ಸಿನಿಮಾ ಚಟುವಟಿಕೆಗಳ ಸಲುವಾಗಿ ಸದಾ ಕಾಲ ಹೊರಗೆ ಇರುತ್ತಿದ್ದ ಸೆಲೆಬ್ರಿಟಿಗಳೆಲ್ಲ ಈಗ ಲಾಕ್ಡೌನ್ ಪರಿಣಾಮ ಮನೆಯಲ್ಲೇ ಇದ್ದಾರೆ. ಈ ಸಂದರ್ಭದಲ್ಲಿ ಒಬ್ಬೊಬ್ಬರ ದಿನಚರಿ ಒಂದೊಂದು ರೀತಿ ಇದೆ. ಸಿಕ್ಕಿರುವ ಸಮಯವನ್ನು ಬೇರೆ ಬೇರೆ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಎಲ್ಲರೂ ಅನೇಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಜನಪ್ರಿಯ ನಟ ಕೆಜೆ (ಕಾರ್ತಿಕ್ ಜಯರಾಮ್) ಕೂಡ ತಮ್ಮದೇ ಆದಂತಹ ದಿನಚರಿ ರೂಢಿಸಿಕೊಂಡಿದ್ದಾರೆ. ಸೀರಿಯಲ್ ಮತ್ತು ಸಿನಿಮಾ ಎರಡೂ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಅವರಿಗೆ ಫಿಟ್ನೆಸ್ ಬಗ್ಗೆ ಅಪಾರ ಆಸಕ್ತಿ. ಅದಕ್ಕೂ ಕೂಡ ಈ ಲಾಕ್ಡೌನ್ನಲ್ಲಿ ಸಮಯ ಮೀಸಲಿರಿಸಿದ್ದಾರೆ.
ಮನೆಯಲ್ಲೇ ಜಿಮ್ ಸೆಟಪ್
ಜೆಕೆ ಎಂದಿಗೂ ವರ್ಕೌಟ್ ತಪ್ಪಿಸುವವರಲ್ಲ. ದೇಹವನ್ನು ಫಿಟ್ ಆಗಿಟ್ಟುಕೊಳ್ಳಲು ಅವರು ಸದಾ ಸಮಯ ನೀಡುತ್ತಾರೆ. ಆದರೆ ಲಾಕ್ಡೌನ್ ಆಗಿರುವುದರಿಂದ ಯಾವುದೇ ಜಿಮ್ಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಕಳೆದ ವರ್ಷ ಲಾಕ್ಡೌನ್ ಆದಾಗಲೇ ಮನೆಯಲ್ಲಿ ಚಿಕ್ಕ ಜಿಮ್ ಸೆಟಪ್ ಮಾಡಿಕೊಂಡಿದ್ದರು. ಈಗ ಪ್ರತಿದಿನ ಎರಡು ಹೊತ್ತು ಅದರಲ್ಲಿ ಅವರು ವರ್ಕೌಟ್ ಮಾಡುತ್ತಿದ್ದಾರೆ. ಇದರ ಜೊತೆಗೆ ಈ ಸಮಯದಲ್ಲಿ ಉಸಿರಾಟದ ವ್ಯಾಯಾಮಗಳು ಕೂಡ ತುಂಬ ಮುಖ್ಯ ಎಂಬುದು ಜೆಕೆ ಅಭಿಪ್ರಾಯ.
ಚಾರಿಟಿ ಕೆಲಸಗಳಲ್ಲಿ ಜೆಕೆ ಭಾಗಿ
ಜೆಕೆ ನಟಿಸುತ್ತಿರುವ ಐರಾವನ್ ಸಿನಿಮಾತಂಡದಿಂದ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಲಾಗುತ್ತಿದೆ. ಅವುಗಳಲ್ಲಿ ಜೆಕೆ ಭಾಗಿ ಆಗುತ್ತಿದ್ದಾರೆ. ಇತ್ತೀಚೆಗಷ್ಟೇ ಐರಾವನ್ ಸಿನಿಮಾ ನಿರ್ಮಾಪಕ ಡಾ. ನಿರಂತರ ಗಣೇಶ್ ಅವರು ಬ್ಯಾಟರಾಯನಪುರ ವ್ಯಾಪ್ತಿಗೆ ಒಂದು ಆಕ್ಸಿಜನ್ ಸಹಿತ ಆ್ಯಂಬುಲೆನ್ಸ್ ನೀಡಿದರು. ಜೊತೆಗೆ ಸಾವಿರಾರು ಮೆಡಿಸಿನ್ ಕಿಟ್ಗಳನ್ನು ವಿತರಿಸಲಾಯಿತು. ಇಂತಹ ಕಾರ್ಯಗಳಲ್ಲಿ ತಮ್ಮ ತಂಡದ ಜೊತೆ ಸೇರಿಕೊಂಡು ಜೆಕೆ ಕೂಡ ಭಾಗಿ ಆಗುತ್ತಿದ್ದಾರೆ.
ವೆಬ್ ಸಿರೀಸ್, ಸಿನಿಮಾ ನೋಡೋಕೆ ಸಮಯ ಸಿಕ್ಕಿದೆ
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಶೂಟಿಂಗ್ ಮುಂತಾದ ಚಟುವಟಿಕೆಗಳಲ್ಲಿ ಬ್ಯುಸಿ ಇದ್ದಾಗ ತಮ್ಮಿಷ್ಟದ ಸಿನಿಮಾ, ವೆಬ್ ಸಿರೀಸ್ ನೋಡಲು ಸಮಯ ಸಿಕ್ಕಿರುವುದಿಲ್ಲ. ಆದರೆ ಈಗ ಲಾಕ್ಡೌನ್ ಇರುವುದರಿಂದ ಅವುಗಳನ್ನು ನೋಡಲು ಜೆಕೆಗೆ ಸಾಧ್ಯವಾಗುತ್ತಿದೆ. ಎಲ್ಲ ಭಾಷೆಯ ಕಂಟೆಂಟ್ಗಳನ್ನು ನೋಡುವುದರಿಂದ ನಟರಿಗೆ ಸಹಾಯವಾಗುತ್ತದೆ ಎಂಬುದು ಜೆಕೆ ಅಭಿಪ್ರಾಯ.
ಐರಾವನ್ ಚಿತ್ರಕ್ಕೆ ಪೋಸ್ಟ್ ಪ್ರೊಡಕ್ಷನ್
ಲಾಕ್ಡೌನ್ ಶುರುವಾಗುವುದಕ್ಕೂ ಮುನ್ನ ಐರಾವನ್ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿತ್ತು. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈಗ ಸಿಕ್ಕಿರುವ ಸಮಯದಲ್ಲಿ ಚಿತ್ರವನ್ನು ಇನ್ನಷ್ಟು ಇಂಪ್ರೂವೈಸ್ ಮಾಡುವ ಬಗ್ಗೆ ತಂಡ ಯೋಚಿಸುತ್ತಿದೆ. ಪ್ರಮೋಷನ್ಗೆ ಹೊಸ ಹೊಸ ಐಡಿಯಾಗಳನ್ನು ಮಾಡಲು ಚಿತ್ರತಂಡಕ್ಕೆ ಸಮಯ ಸಿಕ್ಕಂತಾಗಿದೆ. ಈ ಸಿನಿಮಾಗೆ ರಾಮ್ಸ್ ರಂಗ ನಿರ್ದೇಶನ ಮಾಡಿದ್ದು, ಅದ್ವಿತಿ ಶೆಟ್ಟಿ ಮತ್ತು ವಿವೇಕ್ ಕೂಡ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಮನೆಯೊಳಗೆ ಇರುವುದೇ ಉತ್ತಮ ಕೆಲಸ
ಈ ಸಮಯದಲ್ಲಿ ಎಲ್ಲರೂ ಮನೆಯಲ್ಲಿ ಸೇಫ್ ಆಗಿರಬೇಕು. ಈ ವಿಚಾರದಲ್ಲಿ ಸೆಲೆಬ್ರಿಟಿಗಳು ಮಾದರಿಯಾಗಿ ಇರಬೇಕು. ಆಗ ಅವರ ಫ್ಯಾನ್ಸ್ ಕೂಡ ಬೇಕಾಬಿಟ್ಟಿ ತಿರುಗಾಡುವುದಿಲ್ಲ. ಆ ಕಾರಣಕ್ಕಾಗಿ ಜೆಕೆ ಮನೆಯಲ್ಲೇ ಇರುವ ಮೂಲಕ ಲಾಕ್ಡೌನ್ ನಿಯಮಗಳನ್ನು ಪಾಲಿಸುತ್ತಿದ್ದಾರೆ. ತಮ್ಮ ಅಭಿಮಾನಿಗಳಿಗೂ ಮಾದರಿ ಆಗಿದ್ದಾರೆ.
ಬಾಲಿವುಡ್ ಸಿನಿಮಾದಲ್ಲಿ ಜೆಕೆ
ಕ್ರಿಕೆಟರ್ ಮಿಥಾಲಿ ರಾಜ್ ಅವರ ಬಯೋಪಿಕ್ ಸಿದ್ಧವಾಗಲಿದೆ. ಅದರಲ್ಲಿ ತಾಪ್ಸಿ ಪನ್ನು ಅವರು ಮಿಥಾಲಿ ರಾಜ್ ಪಾತ್ರವನ್ನು ಮಾಡಲಿದ್ದಾರೆ. ಆ ಚಿತ್ರದಲ್ಲಿ ಜೆಕೆ ಕೂಡ ಒಂದು ಮುಖ್ಯ ಪಾತ್ರವನ್ನು ನಿಭಾಯಿಸಲಿದ್ದಾರೆ. ಲಾಕ್ಡೌನ್ ಮುಗಿಯುತ್ತಿದ್ದಂತೆಯೇ ಅದರ ಶೂಟಿಂಗ್ ಪುನಾರಂಭ ಆಗಲಿದೆ. ಅದರಲ್ಲಿ ಭಾಗವಹಿಸಲು ಜೆಕೆ ಕಾಯುತ್ತಿದ್ದಾರೆ. ಇದು ಬಾಲಿವುಡ್ನಲ್ಲಿ ಅವರ ಎರಡನೇ ಸಿನಿಮಾ. ಈ ಹಿಂದೆ ‘ಪುಷ್ಪಾ ಐ ಹೇಟ್ ಟಿಯರ್ಸ್’ ಸಿನಿಮಾದಲ್ಲಿ ಅವರು ನಟಿಸಿದ್ದರು.
ಇದನ್ನೂ ಓದಿ:
ಆಕ್ಸಿಜನ್ ಸಹಿತ ಆ್ಯಂಬುಲೆನ್ಸ್ ನೀಡಿ ಕೊವಿಡ್ ಸೋಂಕಿತರಿಗೆ ನೆರವಾದ ಜೆಕೆ ನಟನೆಯ ಐರಾವನ್ ಚಿತ್ರತಂಡ
Adhvithi Shetty: ಮಾನಸಿಕ ಆರೋಗ್ಯ ಕಾಪಾಡಿಕೊಳ್ಳೋಕೆ ನಟಿ ಅದ್ವಿತಿ ಶೆಟ್ಟಿ ಕೊಟ್ರು ಟಿಪ್ಸ್