K Shivaram: ಕೆ. ಶಿವರಾಮ್​ ಬಯೋಪಿಕ್​ನಲ್ಲಿ ನಟಿಸಲು ಪುನೀತ್​ಗೆ ಇತ್ತು ಆಸಕ್ತಿ; ಆದರೆ ವಿಧಿ..

|

Updated on: Feb 29, 2024 | 6:53 PM

ತುಂಬ ಬಡತನದಿಂದ ಬಂದ ಕೆ. ಶಿವರಾಮ್​ ಅವರು ಐಎಎಸ್​ ಅಧಿಕಾರಿ ಆಗಿ ಸಾಧನೆ ಮಾಡಿದ್ದರು. ಸಿನಿಮಾದಲ್ಲೂ ಜನಮೆಚ್ಚುಗೆ ಗಳಿಸಿದ್ದರು. ಅವರ ಜೀವನದ ಕಥೆಯನ್ನು ಸಿನಿಮಾ ಮಾಡುವ ಆಲೋಚನೆ ಇತ್ತು. ಪುನೀತ್ ರಾಜ್​ಕುಮಾರ್​ ಕೂಡ ಆಸಕ್ತಿ ತೋರಿಸಿದ್ದರು. ಇಂದು ಕೆ. ಶಿವರಾಮ್​ ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು, ಬೆಂಬಲಿಗರು ಹಾಗೂ ಅನೇಕ ಗಣ್ಯರು ಪ್ರಾರ್ಥಿಸುತ್ತಿದ್ದಾರೆ.

K Shivaram: ಕೆ. ಶಿವರಾಮ್​ ಬಯೋಪಿಕ್​ನಲ್ಲಿ ನಟಿಸಲು ಪುನೀತ್​ಗೆ ಇತ್ತು ಆಸಕ್ತಿ; ಆದರೆ ವಿಧಿ..
K Shivaram, Puneeth Rajkumar
Follow us on

ಐಎಎಸ್​ ಅಧಿಕಾರಿಯಾಗಿ, ಸಿನಿಮಾ ನಟನಾಗಿ, ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದ ಕೆ. ಶಿವರಾಮ್​ (K Shivaram) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರ ಬದುಕಿನ ಪಯಣವೇ ಒಂದು ರೋಚಕ ಕಥೆ. ತುಂಬ ಬಡತನದ ಕುಟುಂಬದಲ್ಲಿ ಹುಟ್ಟಿದ ಅವರು ನಂತರ ಎತ್ತರದ ಸ್ಥಾನಕ್ಕೆ ತಲುಪಿದರು. 40ನೇ ವಯಸ್ಸಿನಲ್ಲಿ ಸಿನಿಮಾ ಹೀರೋ ಆಗಿ ಯಶಸ್ಸು ಕಂಡರು. ಐಎಎಸ್​ ಅಧಿಕಾರಿ (IAS Officer) ಆಗಿದ್ದಾಗ ಲೆಕ್ಕವಿಲ್ಲದಷ್ಟು ಜನರಿಗೆ ಸಹಾಯ ಮಾಡಿದರು. ಈ ಎಲ್ಲ ಕಾರಣದಿಂದಾಗಿ ಅವರ ಜೀವನ ಅನೇಕರಿಗೆ ಸ್ಫೂರ್ತಿ ಆಗಿತ್ತು. ಅವರ ಜೀವನವನ್ನು ಆಧರಿಸಿ ಸಿನಿಮಾ ಮಾಡಲು ಪುನೀತ್​ ರಾಜ್​ಕುಮಾರ್​ (Puneeth Rajkumar) ಕೂಡ ಆಸಕ್ತಿ ತೋರಿಸಿದ್ದರು!

ಕೆಲವು ವರ್ಷಗಳ ಹಿಂದೆ ನಿರ್ದೇಶಕ ರಘುರಾಮ್​ ಅವರಿಗೆ ಕೆ. ಶಿವರಾಮ್​ ಒಂದು ಸಂದರ್ಶನ ನೀಡಿದ್ದರು. ಆ ಸಂದರ್ಶನದಲ್ಲಿ ತಮ್ಮ ಬಯೋಪಿಕ್​ ಕುರಿತು ಅವರು ಮಾತನಾಡಿದ್ದರು. ಒಂದು ವೇಳೆ ತಮ್ಮ ಜೀವನಾಧಾರಿತ ಸಿನಿಮಾ ಬಂದರೆ ಅದರಲ್ಲಿ ಪುನೀತ್​ ರಾಜ್​ಕುಮಾರ್ ನಟಿಸಬೇಕು ಎಂದು ಶಿವರಾಮ್​ ಅವರು ಹಂಬಲ ವ್ಯಕ್ತಪಡಿಸಿದ್ದರು. ಆ ವಿಷಯ ಪುನೀತ್​ ರಾಜ್​ಕುಮಾರ್​ ಅವರ ಕಿವಿಗೂ ತಲುಪಿತ್ತು. ‘ಹಾಗಾದರೆ ಮಾಡೋಣ’ ಎಂದು ಪುನೀತ್​ ಅವರು ಗ್ರೀನ್​ ಸಿಗ್ನಲ್​ ನೀಡಿದ್ದರಂತೆ. ಆದರೆ ಈಗ ಪುನೀತ್​ ಮತ್ತು ಶಿವರಾಮ್​ ಇಬ್ಬರೂ ನಮ್ಮೊಂದಿಗೆ ಇಲ್ಲ. ಅದು ವಿಧಿಯ ಲೆಕ್ಕಾಚಾರ.

ಪುನೀತ್​ ರಾಜ್​ಕುಮಾರ್​ ಅವರ ಮೇಲೆ ಕೆ. ಶಿವರಾಮ್​ ಅಪಾರ ಅಭಿಮಾನ ಇಟ್ಟುಕೊಂಡಿದ್ದರು. ಹಾಗಾಗಿ ಪುನೀತ್​ ನಟನೆಯ ಕೆಲವು ಸಿನಿಮಾಗಳನ್ನು ಅವರು ವಿತರಣೆ ಮಾಡಿದ್ದರು. ‘ಹುಡುಗರು’, ‘ವಂಶಿ’, ‘ರಾಮ್​’ ಹಾಗೂ ‘ಅರಸು’ ಸಿನಿಮಾಗಳನ್ನು ಕೆ. ಶಿವರಾಮ್​ ಅವರು ವಿತರಣೆ ಮಾಡಿದ್ದರು. ಅಂದಹಾಗೆ, ಚಿತ್ರರಂಗದಲ್ಲಿ ವಿತರಕ ಆಗಬೇಕು ಎಂಬ ಯಾವುದೇ ಉದ್ದೇಶ ಅವರಿಗೆ ಇರಲಿಲ್ಲ. ಪುನೀತ್​ ರಾಜ್​ಕುಮಾರ್​ ಮೇಲಿನ ಅಪ್ಪಟ ಅಭಿಮಾನದಿಂದ ಮಾತ್ರ ಅವರು ಈ ಸಿನಿಮಾಗಳನ್ನು ವಿತರಣೆ ಮಾಡಿದ್ದಾಗಿ ಹೇಳಿಕೊಂಡಿದ್ದರು.

ಇದನ್ನೂ ಓದಿ: K Shivaram: ಸಿನಿಮಾ ಹೀರೋ ಆಗಿದ್ದ ಮೊದಲ ಐಎಎಸ್​ ಅಧಿಕಾರಿ ಕೆ. ಶಿವರಾಮ್​

ಕೆಲವು ದಿನಗಳಿಂದ ಕೆ. ಶಿವರಾಮ್​ ಅವರ ಆರೋಗ್ಯ ಹದಗೆಟ್ಟಿತ್ತು. ಕೂಡಲೇ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇತ್ತೀಚೆಗೆ ಅವರ ಪರಿಸ್ಥಿತಿ ಗಂಭೀರ ಆಗಿತ್ತು. ರಾಜಕೀಯ ಕ್ಷೇತ್ರದ ಅನೇಕ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಆದರೆ ಶಿವರಾಮ್​ ಅವರು ಚಿಕಿತ್ಸೆಗೆ ಸ್ಪಂದಿಸಿಲ್ಲ. ಇಂದು (ಫೆಬ್ರವರಿ 29) ಸಂಜೆ 4.18ರ ಸಮಯಕ್ಕೆ ಅವರು ಇಹಲೋಕ ತ್ಯಜಿಸಿದರು. ಶುಕ್ರವಾರ (ಮಾ.1) ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆ ತನಕ ಅಂತಿಮ ದರ್ಶನಕ್ಕೆ ಅವಕಾಶ ಇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.