ರಾಘವೇಂದ್ರ ಸ್ಟೋರ್ಸ್ನಲ್ಲಿ ಬಹಳ ಚೆನ್ನಾಗಿದ್ದ ಸೀನ್ ಒಂದನ್ನು ತೆಗೆಯಲೇಬೇಕಾಯ್ತು: ಜಗ್ಗೇಶ್
Raghavendra Stores: ಕಳೆದ ವಾರವಷ್ಟೆ ಬಿಡುಗಡೆ ಆದ ರಾಘವೇಂದ್ರ ಸ್ಟೋರ್ಸ್ ಕನ್ನಡ ಸಿನಿಮಾ ಇದೀಗ ಸಕ್ಸಸ್ ಮೀಟ್ ಮಾಡಿದ್ದು, ಒಂದು ಸುಂದರವಾದ ದೃಶ್ಯವನ್ನು ಸಿನಿಮಾದಿಂದ ಹೊರಗೆ ಇಡಬೇಕಾದ ಅನಿವಾರ್ಯತೆ ನಿರ್ಮಾಣವಾದ ಬಗ್ಗೆ ಜಗ್ಗೇಶ್ ಮಾತನಾಡಿದರು.
ಜಗ್ಗೇಶ್ ನಟನೆಯ ರಾಘವೇಂದ್ರ ಸ್ಟೋರ್ಸ್ (Raghavendra Stores) ಸಿನಿಮಾ ಕಳೆದ ವಾರ ಬಿಡುಗಡೆ ಆಗಿ ರಾಜ್ಯದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ನಿನ್ನೆಯಷ್ಟೆ (ಏಪ್ರಿಲ್ 4) ಚಿತ್ರತಂಡವು ಸಿನಿಮಾದ ಸಕ್ಸಸ್ ಮೀಟ್ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ನಿರ್ದೇಶಕ ಸಂತೋಶ್ ಆನಂದ್ ರಾಮ್ (Santhosh Anandram), ನಟ ಜಗ್ಗೇಶ್ (Jaggesh), ನಾಯಕಿ ಶ್ವೇತಾ ಶ್ರೀವಾತ್ಸವ್, ದತ್ತಣ್ಣ (Dattanna), ರವಿಶಂಕರ್ ಇನ್ನಿತರರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಗ್ಗೇಶ್, ಸಿನಿಮಾದಲ್ಲಿದ್ದ ಒಂದು ಬಹಳ ಒಳ್ಳೆಯ ದೃಶ್ಯವನ್ನು ಅನಿವಾರ್ಯವಾಗಿ ತೆಗೆಯಬೇಕಾಗಿ ಬಂದ ಪ್ರಸಂಗವನ್ನು ವಿವರಿಸಿದರು.
ನಿರ್ದೇಶಕ ಸಂತೋಶ್ ಆನಂದ್ರಾಮ್ ಅವರನ್ನು ಹೊಗಳುತ್ತಾ, ”ನಮ್ಮ ಸಂತೋಶ ಬಹಳ ಒಳ್ಳೆಯ ಮೇಧಾವಿ. ಆತ ನಿರ್ಮಾಪಕರ ಪರ ಮತ್ತು ಪ್ರೇಕ್ಷಕರ ಪರ. ಅವರ ನಾಡಿಮಿಡಿತವನ್ನು ಅಭ್ಯಾಸ ಮಾಡಿರುವ ತಂತ್ರಜ್ಞ ಅವನು. ಪ್ರತಿ ಬೆಳವಣಿಗೆಯ ಬಗ್ಗೆಯೂ ಅಪ್ಡೇಟ್ ಮಾಡುತ್ತಿದ್ದ. ಒಂದು ಬಾರಿ ಕರೆ ಮಾಡಿ ಎಡಿಟಿಂಗ್ ಮುಗಿಯಿತು ಎನ್ನುತ್ತಿದ್ದ, ಮತ್ತೊಮ್ಮೆ ಕಾಲ್ ಮಾಡಿ ದೃಶ್ಯಗಳ ಅನುಕ್ರಮ ಬದಲಾಯಿಸಿದ್ದೇನೆ ಎನ್ನುತ್ತಿದ್ದ. ಹೀಗೆ ಹೇಳುತ್ತಿದ್ದ, ಕೊನೆಗೆ ಸಿನಿಮಾದಲ್ಲಿ ಎರಡು ನಿಮಿಷದ ದೃಶ್ಯ ಹಾಗೂ ಒಂದು ಹಾಡನ್ನು ತೆಗೆದಿದ್ದಾನೆ” ಎಂದರು. ಆ ದೃಶ್ಯ ಏನಾಗಿತ್ತು ಎಂಬುದನ್ನೂ ವಿವರಿಸಿದರು.
”ನಿಮ್ಮನ್ನು ನವರಸ ನಾಯಕ ಎಂದು ಏಕೆ ಕರೆಯುತ್ತಾರೆ ಎಂದು ಜನಗಳಿಗೆ ತೋರಿಸುತ್ತೇನೆ” ಎಂದು ಹೇಳಿ ಒಂದು ದೃಶ್ಯವನ್ನು ಚಿತ್ರೀಕರಣ ಮಾಡಿಸಿದ್ದ. ಅದೊಂದು ಕ್ಲೌನ್ ರೀತಿಯ ಮೂಗಾಭಿನಯ ರೀತಿಯ ದೃಶ್ಯ. ಆ ದೃಶ್ಯ ಅದ್ಭುತವಾಗಿತ್ತು, ಆ ದೃಶ್ಯ ನೋಡಿ ನನಗೇ ಕಣ್ಣಿನಲ್ಲಿ ನೀರು ಬಂದು ಬಿಡ್ತು, ಏನಯ್ಯ ಇಷ್ಟು ಚೆನ್ನಾಗಿ ಮಾಡಿಸಿದ್ದೀಯ ಎಂದು ಧನ್ಯವಾದ ಹೇಳಿದೆ. ಆದರೆ ಕೊನೆಗೆ ಸಿನಿಮಾ ಚೆನ್ನಾಗಿ ಬರಬೇಕು, ಪ್ರೇಕ್ಷಕನಿಗೆ ಬೇಸರ ಆಗಬಾರದು ಎಂದು ಆ ದೃಶ್ಯವನ್ನೂ ಕತ್ತರಿಸಿ ಪಕ್ಕಕ್ಕೆ ಇಟ್ಟ. ಒಂದು ಹಾಡನ್ನೂ ಪಕ್ಕಕ್ಕ ಇಟ್ಟೆವು” ಎಂದು ಜಗ್ಗೇಶ್ ವಿವರಿಸಿದರು.
”ಕೊಟ್ಟ ಸಮಯದಲ್ಲಿ ಸರಿಯಾಗಿ ಸಿನಿಮಾ ಮುಗಿಸುವುದರಲ್ಲಿ ಹಾಗೂ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡುವುದರಲ್ಲಿ ಸಂತೋಶ ನಂಬರ್ 1, ಅವನೆಂದರೆ ನನಗೆ ಹೃದಯ ತುಂಬಿಬರುತ್ತದೆ. ಇಂಥಹಾ ತಂತ್ರಜ್ಞರು ಹೆಚ್ಚಾದರೆ ನಿರ್ಮಾಪಕರು ಒಂದರ ಹಿಂದೊಂದು ಸಿನಿಮಾ ಮಾಡುತ್ತಾರೆ. ಮುಂಚೆ ಹಾಗೆಯೇ ಇತ್ತು, ಒಬ್ಬ ನಿರ್ಮಾಪಕ ಯಾವುದಾದರೂ ನಟರೊಡನೆ ಸಿನಿಮಾ ಮಾಡಿದರೆ ಅದರ ಹಿಂದೆಯೇ ಮೂರು ನಾಲ್ಕು ಸಿನಿಮಾ ಮಾಡಿ ಆ ಬಳಿಕ ಬೇರೆ ನಟರ ಬಳಿಗೆ ಹೋಗುತ್ತಿದ್ದರು” ಎಂದು ನೆನಪು ಮಾಡಿಕೊಂಡರು.
”ಹೊಂಬಾಳೆಯವರು ಬಹಳ ದೊಡ್ಡ ಸಿನಿಮಾಗಳನ್ನು ಮಾಡಿದವರು ಕೌಟುಂಬಿಕ ಹಾಸ್ಯ ಕತೆಗೆ ಬಂಡವಾಳ ಹಾಕಿದ್ದಾರಲ್ಲ ಎಂದು ಹಲವರು ಆಶ್ಚರ್ಯ ಪಟ್ಟರು. ನನಗೂ ಭಯ ಇತ್ತು. ಆದರೆ ನನ್ನ ಭಯ ಇದ್ದಿದ್ದು ನನ್ನ ಬಗ್ಗೆ ಅಲ್ಲ. ಸಿನಿಮಾದಲ್ಲಿ ರಾಯರ ಹೆಸರಿದೆ ರಾಘವೇಂದ್ರ ಸ್ಟೋರ್ಸ್ ಎಂದು ಹಾಗಾಗಿ ಈ ಸಿನಿಮಾ ಗೆಲ್ಲಲೇ ಬೇಕಿತ್ತು. ಕೊನೆಗೆ ರಾಯರೇ ಪ್ರೇಕ್ಷಕರ ಪ್ರಭುಗಳ ರೂಪದಲ್ಲಿ ಬಂದು ತಮ್ಮ ಸಿನಿಮಾವನ್ನು ಗೆಲ್ಲಿಸಿಕೊಂಡಿದ್ದಾರೆ” ಎಂದ ಜಗ್ಗೇಶ್, ತಮ್ಮ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಗೆಲ್ಲಲು ಕಾರಣರಾದ ಎಲ್ಲರಿಗೂ ಧನ್ಯವಾದ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ