ಈ ಹಾಡಿನ ಬಗ್ಗೆ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಮೊದಲೇ ಈ ಸಾಂಗ್ ರಿಲೀಸ್ ಆಗಿರಬೇಕಿತ್ತು. ಆದರೆ ದರ್ಶನ್ಗೆ ನೀಡಿದ್ದ ಜಾಮೀನು ರದ್ದಾದ ಹಿನ್ನೆಲೆಯಲ್ಲಿ ಹಾಡಿನ ಬಿಡುಗಡೆಯನ್ನು ಮುಂದೂಡಲಾಗಿತ್ತು. ಆದರೆ ಈಗ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ (Idre Nemdiyaag Irbek) ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ದರ್ಶನ್ ಅವರು ಜೈಲಿನಲ್ಲಿ ಇದ್ದಾರೆ ಎಂಬ ಬೇಸರ ಅಭಿಮಾನಿಗಳಿಗೆ ಇದೆ. ಆ ಬೇಸರದ ನಡುವೆಯೂ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡನ್ನು ಫ್ಯಾನ್ಸ್ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಟೈಟಲ್ ಕಾರಣದಿಂದಲೇ ಈ ಹಾಡಿನ ಬಗ್ಗೆ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಾಗಿತ್ತು. ಹಾಡು ಹೇಗಿರಬಹುದು ಎಂಬ ಕೌತುಕ ಬಹಳ ಇತ್ತು. ಎಲ್ಲದಕ್ಕೂ ಈಗ ಉತ್ತರ ಸಿಕ್ಕಿದೆ.
ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಕೆಲಸ ಮಾಡಿರುವ ಜನಪ್ರಿಯ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ‘ದಿ ಡೆವಿಲ್’ ಸಿನಿಮಾಗೆ ಸಂಗೀತ ನೀಡಿದ್ದಾರೆ. ದರ್ಶನ್ ಅವರು ತಮ್ಮ ವೈಯಕ್ತಿಕ ಜೀವನದ ವೈರಲ್ ಆಡಿಯೋದಲ್ಲಿ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಎಂಬ ಮಾತನ್ನು ಹೇಳಿದ್ದರು. ಅದೇ ಮಾತನ್ನು ಇಟ್ಟುಕೊಂಡು ಹಾಡು ಸಿದ್ಧಪಡಿಸಲಾಗಿದೆ.
ಪ್ರಕಾಶ್ ವೀರ್ ಅವರು ‘ದಿ ಡೆವಿಲ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ‘ವಿಲನ’, ‘ತಾರಕ್’ ಮುಂತಾದ ಸಿನಿಮಾಗಳನ್ನು ಮಾಡಿದ್ದ ಅವರು ಈಗ ಪಕ್ಕಾ ಮಾಸ್ ಕಥೆಯನ್ನು ಪ್ರೇಕ್ಷಕರ ಎದುರು ತರಲು ಸಜ್ಜಾಗಿದ್ದಾರೆ. ದರ್ಶನ್ ಜೊತೆ ರಚನಾ ರೈ, ಶರ್ಮಿಳಾ ಮಾಂಡ್ರೆ ಮುಂತಾದವರು ‘ದಿ ಡೆವಿಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ಕೊನೆ ಹಂತದ ಕೆಲಸಗಳಲ್ಲಿ ಚಿತ್ರತಂಡ ತೊಡಗಿಕೊಂಡಿದೆ.
ಇದನ್ನೂ ಓದಿ: ಜೈಲು ಕೊಠಡಿಯಿಂದ ಹೊರಗೆ ಕಾಲು ಇಡುವಂತಿಲ್ಲ ದರ್ಶನ್: ದಾಸನಿಗೆ ಹೆಚ್ಚಿದ ಸಂಕಷ್ಟ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರಿಗೆ ಈ ಮೊದಲು ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿತ್ತು. ಆಗ ‘ದಿ ಡೆವಿಲ್’ ಸಿನಿಮಾದ ಶೂಟಿಂಗ್ ಮತ್ತು ಡಬ್ಬಿಂಗ್ ಕೆಲಸಗಳನ್ನು ಅವರು ಮುಗಿಸಿಕೊಟ್ಟರು. ಒಂದು ವೇಳೆ ಜಾಮೀನು ರದ್ದಾದರೂ ಸಿನಿಮಾಗೆ ತೊಂದರೆ ಆಗಬಾರದು ಎಂಬುದು ಅವರ ಉದ್ದೇಶ ಆಗಿತ್ತು. ಜಾಮೀನು ವಜಾ ಆದ ಬಳಿಕ ಅವರು ಮತ್ತೆ ಜೈಲು ವಾಸ ಅನುಭವಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.