ಕರಣ್ ಜೋಹರ್​ ನಿರ್ಮಾಣದ ಸಿನಿಮಾದಲ್ಲಿ ಇಂದ್ರಜಿತ್​ ಲಂಕೇಶ್​ ಪುತ್ರ ಸಮರ್ಜಿತ್

‘ಗೌರಿ’ ಸಿನಿಮಾದ ಮೂಲಕ ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್ ಅವರು ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಅವರ ನಟನೆಗೆ ವೀಕ್ಷಕರಿಂದ ಮೆಚ್ಚುಗೆ ಸಿಕ್ಕಿತು. ಆ ಸಿನಿಮಾಗೆ ಸ್ವತಃ ಇಂದ್ರಜಿತ್​ ಲಂಕೇಶ್​ ನಿರ್ದೇಶನ ಮಾಡಿದ್ದರು. ಈಗ ಸಮರ್ಜಿತ್​ ಲಂಕೇಶ್​ ಅವರ ಮುಂದಿನ ಹಾದಿ ಹಿರಿದಾಗಿದೆ. ಅವರಿಗೆ ಬಾಲಿವುಡ್​ನಿಂದ ಆಫರ್​ ಬಂದಿದೆ ಎಂಬುದು ವಿಶೇಷ.

ಕರಣ್ ಜೋಹರ್​ ನಿರ್ಮಾಣದ ಸಿನಿಮಾದಲ್ಲಿ ಇಂದ್ರಜಿತ್​ ಲಂಕೇಶ್​ ಪುತ್ರ ಸಮರ್ಜಿತ್
ಸಮರ್ಜಿತ್​ ಲಂಕೇಶ್​

Updated on: Sep 24, 2024 | 8:12 PM

ನಟ ಸಮರ್ಜಿತ್​ ಲಂಕೇಶ್​ ಅವರು ನೋಡಲು ಬಾಲಿವುಡ್​ ಹೀರೋ ರೀತಿಯೇ ಇದ್ದಾರೆ ಎಂಬುದು ಹಲವು ಅಭಿಮಾನಿಗಳ ಅಭಿಪ್ರಾಯ. ಮೊದಲ ಸಿನಿಮಾ ‘ಗೌರಿ’ ನೋಡಿದ ಅನೇಕರು ಈ ರೀತಿ ಅನಿಸಿಕೆ ತಿಳಿಸಿದರು. ಅಭಿನಯ, ಡ್ಯಾನ್ಸ್​, ಫೈಟ್​ ನೋಡಿದರೆ ಬಾಲಿವುಡ್​ನ​ ಸ್ಟಾರ್​ ಕಿಡ್ ರೀತಿಯೇ ಕಾಣುತ್ತಾರೆ ಸಮರ್ಜಿತ್​ ಲಂಕೇಶ್​ ಎಂದು ಜನರು ಮಾತನಾಡುತ್ತಿದ್ದಂತೆಯೇ ನೇರ ಬಾಲಿವುಡ್​ನಿಂದ ಅವರಿಗೆ ಅವಕಾಶ ಹರಿದು ಬಂದಿದೆ. ಅದು ಕೂಡ ಪ್ರತಿಷ್ಠಿತ ‘ಧರ್ಮ ಪ್ರೊಡಕ್ಷನ್ಸ್​’ ಮೂಲಕ!

‘ಗೌರಿ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಇತ್ತೀಚೆಗೆ ಸಮರ್ಜಿತ್ ಅವರಿಗೆ ‘ಲುಮಿಯರ್ ನ್ಯಾಷನಲ್ ಅವಾರ್ಡ್’ ನೀಡಲಾಗಿದೆ. ಈ ಪ್ರಶಸ್ತಿ ಪಡೆದ ಖುಷಿಯಲ್ಲಿರುವ ಅವರು ಬಾಲಿವುಡ್‌ಗೆ ಹಾರಲು ತಯಾರಾಗಿದ್ದಾರೆ. ಹಿಂದಿ ಮಾತ್ರವಲ್ಲದೇ ತೆಲುಗು ಹಾಗೂ ತಮಿಳಿನಿಂದನೂ ಅವರಿಗೆ ಅವಕಾಶಗಳು ಸಿಗುತ್ತಿವೆ. ಆ ಮೂಲಕ ಪರಭಾಷೆಯ ಚಿತ್ರರಂಗದ ಕಡೆಗೆ ಸಮರ್ಜಿತ್ ಅವರು ಗಮನ ಹರಿಸುತ್ತಿದ್ದಾರೆ. ಆ ಬಗ್ಗೆ ಮಾಹಿತಿ ಸಿಕ್ಕಿದೆ.

ಹಿಂದಿ ಸಿನಿಮಾರಂಗದ ದೊಡ್ಡ ಪ್ರೊಡಕ್ಷನ್ ಹೌಸ್ ಜೊತೆ ಸಮರ್ಜಿತ್‌ ಅವರು ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಖ್ಯಾತ ನಿರ್ಮಾಪಕ ಕರಣ್ ಜೋಹರ್ ಒಡೆತನದ ‘ಧರ್ಮ ಪ್ರೊಡಕ್ಷನ್’ ನಿರ್ಮಾಣ ಮಾಡಲಿರುವ ಸಿನಿಮಾದಲ್ಲಿ ಸಮರ್ಜಿತ್ ಲಂಕೇಶ್​ ನಟಿಸುತ್ತಾರೆ ಎಂಬ ಸುದ್ದಿ ಕೇಳಿಬಂದಿದೆ. ಈಗಾಗಲೇ ಅವರಿಗೆ ‘ಧರ್ಮ ಪ್ರೊಡಕ್ಷನ್’ ಕಡೆಯಿಂದ ಕರೆ ಬಂದಿದೆ. ಮಾತುಕತೆ ಸಲುವಾಗಿ ಅವರು ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ.

ಇದನ್ನೂ ಓದಿ: Gowri Movie Review: ಸಮರ್ಜಿತ್​ ಲಂಕೇಶ್​ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾದ ‘ಗೌರಿ’ ಸಿನಿಮಾ

ಕರಣ್ ಜೊಹರ್ ಸಂಸ್ಥೆಯ ಜೊತೆ ಸಮರ್ಜಿತ್ ಮಾತುಕತೆ ಮಾಡಿದ್ದು, ಹಿಂದಿಯಲ್ಲಿ ಸಿನಿಮಾ ಮಾಡುವುದು ಬಹುತೇಕ ಖಚಿತವಾಗಿದೆ ಎನ್ನಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕರಣ್ ಜೋಹರ್ ಅವರು ಬಾಲಿವುಡ್​ ಮಾತ್ರವಲ್ಲದೇ ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಒಂದುವೇಳೆ, ಸಮರ್ಜಿತ್ ನಟನೆಯ ಸಿನಿಮಾಗೆ ಅವರು ಬಂಡವಾಳ ಹೂಡಿದರೆ ಇದೇ ಮೊದಲ ಬಾರಿಗೆ ಅವರು ಕನ್ನಡದ ನಟನ ಸಿನಿಮಾವನ್ನು ನಿರ್ಮಾಣ ಮಾಡಿದಂತಾಗಲಿದೆ. ‘ಧರ್ಮ ಪ್ರೊಡಕ್ಷನ್’ ಮಾತ್ರವಲ್ಲದೇ ಕಾಲಿವುಡ್​ ಖ್ಯಾತ ನಿರ್ಮಾಣ ಸಂಸ್ಥೆಯಾದ ‘ಲೈಕಾ ಪ್ರೊಡಕ್ಷನ್ಸ್​’ ಜೊತೆಗೂ ಸಮರ್ಜಿತ್ ಅವರು ಮಾತುಕಥೆ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us