ರಮೇಶ್​ ಅರವಿಂದ್​ಗೆ ಅವಮಾನ: ‘ಒಬ್ಬ ಮಾಡಿದ ತಪ್ಪಿಗೆ ತೆಲುಗು ಚಿತ್ರರಂಗ ಹೊಣೆಯಲ್ಲ’: ಅಲ್ಲು ಅರ್ಜುನ್​ ತಂದೆ ಪ್ರತಿಕ್ರಿಯೆ

|

Updated on: Dec 04, 2023 | 9:43 PM

ಡಿಸೆಂಬರ್​ 2ರಂದು ಗೋವಾದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು. ತೆಲುಗಿನ ಪತ್ರಕರ್ತ ಆಯೋಜಿಸಿದ ಆ ಕಾರ್ಯಕ್ರಮಕ್ಕೆ ಕನ್ನಡದ ಅನೇಕ ಸೆಲೆಬ್ರಿಟಿಗಳನ್ನು ಆಹ್ವಾನಿಸಿ, ಅವಮಾನ ಮಾಡಲಾಗಿದೆ ಎಂಬ ಆರೋಪ ಎದುರಾಗಿದೆ. ಅದಕ್ಕೆ ಅಲ್ಲು ಅರ್ಜುನ್​ ತಂದೆ ಅಲ್ಲು ಅರವಿಂದ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ರಮೇಶ್​ ಅರವಿಂದ್​ಗೆ ಅವಮಾನ: ‘ಒಬ್ಬ ಮಾಡಿದ ತಪ್ಪಿಗೆ ತೆಲುಗು ಚಿತ್ರರಂಗ ಹೊಣೆಯಲ್ಲ’: ಅಲ್ಲು ಅರ್ಜುನ್​ ತಂದೆ ಪ್ರತಿಕ್ರಿಯೆ
ಅಲ್ಲು ಅರವಿಂದ್​, ರಮೇಶ್​ ಅರವಿಂದ್​
Follow us on

ತೆಲುಗು ಮಂದಿ ನಡೆಸಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡದ (Kannada Film Industry) ಸೆಲೆಬ್ರಿಟಿಗಳಿಗೆ ಅವಮಾನ ಮಾಡಲಾಗಿದೆ ಎಂಬ ಸುದ್ದಿ ಹರಿದಾಡಿದೆ. ರಮೇಶ್​ ಅರವಿಂದ್​ (Ramesh Aravind) ಅವರನ್ನು ವೇದಿಕೆಗೆ ಕರೆದು ಅವಮಾನ ಮಾಡಿದ್ದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಟಾಲಿವುಡ್​ನ ಹಿರಿಯ ನಿರ್ಮಾಪಕ, ಅಲ್ಲು ಅರ್ಜುನ್​ ಅವರ ತಂದೆ ಅಲ್ಲು ಅರವಿಂದ್​ (Ramesh Aravind) ಸ್ಪಷ್ಟನೆ ನೀಡಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜನೆ ಮಾಡಿದ ವ್ಯಕ್ತಿಗೂ ತಮ್ಮ ಕುಟುಂಬಕ್ಕೂ ಸಂಬಂಧ ಇಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೇ ಈ ಘಟನೆಗೆ ಇಡೀ ತೆಲುಗು ಚಿತ್ರರಂಗವನ್ನು ದೂಷಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಹೈದರಾಬಾದ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಲ್ಲು ಅರವಿಂದ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಇದು ಪತ್ರಕರ್ತರೊಬ್ಬರು ನಡೆಸಿಕೊಂಡು ಬರುತ್ತಿರುವ ಪ್ರಶಸ್ತಿ ಪ್ರದಾನ ಸಮಾರಂಭ. ಗೋವಾದಲ್ಲಿ ನಡೆದ ಸಮಾರಂಭ ಯಶಸ್ವಿಯಾಗಿಲ್ಲ. ನಮ್ಮ ಕುಟುಂಬದ ಕಲಾವಿದರಿಗೆ ಆ ಪತ್ರಕರ್ತನೇ ಪಿಆರ್​ಓ ಎಂದು ಕೆಲವರು ಹೇಳುತ್ತಿದ್ದಾರೆ. ನಮ್ಮ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ ಎಂದಮಾತ್ರಕ್ಕೆ ಆತ ನಮ್ಮ ಕುಟುಂಬದ ಪ್ರತಿನಿಧಿ ಅಲ್ಲ’ ಎಂದು ಅಲ್ಲು ಅರವಿಂದ್​ ಅವರು ಹೇಳಿದ್ದಾರೆ.

‘ಈ ವಿಷಯದಲ್ಲಿ ನಮ್ಮನ್ನು ಎಳೆದು ತರುವುದು ಸರಿಯಲ್ಲ. ಬೇರೆ ಚಿತ್ರರಂಗದವರು ಸಮಸ್ಯೆ ಅನುಭವಿಸಿದ್ದಕ್ಕೆ ಇಡೀ ತೆಲುಗು ಚಿತ್ರರಂಗದ ಮೇಲೆ ಆರೋಪ ಹೊರಿಸಲಾಗುತ್ತಿದೆ. ಒಬ್ಬ ಮಾಡಿದ ತಪ್ಪಿಗೆ ತಮ್ಮನ್ನೆಲ್ಲ ಆರೋಪಿಸಿದ್ದಕ್ಕೆ ನನಗೆ ತೀವ್ರ ಬೇಸರ ಆಗಿದೆ. ಆ ವ್ಯಕ್ತಿಗೂ ನಮಗೂ ಸಂಬಂಧ ಇಲ್ಲ. ಇಡೀ ಟಾಲಿವುಡ್​ ಮೇಲೆ ಆರೋಪ ಮಾಡಿರುವುದು ಸರಿಯಲ್ಲ’ ಎಂದು ಅಲ್ಲು ಅರವಿಂದ್​ ಹೇಳಿದ್ದಾರೆ.

ಇದನ್ನೂ ಓದಿ: ಗೋವಾದಲ್ಲಿ ಕನ್ನಡ ಸಿನಿಮಾ ನಟ-ನಟಿಯರಿಗೆ ಅವಮಾನ

ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಿದ ಸುರೇಶ್​ ಎಂಬ ವ್ಯಕ್ತಿ ಕೂಡ ಕ್ಷಮೆ ಕೇಳಿದ್ದಾರೆ. ‘ಇದು ಸಂಪೂರ್ಣ ನನ್ನ ಹೊಣೆಯೇ ಹೊರತು ತೆಲುಗು ಚಿತ್ರರಂಗದ್ದಲ್ಲ. ಸಂವಹನದ ಸಮಸ್ಯೆಯಿಂದ ಈ ತಪ್ಪು ನಡೆದಿದೆ. ಕನ್ನಡ ಮತ್ತು ತಮಿಳಿನ ಜನರಿಗೆ ಅವಮಾನ ಮಾಡುವ ಉದ್ದೇಶ ನಮ್ಮದಲ್ಲ. ನಮ್ಮ ಕಾರ್ಯಕ್ರಮದಲ್ಲಿ ಆದ ವ್ಯತ್ಯಯಕ್ಕೆ ನಾನು ಕ್ಷಮೆ ಕೇಳುತ್ತೇನೆ’ ಎಂದು ಸುರೇಶ್​ ಕ್ಷಮೆ ಕೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.