ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಫಲಿತಾಂಶ ಹಲವರಿಗೆ ಆಘಾತ ತಂದಿದೆ. ಬಿಜೆಪಿ ನಾಯಕರು (BJP Leaders), ಬೆಂಬಲಿಗರಂತೂ ತಮ್ಮ ಪಕ್ಷ ಸೋತ ರೀತಿ ನೋಡಿ ಅವಾಕ್ಕಾಗಿದ್ದಾರೆ. ರೇಣುಕಾಚಾರ್ಯ ಅಂತೂ ರಾಜಕೀಯ ನಿವೃತ್ತಿಯನ್ನೇ ಘೋಷಿಸಿಬಿಟ್ಟಿದ್ದಾರೆ. ಬಸವರಾಜ ಬೊಮ್ಮಾಯಿ ಸೋಲಿನ ಹೊಣೆಯನ್ನು ಹೊತ್ತಿದ್ದಾರಾದರೂ ಇನ್ನೂ ಕೆಲವು ತಲೆಗಳ ಬಲಿಯನ್ನು ಹೈಕಮಾಂಡ್ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ. ಇದರ ನಡುವೆ ಬಿಜೆಪಿ ಸೋಲನ್ನು ಅದೇ ಪಕ್ಷದ ಕೆಲವರು ವಿಮರ್ಶಿಸುತ್ತಿದ್ದಾರೆ. ನಟ, ರಾಜ್ಯಸಭೆ ಸದಸ್ಯರೂ ಆಗಿರುವ ಜಗ್ಗೇಶ್ (Jaggesh) ಬಿಜೆಪಿ ಸೋಲಿನ ಬಗ್ಗೆ ಟ್ವೀಟ್ ಒಂದನ್ನು ಮಾಡಿದ್ದಾರೆ.
‘ಕೂಟ್ಟ ಕುದುರೆ ಏರದವ, ವೀರನು ಅಲ್ಲಾ ಶೂರನು ಅಲ್ಲಾ’ ಎಂದಿದ್ದಾರೆ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್. ಆ ಮೂಲಕ ಕೊಟ್ಟ ಅಧಿಕಾರವನ್ನು ರಾಜ್ಯ ಬಿಜೆಪಿ ನಾಯಕರು, ಸಚಿವರುಗಳು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ. ಮುಂದುವರೆದು, ‘ಧನ್ಯವಾದ ಹಗಲಿರುಳು ಶ್ರಮಿಸಿದ ಭಾಜಪ ಸೈನಿಕರಿಗೆ, ಸೋಲು ಮುಂದಿನ ಗೆಲುವಿಗೆ ಸೋಪಾನ, ಹಗಲಾದಮೇಲೆ ಇರುಳು, ಮತ್ತೆ ಮೂಡುವುದು ಹಗಲು, ಇದು ಪ್ರಕೃತಿ ನಿಯಮ’ ಎನ್ನುವ ಮೂಲಕ ಬಿಜೆಪಿ ಕಾರ್ಯಕರ್ತರಲ್ಲಿ ಸ್ಥೈರ್ಯ ತುಂಬುವ ಕಾರ್ಯ ಮಾಡಿದ್ದಾರೆ.
ಕೂಟ್ಟ ಕುದುರೆ ಏರದವ
ವೀರನು ಅಲ್ಲಾ ಶೂರನು ಅಲ್ಲಾ!
ಧನ್ಯವಾದ ಹಗಲಿರುಳು ಶ್ರಮಿಸಿದ ಭಾಜಪ ಸೈನಿಕರಿಗೆ?
ಸೋಲು ಮುಂದಿನ ಗೆಲುವಿಗೆ ಸೋಪಾನ?
ಹಗಲಾದಮೇಲೆ ಇರುಳು!
ಮತ್ತೆ ಮೂಡುವುದು ಹಗಲು?
ಇದು ಪ್ರಕೃತಿ ನಿಯಮ?— ನವರಸನಾಯಕ ಜಗ್ಗೇಶ್ (@Jaggesh2) May 13, 2023
ವಿಧಾನಸಭಾ ಚುನಾವಣಾ ಸಮಯದಲ್ಲಿ ನಟ ಜಗ್ಗೇಶ್ ಸಹ ಕೆಲ ದಿನಗಳ ಕಾಲ ಬಿಜೆಪಿ ಪರವಾಗಿ ಪ್ರಚಾರ ನಡೆಸಿದ್ದರು. ಜಗ್ಗೇಶ್ ನಟನೆಯ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಸಹ ಇದೇ ಸಮಯದಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಪ್ರಚಾರ, ಬಿಡುಗಡೆ ಮುಂತಾದವುಗಳನ್ನು ಮುಗಿಸಿ ಜಗ್ಗೇಶ್ ಬಿಜೆಪಿ ಪರವಾಗಿ ಪ್ರಚಾರ ಕ್ರಿಯೆಗಳಲ್ಲಿ ಭಾಗಿಯಾಗಿದ್ದರು. ಪ್ರಚಾರ ಸಮಯದಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆದರೆ ವರ ನಿರೀಕ್ಷೆ ಹುಸಿಯಾಗಿದೆ.
ಇನ್ನು ನಟಿ, ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ್ ಸಹ ಬಿಜೆಪಿ ಸೋಲಿನ ಬಳಿಕ ಕಾರ್ಯಕರ್ತರಿಗೆ ಸ್ಥೈರ್ಯ ತುಂಬುವ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ, ಅವರು ಕಾರ್ಯಕರ್ತರ ಬಗ್ಗೆ ಹೇಳಿದ್ದ ಹೇಳಿಕೆಯೊಂದರ ಚಿತ್ರವನ್ನು ಹಂಚಿಕೊಂಡಿರುವ ನಟಿ ಮಾಳವಿಕಾ ಅವಿನಾಶ್, ಮಂಡಿ ಊರುವುದಿಲ್ಲ, ಪಲಾಯನ ಮಾಡುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ರಾಘವೇಂದ್ರ ಸ್ಟೋರ್ಸ್ನಲ್ಲಿ ಬಹಳ ಚೆನ್ನಾಗಿದ್ದ ಸೀನ್ ಒಂದನ್ನು ತೆಗೆಯಲೇಬೇಕಾಯ್ತು: ಜಗ್ಗೇಶ್
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಹಲವು ನಟ-ನಟಿಯರು ವಿವಿಧ ಪಕ್ಷ ಹಾಗೂ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದಾರೆ. ಕಿಚ್ಚ ಸುದೀಪ್, ತಾವು ಈ ಬಾರಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದಾಗಿ ಘೋಷಿಸಿದ್ದರು. ಇದು ಚರ್ಚೆಗೆ ನಾಂದಿ ಹಾಡಿತ್ತು, ಆ ಬಳಿಕ ರಾಜ್ಯದಾದ್ಯಂತ ಸಂಚರಿಸಿ ಹಲವು ಕ್ಷೇತ್ರಗಳಲ್ಲಿ ಸುದೀಪ್ ಪ್ರಚಾರ ಮಾಡಿದ್ದರು ಆದರೆ ಅವರು ಪ್ರಚಾರ ಮಾಡಿದ ಹಲವು ಕಡೆಗಳಲ್ಲಿ ಬಿಜೆಪಿ ಸೋಲುಂಡಿದೆ.
ನಟಿ ಶ್ರುತಿ ಸಹ ಈ ಬಾರಿ ಹಲವು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದರು. ಹರ್ಷಿಕಾ ಪೂಣಚ್ಚ ಸಹ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರು. ನಟ ಧ್ರುವ ಸರ್ಜಾ ಸಹ ಪದ್ಮನಾಭನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದರು. ನಟಿ ಪ್ರೇಮಾ, ಬಿಸಿ ಪಾಟೀಲ್ ಪರವಾಗಿ ಪ್ರಚಾರ ಮಾಡಿದ್ದರು.
ನಟ ಶಿವರಾಜ್ ಕುಮಾರ್ ತುಸು ತಡವಾಗಿ ಪ್ರಚಾರಕ್ಕೆ ಧುಮುಕಿ ಕೆಲವು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮತ ಯಾಚನೆ ಮಾಡಿದರು. ನಟ ದುನಿಯಾ ವಿಜಯ್, ಲೂಸ್ ಮಾದ ಯೋಗಿ ಸಿದ್ದರಾಮಯ್ಯ ಪರ ಮತಯಾಚನೆ ಮಾಡಿದರು. ನಟ ಸಾಧುಕೋಕಿಲ ಸಹ ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಂಡರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:04 pm, Sun, 14 May 23