ಕೊರೊನಾ ವೈರಸ್ ನಿಯಂತ್ರಿಸಲು ಎಲ್ಲ ಕಡೆಗಳಲ್ಲಿ ಲಾಕ್ಡೌನ್ ಜಾರಿ ಆಗಿದೆ. ಈ ಕಷ್ಟಕಾಲದಲ್ಲಿ ಅನೇಕರಿಗೆ ಉದ್ಯೋಗವಿಲ್ಲ. ಹಾಗಾಗಿ ಜೀವನ ನಡೆಸುವುದು ಕಷ್ಟ ಆಗಿದೆ. ಹಳ್ಳಿಗಳಲ್ಲಿ ಇರುವವರ ಪರಿಸ್ಥಿತಿ ಕೂಡ ಕಠಿಣವಾಗಿದೆ. ಹಾಗಾಗಿ ಸ್ಯಾಂಡಲ್ವುಡ್ ನಿರ್ದೇಶಕ ಆರ್. ಚಂದ್ರು ಅವರು ಗ್ರಾಮೀಣ ಭಾಗದ ಜನರ ಕೈ ಹಿಡಿದಿದ್ದಾರೆ. ತಮ್ಮ ಹುಟ್ಟೂರಿನವರ ನೆರವಿಗೆ ಅವರು ಧಾವಿಸಿದ್ದಾರೆ. ಬೆಂಗಳೂರಿಗೆ ಬಂದು ಯಶಸ್ಸು ಕಂಡ ಬಳಿಕ ಮತ್ತೆ ಹಳ್ಳಿಗಳ ಕಡೆಗೆ ಗಮನ ಹರಿಸುವವರು ಕಡಿಮೆ. ಆದರೆ ಆರ್. ಚಂದ್ರು ಈ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಊರಿನ ಜನರನ್ನು ಮರೆತಿಲ್ಲ.
ನಿರ್ದೇಶಕ ಆರ್. ಚಂದ್ರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಕೇಶಾವರ ಗ್ರಾಮದವರು. ಲಾಕ್ಡೌನ್ನಿಂದಾಗಿ ಹಳ್ಳಿಗರು ಕೂಡ ಕಷ್ಟಪಡುತ್ತಿದ್ದಾರೆ. ಇದನ್ನು ಮನಗಂಡಿರುವ ಚಂದ್ರು ಅವರು ಕೇಶಾವರ ಗ್ರಾಮದ ಸುಮಾರು ಸಾವಿರ ಮನೆಗಳಿಗೆ ತಲಾ 25 ಕೆಜಿಯ ಅಕ್ಕಿ ಮೂಟೆಗಳನ್ನು ನೀಡಿದ್ದಾರೆ. ಆ ಮೂಲಕ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.
‘ಚಿತ್ರರಂಗದಲ್ಲಿ ನಿರ್ದೇಶಕನಾಗಿದ್ದರೂ ನಾನು ಕೂಡ ರೈತನ ಮಗ. ಕೊರೊನಾ ಸಂಕಷ್ಟದ ಕಾಲದಲ್ಲಿ ನನ್ನೂರಿನ ಜನರಿಗೆ ನೆರವಾಗುವುದು ನನ್ನ ಧರ್ಮ. ಹುಟ್ಟೂರಿನ ಮಣ್ಣಿನ ಋಣ ತೀರಿಸಲು ನಾನು ಇಂದು ಮತ್ತು ಎಂದೆಂದಿಗೂ ಮುಂದಾಗಿರುತ್ತೇನೆ’ ಎಂದು ಆರ್. ಚಂದ್ರು ಹೇಳಿದ್ದಾರೆ. ಚಿತ್ರರಂಗದ ಅನೇಕರಿಗೂ ಸಹ ಚಂದ್ರು ಸಹಾಯ ಮಾಡಿದ್ದಾರೆ. ಅವರ ರೀತಿಯೇ ಉಪೇಂದ್ರ, ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ, ವಿಜಯ್ ಕಿರಗಂದೂರು, ಸತೀಶ್ ನೀನಾಸಂ, ಯಶ್ ಸೇರಿದಂತೆ ಅನೇಕರು ಜನರಿಗೆ ನೆರವು ನೀಡುತ್ತಿದ್ದಾರೆ.
2008ರಲ್ಲಿ ‘ತಾಜ್ ಮಹಲ್’ ಸಿನಿಮಾ ಮೂಲಕ ನಿರ್ದೇಶಕರಾಗಿ ಚಂದನವನಕ್ಕೆ ಕಾಲಿಟ್ಟ ಆರ್. ಚಂದ್ರುಗೆ ಮೊದಲ ಸಿನಿಮಾದಲ್ಲಿಯೇ ಭರ್ಜರಿ ಯಶಸ್ಸು ಸಿಕ್ಕಿತು. ಬಳಿಕ ಪ್ರೇಮ್ ಕಹಾನಿ, ಮೈಲಾರಿ, ಚಾರ್ಮಿನಾರ್, ಬ್ರಹ್ಮ ಮುಂತಾದ ಸಿನಿಮಾಗಳ ಮೂಲಕ ಗಮನ ಸೆಳೆದರು. ನಿರ್ದೇಶನದಲ್ಲಿ ಯಶಸ್ಸು ಗಳಿಸಿದ ನಂತರ ನಿರ್ಮಾಪಕರಾಗಿಯೂ ಅವರು ಬಡ್ತಿ ಪಡೆದುಕೊಂಡರು. 2019ರಲ್ಲಿ ಉಪೇಂದ್ರ ಜೊತೆ ಮಾಡಿದ ‘ಐ ಲವ್ ಯೂ’ ಸಿನಿಮಾ ಕೂಡ ಅವರಿಗೆ ಗೆಲುವು ತಂದುಕೊಟ್ಟಿತು. ಈಗ ಮತ್ತೆ ಉಪೇಂದ್ರ ನಾಯಕತ್ವದಲ್ಲಿ ಅವರು ‘ಕಬ್ಜ’ ಸಿನಿಮಾ ನಿರ್ದೇಶಿಸುತ್ತಿದ್ದಾರೆ.
ಹಲವು ದಿನಗಳ ಹಿಂದೆಯೇ ‘ಕಬ್ಜ’ ಚಿತ್ರದ ಶೂಟಿಂಗ್ ಆರಂಭ ಆಗಿತ್ತು. ರೆಟ್ರೋ ಕಥೆಯುಳ್ಳ ಈ ಚಿತ್ರಕ್ಕೆ ಬೃಹತ್ ಸೆಟ್ಗಳನ್ನು ಹಾಕಿ ಚಿತ್ರೀಕರಣ ಮಾಡಲಾಗುತ್ತಿತ್ತು. ಆದರೆ ಲಾಕ್ಡೌನ್ ಜಾರಿ ಆದ ಬಳಿಕ ಶೂಟಿಂಗ್ ಸ್ಥಗಿತಗೊಳಿಸಲಾಗಿದೆ. ಕನ್ನಡ ಮಾತ್ರವಲ್ಲದೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಲವು ಭಾಷೆಗಳಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಬಹುಭಾಷಾ ಕಲಾವಿದರು ಇದರಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ:
‘ಕಬ್ಜ’ ಮಾಡಲು ಲಾಂಗ್ ಹಿಡಿದ ಸ್ಯಾಂಡಲ್ವುಡ್ನ ಸೂಪರ್ ಸ್ಟಾರ್ ಉಪೇಂದ್ರ
Upendra: ನಟ ಉಪೇಂದ್ರ ತಲೆಗೆ ರಾಡ್ನಿಂದ ಪೆಟ್ಟು! ಕಬ್ಜ ಸಿನಿಮಾ ಶೂಟಿಂಗ್ ವೇಳೆ ಅವಘಡ