Raghavendra Stores: ರಾಘವೇಂದ್ರ ಸ್ಟೋರ್ಸ್ ಸಿನಿಮಾ ಪ್ರದರ್ಶನಕ್ಕೆ ತಡೆ ಇಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ
Code Of Conduct: ರಾಘವೇಂದ್ರ ಸ್ಟೋರ್ಸ್ ಸಿನಿಮಾ ಪ್ರದರ್ಶನವನ್ನು ದಾವಣಗೆರೆಯಲ್ಲಿ ತಡೆಹಿಡಿಯಲಾಗಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಗ್ಗೇಶ್ ನಟನೆಯ ರಾಘವೇಂದ್ರ ಸ್ಟೋರ್ಸ್ (Raghavendra Stores) ಸಿನಿಮಾ ಕಳೆದ ವಾರ ಬಿಡುಗಡೆ ಆಗಿದ್ದು ರಾಜ್ಯದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಿಜೆಪಿ ರಾಜ್ಯಸಭಾ ಸದಸ್ಯರಾಗಿರುವ ಜಗ್ಗೇಶ್ ಸಿನಿಮಾ ಹಾಗೂ ರಾಜಕೀಯ ಎರಡನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ತಮ್ಮ ಸಿನಿಮಾ ಬಿಡುಗಡೆ ಬಳಿಕ ಬಿಜೆಪಿ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಇದೇ ಕಾರಣಕ್ಕೆ ನಿನ್ನೆ (ಮೇ 03) ಕೆಲಕಾಲ ಅವರ ಸಿನಿಮಾ ಸಮಸ್ಯೆ ಎದುರಿಸಬೇಕಾಯಿತು.
ಆಗಿದ್ದಿಷ್ಟು, ದಾವಣಗೆರೆಯ ಗೀತಾಂಜಲಿಚಿತ್ರಮಂದಿರದಲ್ಲಿ ಜಗ್ಗೇಶ್ ಅಭಿನಯದ. ರಾಘವೇಂದ್ರ ಸ್ಟೋರ್ಸ್ ಪ್ರದರ್ಶನ ನಡೆಯುತ್ತಿತ್ತು, ಚುನಾವಣಾ ನೀತಿ ಸಂಹಿತೆ ಇರುವ ಕಾರಣ ಜಗ್ಗೇಶ್ರ ಸಿನಿಮಾ ಪ್ರದರ್ಶಿಸಬಾರದು ಎಂದು ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಪ್ರದರ್ಶನಕ್ಕೆ ತಡೆ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಜಗ್ಗೇಶ್ ಅವರು ಅಭ್ಯರ್ಥಿಯಲ್ಲ, ಅವರು ರಾಜ್ಯಸಭಾ ಸದಸ್ಯರು, ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ ಎಂದ ಬಳಿಕ, ಅಲ್ಲಿಯೇ ಅಂಟಿಸಲಾಗಿದ್ದ ಸಿನಿಮಾದ ಪೋಸ್ಟರ್ಗಳಲ್ಲಿನ ಜಗ್ಗೇಶ್ ಚಿತ್ರದ ಮೇಲೆ ಬಿಳಿ ಹಾಳೆಯನ್ನು ಅಂಟಿಸಿ ಹೋಗಿದ್ದರು.
ರಾಘವೇಂದ್ರ ಸ್ಟೋರ್ಸ್ ಸಿನಿಮಾ ಪೋಸ್ಟರ್ನ ಜಗ್ಗೇಶ್ ಚಿತ್ರಗಳ ಮೇಲೆ ಅಧಿಕಾರಿಗಳು ಬಿಳಿ ಹಾಳೆ ಅಂಟಿಸಿದ್ದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ನೀತಿ ಸಂಹಿತೆ ಉಲ್ಲಂಘನೆ ಆಗದೇ ಇದ್ದರೂ ಮಾಹಿತಿ ಕೊರತೆಯಿಂದ ಹೀಗೆ ಜಗ್ಗೇಶ್ರ ಚಿತ್ರಗಳನ್ನು ಮುಚ್ಚಿದ್ದ ಅಧಿಕಾರಿಗಳ ಕ್ರಮದ ವಿರುದ್ಧ ಅಸಮಾಧಾನವೂ ವ್ಯಕ್ತವಾಗಿತ್ತು.
ಇದೀಗ ಈ ಘಟನೆ ಬಗ್ಗೆ ದಾವಣಗೆರೆ ಜಿಲ್ಲಾಧಿಕಾರಿ, ಚುನಾವಣಾಧಿಕಾರಿಯೂ ಆಗಿರುವ ಶಿವಾನಂದ ಕಾಪಶಿ ಅವರು ಸ್ಪಷ್ಟನೆ ನೀಡಿದ್ದು, ನಟ ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ ಪ್ರದರ್ಶನ ಸ್ಥಗಿತವಿಲ್ಲ. ಜಗ್ಗೇಶ್ ಅವರು ರಾಜ್ಯಸಭಾ ಸದಸ್ಯರು. ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ನಡೆಯುತ್ತಿದೆ. ಅವರು ಬಿಜೆಪಿ ಮುಖಂಡರು ಕೂಡಾ. ಇದೇ ಕಾರಣಕ್ಕೆ ಕೆಲವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈ ಪರಿಶೀಲನೆ ಮಾಡಿ ರಾಜ್ಯ ಚುನಾವಣಾ ಆಯೋಗ ಚಿತ್ರ ನಿರ್ಬಂಧಕ್ಕೆ ಆದೇಶ ಮಾಡಿಲ್ಲ. ದಾವಣಗೆರೆ ಗೀತಾಂಜಲಿ ಚಿತ್ರಮಂದಿರದಲ್ಲಿ ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ ಪ್ರದರ್ಶನ ನಡೆಯುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: Karthik Gowda: ‘ರಾಘವೇಂದ್ರ ಸ್ಟೋರ್ಸ್’ ಕಲೆಕ್ಷನ್ ಬಗ್ಗೆ ತಪ್ಪು ಲೆಕ್ಕ; ಸ್ಪಷ್ಟನೆ ನೀಡಿದ ಕಾರ್ತಿಕ್ ಗೌಡ
ಜಗ್ಗೇಶ್ ನಟನೆಯ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಕಳೆದ ವಾರ ಬಿಡುಗಡೆ ಆಗಿದೆ. ವಯಸ್ಕ ಅವಿವಾತನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಹಾಸ್ಯಮಯವಾದ ಈ ಸಿನಿಮಾವನ್ನು ಸಂತೋಶ್ ಆನಂದ್ರಾಮ್ ನಿರ್ದೇಶನ ಮಾಡಿದ್ದಾರೆ. ಶ್ವೇತಾ ಶ್ರೀವತ್ಸ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ಅಚ್ಯುತ್ ಕುಮಾರ್, ದತ್ತಣ್ಣ ಸಹ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆಜಿಎಫ್, ಕಾಂತಾರ ಸಿನಿಮಾಗಳ ಖ್ಯಾತಿಯ ಹೊಂಬಾಳೆ ಫಿಲಮ್ಸ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದೆ. ಸಿನಿಮಾವು ರಾಜ್ಯದಾದ್ಯಂತ ಒಳ್ಳೆಯ ಪ್ರದರ್ಶನ ಕಾಣುತ್ತಿದ್ದು, ಸಿನಿಮಾದ ಕಲೆಕ್ಷನ್ ಚೆನ್ನಾಗಿದೆ ಎಂದು ಸಹ ಹೊಂಬಾಳೆಯ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ