ಘಾರ್ಗಾ: ಹೀರೋ ಆಗಿ ಚಿತ್ರರಂಗಕ್ಕೆ ಕಾಲಿಟ್ಟ ‘ಜೋಗಿ’ ನಿರ್ಮಾಪಕರ ಮಗ ಅರುಣ್
ಅರುಣ್ ರಾಮ್ ಪ್ರಸಾದ್ ನಟನೆಯ ‘ಘಾರ್ಗಾ’ ಸಿನಿಮಾದ ಹೊಸ ರೊಮ್ಯಾಂಟಿಕ್ ಹಾಡು ರಿಲೀಸ್ ಮಾಡಲಾಗಿದೆ. ಹಾಡಿನ ಬಿಡುಗಡೆ ಬಳಿಕ ಚಿತ್ರತಂಡದವರು ಸುದ್ದಿಗೋಷ್ಠಿ ನಡೆಸಿದರು. ಎಂ. ಶಶಿಧರ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ‘ಘಾರ್ಗಾ’ ಸಿನಿಮಾದ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದಿದೆ. ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ (Ashwini Ram Prasad) ಅವರು ಚಿತ್ರರಂಗದಲ್ಲಿ ದಶಕಗಳ ಅನುಭವ ಹೊಂದಿದ್ದಾರೆ. ‘ಜೋಗಿ’ (Jogi) ಸಿನಿಮಾದ ಮೂಲಕ ಅವರು ಬಹುದೊಡ್ಡ ಯಶಸ್ಸು ಕಂಡರು. ಆಡಿಯೋ ಕಂಪನಿಯ ಮಾಲಿಕನಾಗಿ ಅವರು 40 ವರ್ಷ ಕೆಲಸ ಮಾಡಿದ್ದಾರೆ. ಅವರ ಪುತ್ರ ಅರುಣ್ ರಾಮ್ ಪ್ರಸಾದ್ ಈಗ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಅವರ ಸಿನಿಮಾಗೆ ‘ಘಾರ್ಗಾ’ (Gharga) ಎಂದು ಹೆಸರು ಇಡಲಾಗಿದೆ. ಇತ್ತೀಚೆಗೆ ಈ ಸಿನಿಮಾದ ಹೊಸ ಹಾಡನ್ನು ಬಿಡುಗಡೆ ಮಾಡಲಾಯಿತು. ‘ನೀನು ನನಗೆ..’ ಎಂಬ ರೊಮ್ಯಾಂಟಿಕ್ ಹಾಡಿನ ಬಿಡುಗಡೆ ವೇಳೆ ಚಿತ್ರತಂಡದವರು ಮಾತನಾಡಿದರು.
ಅರುಣ್ ರಾಮ್ ಪ್ರಸಾದ್ ಅವರು ಮಾತನಾಡಿ, ‘ನಟನೆಗೆ ಬೇಕಾದ ಎಲ್ಲ ತಯಾರಿ ಮಾಡಿಕೊಂಡು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದೇನೆ. ನನಗೆ ಇಡೀ ಸಿನಿಮಾ ಒಂದು ರೀತಿ ಚಾಲೆಂಜಿಂಗ್ ಆಗಿತ್ತು. ಆಗಾಗ ನನ್ನ ತೂಕವನ್ನು ಕಡಿಮೆ-ಹೆಚ್ಚು ಮಾಡಿಕೊಳ್ಳಬೇಕಿತ್ತು. ನನ್ನ ಪಾತ್ರಕ್ಕೆ ರೈಟರ್ ಹಾಗೂ ಅಂಡರ್‌ವರ್ಲ್ಡ್ ಹೀಗೆ ಹಲವಾರು ಶೇಡ್ಸ್ ಇವೆ. ಇದೊಂದು ಹಾರರ್, ಕ್ರೈಮ್ ಥ್ರಿಲ್ಲರ್ ಕಥಾಹಂದರ ಇರುವ ಸಿನಿಮಾ’ ಎಂದು ಹೇಳಿದರು.
ಎಂ. ಶಶಿಧರ್ ಅವರು ‘ಘಾರ್ಗಾ’ ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಫಾರ್ಗಾ ಎಂಬುದು ಒಂದು ಊರಿನ ಹೆಸರು. ನಾಯಕಿಯಾಗಿ ರೆಹಾನ ಅವರು ಅಭಿನಯಿಸಿದ್ದಾರೆ. ಎನ್. ಕುಮಾರ್ ಅವರು ಈ ಸಿನಿಮಾವನ್ನು ಬಿಡುಗಡೆ ಮಾಡಲಿದ್ದಾರೆ. ಹಾಡಿನ ಮೂಲಕ ‘ಘಾರ್ಗಾ’ ಸಿನಿಮಾ ಗಮನ ಸೆಳೆಯುತ್ತಿದೆ. ಸದ್ಯದಲ್ಲೇ ಸಿನಿಮಾ ಬಿಡುಗಡೆ ಆಗಲಿದೆ.
ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ರಾಮ್ ಪ್ರಸಾದ್ ಅವರು ಮಾತನಾಡಿದರು. ‘ಚಿತ್ರರಂಗದಲ್ಲಿ ನಾನು 40 ವರ್ಷ ಆಡಿಯೋ ಕಂಪನಿ ಮಾಲೀಕನಾಗಿ, ನಿರ್ಮಾಪಕನಾಗಿ ಕೆಲಸ ಮಾಡಿದ್ದೇನೆ. ಈಗ ನನ್ನ ಮಗನನ್ನು ಲಾಂಚ್ ಮಾಡುತ್ತಿದ್ದೇನೆ. ಈ ಸಿನಿಮಾವನ್ನು 4 ವರ್ಷಗಳ ಹಿಂದೆಯೇ ಶುರು ಮಾಡಿದ್ದೆವು. ಹಲವಾರು ಕಾರಣಗಳಿಂದ ತಡವಾಯಿತು. ನಾಯಕ ಇಲ್ಲಿ ಮೂರು ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಚಿಕ್ಕಮಗಳೂರಿನಲ್ಲಿ ಸೆಟ್ ಹಾಕಿ ಶೂಟಿಂಗ್ ಮಾಡುವಾಗ ಸೆಟ್ ಸುಟ್ಟು ಸ್ವಲ್ಪ ತೊಂದರೆಯಾಯಿತು’ ಎಂದು ಅವರು ಹೇಳಿದರು.
ಇದನ್ನೂ ಓದಿ: ‘ಜೋಗಿ’ಗೆ 20 ವರ್ಷ; ಪ್ರೇಮ್-ಶಿವಣ್ಣ ಕಾಂಬಿನೇಷನ್ ಚಿತ್ರದ ಕಲೆಕ್ಷನ್ ಎಷ್ಟಾಗಿತ್ತು?
‘ನಿರ್ದೇಶಕ ಶಶಿಧರ್ ಬಹಳ ಚೆನ್ನಾಗಿ ಕಥೆ, ಚಿತ್ರಕಥೆ ಬರೆದಿದ್ದಾರೆ. ನಮ್ಮ ಸಿನಿಮಾ ಈಗ ಬಿಡುಗಡೆಗೆ ಸಿದ್ಧವಿದೆ. ಸೆನ್ಸಾರ್‌ಗೆ ಹೋಗಲು ಅಣಿಯಾಗಿದೆ. ಜನವರಿ ವೇಳೆಗೆ ರಿಲೀಸ್ ಮಾಡುವ ಯೋಜನೆಯಿದೆ’ ಎಂದು ನಿರ್ಮಾಪಕರು ಹೇಳಿದರು. ನಿರ್ದೇಶಕ ಶಶಿಧರ್ ಮಾತನಾಡಿ, ‘ಎಲ್ಲ ರೀತಿಯ ಮನರಂಜನಾತ್ಮಕ ಅಂಶಗಳೂ ನಮ್ಮ ಸಿನಿಮಾದಲ್ಲಿವೆ. ಮಂಗಳೂರು, ಚಿಕ್ಕಮಗಳೂರು, ದಾಂಡೇಲಿ, ಆಗುಂಬೆ ಮತ್ತು ಬೆಂಗಳೂರಲ್ಲಿ ಚಿತ್ರೀಕರಣ ಮಾಡಿದ್ದೇವೆ’ ಎಂದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




