ಈ ವರ್ಷದ ಕೊನೆಯಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸ ಚೈತನ್ಯ ಮೂಡಿದೆ. ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ (Darshan) ನಟನೆಯ ‘ಕಾಟೇರ’ ಸಿನಿಮಾ ಸೂಪರ್ ಹಿಟ್ ಆಗಿದೆ. ಭರ್ಜರಿ ಓಪನಿಂಗ್ ಪಡೆದುಕೊಂಡ ಈ ಸಿನಿಮಾ ಎರಡನೇ ದಿನ ಕೂಡ ಅಬ್ಬರಿಸಿದೆ. ಬಾಕ್ಸ್ ಆಫೀಸ್ನಲ್ಲಿ ತನ್ನ ನಾಗಾಲೋಟ ಮುಂದುವರಿಸಿದೆ. ಪ್ರತಿ ದಿನವೂ ಬಹುಕೋಟಿ ರೂಪಾಯಿ ಕಲೆಕ್ಷನ್ (Kaatera Movie Collection) ಮಾಡುತ್ತಾ ಮುನ್ನುಗ್ಗುತ್ತಿದೆ. ಚಿತ್ರತಂಡದ ಆಪ್ತ ಮೂಲಗಳು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಎರಡು ದಿನಕ್ಕೆ ‘ಕಾಟೇರ’ ಸಿನಿಮಾ (Kaatera Movie) ಗಳಿಸಿರುವುದು ಬರೋಬ್ಬರಿ 37.14 ಕೋಟಿ ರೂಪಾಯಿ.
ಮೊದಲ ದಿನವಾದ ಡಿಸೆಂಬರ್ 29ರಂದು ‘ಕಾಟೇರ’ ಸಿನಿಮಾ 19.79 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಎರಡನೇ ದಿನ 17.35 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಅನೇಕ ಕಡೆಗಳಲ್ಲಿ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಎರಡು ದಿನಕ್ಕೆ ಚಿತ್ರದ ಒಟ್ಟು ಕಲೆಕ್ಷನ್ 37.14 ಕೋಟಿ ರೂಪಾಯಿ ಆಗಿದೆ. ಇದರಿಂದ ಚಿತ್ರತಂಡಕ್ಕೆ ಸಖತ್ ಖುಷಿ ಆಗಿದೆ. ಅಂತಿಮವಾಗಿ ಈ ಚಿತ್ರದ ಕಲೆಕ್ಷನ್ ಎಷ್ಟಾಗಲಿದೆ ಎಂಬುದನ್ನು ಕಾದುನೋಡಬೇಕು.
ಭಾನುವಾರ (ಡಿಸೆಂಬರ್ 31) ‘ಕಾಟೇರ’ ಸಿನಿಮಾಗೆ ಇನ್ನೂ ಹೆಚ್ಚಿನ ಕಲೆಕ್ಷನ್ ಆಗುವ ನಿರೀಕ್ಷೆ ಇದೆ. ದರ್ಶನ್ ಅಭಿಮಾನಿಗಳು ಈ ಸಿನಿಮಾವನ್ನು ಸಖತ್ ಮೆಚ್ಚಿಕೊಂಡಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಅವರ ಕೆಲಸಕ್ಕೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಕೇವಲ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದೆ. ಹಾಗಿದ್ದರೂ ಕೂಡ ಈ ಪರಿ ಕಲೆಕ್ಷನ್ ಮಾಡುತ್ತಿರುವುದು ಗಮನಾರ್ಹ ಬೆಳವಣಿಗೆ.
ಇದನ್ನೂ ಓದಿ: Kaatera Movie Review: ಸಂಘರ್ಷದ ಕಥೆಯೊಂದಿಗೆ ಸಮಾಜಕ್ಕೆ ಸಂದೇಶ ನೀಡುವ ‘ಕಾಟೇರ’
ಪ್ರೇಕ್ಷಕರಿಗೆ ಥ್ಯಾಂಕ್ಸ್ ಹೇಳಿದ ದರ್ಶನ್:
‘ಕಾಟೇರ’ ಯಶಸ್ಸಿನಿಂದ ದರ್ಶನ್ ಖುಷಿ ಆಗಿದ್ದಾರೆ. ಅದಕ್ಕಾಗಿ ಅವರು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ‘ಏನೆಂದು ನಾ ಹೇಳಲಿ.. ನಿಮ್ಮಯ ಪ್ರೀತಿ-ಆಶೀರ್ವಾದಕೆ ಕೊನೆಯೆಲ್ಲಿ? ಧನ್ಯೋಸ್ಮಿ ಸೆಲೆಬ್ರಿಟಿಸ್. ಹೃದಯಪೂರ್ವಕ ಧನ್ಯವಾದಗಳು ಕರ್ನಾಟಕ. ಈ ಪ್ರೀತಿಯ ಚಪ್ಪಾಳೆಯಿಂದ ನಮ್ಮ ಕಾಟೇರ ಚಿತ್ರತಂಡದ ಮನ ತುಂಬಿದೆ. ಮಾತುಗಳೇ ಬರುತ್ತಿಲ್ಲ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.