
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ‘ಕಾಂತಾರ’ ಸಿನಿಮಾ ದೇಶವ್ಯಾಪಿ ಜನಮೆಚ್ಚುಗೆ ಗಳಿಸಿತ್ತು. ಈಗ ಆ ಸಿನಿಮಾದ ಪ್ರೀಕ್ವೆಲ್ ಸಿದ್ಧವಾಗುತ್ತಿದೆ. ಅದಕ್ಕೆ ‘ಕಾಂತಾರ: ಚಾಪ್ಟರ್ 1’ (Kantara Chapter 1) ಎಂದು ಹೆಸರು ಇಡಲಾಗಿದೆ. ಈ ಸಿನಿಮಾ ಅಕ್ಟೋಬರ್ 2ರಂದು ಬಿಡುಗಡೆ ಆಗಲಿದೆ. ಅದಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಅಕ್ಟೋಬರ್ 2ರಂದು ‘ಕಾಂತಾರ: ಚಾಪ್ಟರ್ 1’ ತೆರೆಕಂಡರೆ ಈ ಸಿನಿಮಾದ ಎದುರು ಬೇರೆ ಸಿನಿಮಾಗಳು ಬಿಡುಗಡೆ ಆಗಲು ಹಿಂದೇಟು ಹಾಕುತ್ತವೆ. ಯಾಕೆಂದರೆ, ‘ಕಾಂತಾರ: ಚಾಪ್ಟರ್ 1’ ಹವಾ ಆ ರೀತಿ ಇದೆ. ಹಾಗಿದ್ದರೂ ಕೂಡ ಅಕ್ಷಯ್ ಕುಮಾರ್ ನಟನೆಯ ‘ಜಾಲಿ ಎಲ್ಎಲ್ಬಿ 3’ (Jolly LLB 3) ಸಿನಿಮಾ ಅದೇ ದಿನ ರಿಲೀಸ್ ಆಗುವ ಸಾಧ್ಯತೆ ಇದೆ.
ಈಗಾಗಲೇ ‘ಜಾಲಿ ಎಲ್ಎಲ್ಬಿ’ ಮತ್ತು ‘ಜಾಲಿ ಎಲ್ಎಲ್ಬಿ 2’ ಸಿನಿಮಾಗಳು ಹಿಟ್ ಆಗಿವೆ. ಈಗ ಅದರ ಮೂರನೇ ಪಾರ್ಟ್ ‘ಜಾಲಿ ಎಲ್ಎಲ್ಬಿ 3’ ನಿರ್ಮಾಣ ಆಗುತ್ತಿದೆ. ಈ ಮೊದಲು ಈ ಚಿತ್ರವನ್ನು ಸೆಪ್ಟೆಂಬರ್ 19ರಂದು ತೆರೆಕಾಣಿಸುವ ಪ್ಲ್ಯಾನ್ ಇತ್ತು. ಆದರೆ ಈಗ ಚಿತ್ರತಂಡದವರು ನಿರ್ಧಾರ ಬದಲಿಸಿದಂತಿದೆ. ಸೆಪ್ಟೆಂಬರ್ 19ರ ಬದಲು ಅಕ್ಟೋಬರ್ 2ರಂದು ಬಿಡುಗಡೆ ಮಾಡುವುದು ಸೂಕ್ತ ಎಂದು ಚಿತ್ರತಂಡದ ಒಳಗೆ ಚರ್ಚೆ ನಡೆದಿದೆ ಎನ್ನಲಾಗಿದೆ.
‘ಜಾಲಿ ಎಲ್ಎಲ್ಬಿ 3’ ಸಿನಿಮಾಗೆ ಸುಭಾಷ್ ಕಪೂರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅಕ್ಷಯ್ ಕುಮಾರ್ ಮತ್ತು ಅರ್ಷದ್ ವಾರ್ಸಿ ಅವರು ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದಾರೆ. ಹಾಗಾಗಿ ಅಭಿಮಾನಿಗಳಿಗೆ ನಿರೀಕ್ಷೆ ಜಾಸ್ತಿ ಇದೆ. ಗಾಂಧಿ ಜಯಂತಿ ದಿನ (ಅಕ್ಟೋಬರ್ 2) ಸರ್ಕಾರಿ ರಜೆ ಇರುತ್ತದೆ. ಹಾಗಾಗಿ ಆ ದಿನವೇ ಸಿನಿಮಾ ತೆರೆಕಂಡರೆ ಹೆಚ್ಚು ಕಲೆಕ್ಷನ್ ಆಗುತ್ತದೆ ಎಂಬುದು ಚಿತ್ರತಂಡದ ಲೆಕ್ಕಾಚಾರ.
ಇತ್ತ, ‘ಕಾಂತಾರ: ಚಾಪ್ಟರ್ 1’ ತಂಡದವರು ಬಹಳ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚೆಗೆ ರಿಷಬ್ ಶೆಟ್ಟಿ ಅವರ ಜನ್ಮದಿನದ ಪ್ರಯುಕ್ತ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಅದನ್ನು ನೋಡಿದ ಅಭಿಮಾನಿಗಳಿಗೆ ಕೌತುಕ ಹೆಚ್ಚಾಗಿದೆ. ಈ ಸಿನಿಮಾವನ್ನು ‘ಹೊಂಬಾಳೆ ಫಿಲ್ಮ್ಸ್’ ನಿರ್ಮಾಣ ಮಾಡುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ; ಇಲ್ಲಿದೆ ಸೆಲೆಬ್ರೇಷನ್ ವಿಡಿಯೋ
ರಿಷಬ್ ಶೆಟ್ಟಿ ಅವರು ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಹೊಂದಿದ್ದಾರೆ. ‘ಕಾಂತಾರ’ ಸಿನಿಮಾದ ಯಶಸ್ಸಿನಿಂದ ಅವರಿಗೆ ಈ ಪರಿ ಜನಪ್ರಿಯತೆ ಸಿಕ್ಕಿತು. ಬಾಲಿವುಡ್ ಹೀರೋಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಅವರು ಬೆಳೆದಿದ್ದಾರೆ. ಬಾಲಿವುಡ್ನಿಂದಲೂ ಅವರಿಗೆ ಅವಕಾಶಗಳು ಬರುತ್ತಿವೆ. ನಟನಾಗಿ, ನಿರ್ದೇಶಕನಾಗಿ ಅವರಿಗೆ ಸಖತ್ ಬೇಡಿಕೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.