
‘ಟಾಕ್ಸಿಕ್’ (Toxic) ಸಿನಿಮಾ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ. ಬಿಡುಗಡೆ ಆದ ಮೊದಲ ದಿನ ಸಿನಿಮಾ ದಾಖಲೆಯ ಗಳಿಕೆ ಮಾಡಿದೆ. ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸೀಕ್ವೆಲ್ ರಹಿತ ಸಿನಿಮಾಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ ಅಲ್ಲಲ್ಲಿ ಕೆಲವರು ಸಿನಿಮಾದ ಬಗ್ಗೆ ಋಣಾತ್ಮಕ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸಿನಿಮಾನಲ್ಲಿ ಹಿಂಸೆ ಹೆಚ್ಚಾಯ್ತು, ರೊಮ್ಯಾನ್ಸ್ ಹೆಚ್ಚಾಯ್ತು ಎಂದೆಲ್ಲ ಕೆಲವರು ಕ್ಯಾತೆ ತೆಗೆದಿರುವುದೂ ಇದೆ. ಆದರೆ ಯಶ್ ಅವರ ಜಪಾನಿ ಅಭಿಮಾನಿಗಳು ಇದಕ್ಕೆಲ್ಲ ತಲೆ ಕೆಡಿಸಿಕೊಂಡಿಲ್ಲ.
ಜಪಾನಿಯರಿಗೆ ಭಾರತೀಯ ಸಿನಿಮಾಗಳೆಂದರೆ ಬಲು ಇಷ್ಟ. ದಶಕಗಳಿಂದಲೂ ಭಾರತೀಯ ಸಿನಿಮಾಗಳನ್ನು ಜಪಾನಿ ಮಂದಿ ನೋಡಿಕೊಂಡು ಬರುತ್ತಿದ್ದಾರೆ. ಭಾರತದಲ್ಲಿಯೂ ಸಹ ದೊಡ್ಡ ಸಂಖ್ಯೆಯಲ್ಲಿ ಜಪಾನಿಗರಿದ್ದು, ಹಲವಾರು ಮಂದಿ ಮೊದಲ ದಿನವೇ ‘ಟಾಕ್ಸಿಕ್’ ಸಿನಿಮಾ ವೀಕ್ಷಿಸಿದ್ದಾರೆ. ಬೆಂಗಳೂರಿನಲ್ಲಿ ಕೆಲವರು ಜಪಾನಿ ಪ್ರಜೆಗಳು ‘ಟಾಕ್ಸಿಕ್’ ಸಿನಿಮಾ ಮೊದಲ ದಿನ ವೀಕ್ಷಿಸಿದ್ದು, ಅವರು ನೀಡಿರುವ ಆಡಿಯೆನ್ಸ್ ರಿವ್ಯೂ ವಿಡಿಯೋಗಳು ಇದೀಗ ವೈರಲ್ ಆಗುತ್ತಿವೆ.
‘ಟಾಕ್ಸಿಕ್’ ವೀಕ್ಷಿಸಿದ ಜಪಾನಿ ಯುವತಿಯೊಬ್ಬರು ಚಿತ್ರವನ್ನು ಶ್ಲಾಘಿಸುತ್ತಾ, “ಟಾಕ್ಸಿಕ್ ಅತ್ಯ್ಭುತವಾಗಿದೆ (Toxic is Amazing)” ಎಂದು ಹೇಳಿದ್ದಾರೆ. ಜೊತೆಗೆ ‘ರಾಯ’ ಪಾತ್ರದಲ್ಲಿ ನಟಿಸಿದ ಯಶ್ ಅವರ ಅಭಿನಯವನ್ನೂ ಅವರು ಕೊಂಡಾಡಿದ್ದಾರೆ. ‘ನಾನು ದೊಡ್ಡ ಯಶ್ ಅಭಿಮಾನಿ’ ಎಂದು ಕನ್ನಡದಲ್ಲೇ ಹೇಳಿದ್ದಾರೆ ಆ ಜಪಾನಿ ಯುವತಿ. ವಿಡಿಯೋ ಅನ್ನು ಯಶ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:‘ಟಾಕ್ಸಿಕ್ ಚಿತ್ರದಲ್ಲಿ ಅತಿಯಾದ ಹಿಂಸೆ’; ಸೆನ್ಸಾರ್ ಮಂಡಳಿ ವಿರುದ್ಧ ಅಣ್ಣಾಮಲೈ ಕಿಡಿ
ಇದೇ ರೀತಿ ವೈರಲ್ ಆಗಿರುವ ಮತ್ತೊಂದು ವಿಡಿಯೋನಲ್ಲಿ ಮೂವರು ಜಪಾನಿ ಮೂಲದ ವ್ಯಕ್ತಿಗಳು ‘ಟಾಕ್ಸಿಕ್’ ಸಿನಿಮಾ ನೋಡಿ ಕೊಂಡಾಡಿದ್ದಾರೆ. “ಈ ಸಿನಿಮಾ ತುಂಬಾ ಚೆನ್ನಾಗಿದೆ, ನನಗೆ ಬಹಳ ಇಷ್ಟವಾಯಿತು” ಎಂದರು. ಮತ್ತೊಬ್ಬ ಜಪಾನಿ ಮೂಲದ ವ್ಯಕ್ತಿ ಈ ಚಿತ್ರವನ್ನು ಸರಳವಾಗಿ “ಸೂಪರ್” ಎಂದು ಬಣ್ಣಿಸಿದ್ದಾರೆ.
2023 ರಲ್ಲಿ ‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಸಿನಿಮಾಗಳು ಒಟ್ಟಿಗೆ ಜಪಾನಿನಲ್ಲಿ ಬಿಡುಗಡೆ ಆಗಿದ್ದವು. ಆಗ ಯಶ್, ಜಪಾನಿ ಭಾಷೆಯಲ್ಲಿ ವಿಡಿಯೋ ಮಾಡಿ ಹಂಚಿಕೊಂಡಿದ್ದರು, ಜಪಾನಿಯರಿಗೆ ತಮ್ಮ ಸಿನಿಮಾ ನೋಡುವಂತೆ ಮನವಿ ಸಹ ಮಾಡಿದ್ದರು. ಆಗಿನಿಂದಲೂ ಜಪಾನಿ ಜನರಿಗೆ ಯಶ್ ಬಗ್ಗೆ ವಿಶೇಷ ಪ್ರೀತಿ. ‘ಕೆಜಿಎಫ್’ ಸಿನಿಮಾಗಳೆರಡೂ ಅಲ್ಲಿ ದೊಡ್ಡ ಹಿಟ್ ಆಗಿದ್ದವು. ಇದೇ ಕಾರಣಕ್ಕೆ ‘ಟಾಕ್ಸಿಕ್’ ಸಿನಿಮಾವನ್ನು ಭಾರತದಲ್ಲಿನ ಬೆಂಗಳೂರಿನ ಜನ ಮೊದಲ ದಿನವೇ ನೋಡಿ ಮೆಚ್ಚಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ