ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಪ್ರೀತಿಸುವ ಜನರ ಸಂಖ್ಯೆ ಅಪಾರ. ಆದರೆ ಇಂದು ಪುನೀತ್ ನಮ್ಮ ಜೊತೆ ಇಲ್ಲ ಎಂಬ ಕೊರಗು ತೀವ್ರವಾಗಿದೆ. ಅದರ ನಡುವೆಯೂ ಕೆಲವು ವಿಶೇಷ ಘಟನೆಗಳು ವರದಿ ಆಗುತ್ತಿವೆ. ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಅಮರವಾಗಿಸುವ ಕೆಲಸ ಎಲ್ಲೆಡೆ ನಡೆಯುತ್ತಿದೆ. ರಸ್ತೆ, ವೃತ್ತ, ಪಾರ್ಕ್ ಮುಂತಾದ ಸಾರ್ವಜನಿಕ ಸ್ಥಳಗಳಿಗೆ ಪುನೀತ್ ರಾಜ್ಕುಮಾರ್ ಹೆಸರನ್ನು ಇಡುವ ಕಾರ್ಯ ನಡೆದಿದೆ. ಈಗ ಕಲಬುರಗಿಯ (Kalaburagi) ದಂಪತಿಗಳು ತಮ್ಮ ಮಗುವಿಗೆ ಪುನೀತ್ ರಾಜ್ಕುಮಾರ್ ಎಂದು ನಾಮಕರಣ ಮಾಡಿದ್ದಾರೆ. ಆ ಮೂಲಕ ಅಪ್ಪು ಮೇಲಿನ ಅಭಿಮಾನವನ್ನು ಮೆರೆದಿದ್ದಾರೆ. ಪುನೀತ್ ಎಂದರೆ ಜನರಿಗೆ ಎಷ್ಟು ಇಷ್ಟ ಎಂಬುದಕ್ಕೆ ಇಂಥ ಘಟನೆಗಳೇ ಸಾಕ್ಷಿ. ಸದ್ಯ ಈ ದಂಪತಿ ಮತ್ತು ಮಗುವಿನ ಫೋಟೋ ವೈರಲ್ ಆಗುತ್ತಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಾತನೂರು ಗ್ರಾಮದ ಸಿದ್ದು ಮತ್ತು ಕಾವೇರಿ ದಂಪತಿಗೆ ಪುನೀತ್ ರಾಜ್ಕುಮಾರ್ ಎಂದರೆ ಅಚ್ಚುಮೆಚ್ಚು. ಹಾಗಾಗಿ ತಮ್ಮ ಮೊದಲನೇ ಮಗುವಿಗೆ ಪುನೀತ್ ರಾಜ್ಕುಮಾರ್ ಎಂದು ನಾಮಕರಣ ಮಾಡಿದ್ದಾರೆ. ಡಿ.5ರಂದು ಈ ಜೋಡಿಗೆ ಗಂಡು ಮಗು ಜನಿಸಿತು. ಹೆರಿಗೆಗೂ ಮುನ್ನವೇ ಅವರು ಈ ತೀರ್ಮಾನಕ್ಕೆ ಬಂದಿದ್ದರು. ಒಂದುವೇಳೆ ಗಂಡು ಮಗು ಜನಿಸಿದರೆ ಪುನೀತ್ ರಾಜ್ಕುಮಾರ್ ಎಂದು ನಾಮಕರಣ ಮಾಡಲು ದಂಪತಿ ನಿರ್ಧರಿಸಿದ್ದರು. ಅವರ ಆಸೆ ನೆರವೇರಿದೆ.
ಅಪ್ಪು ಇಲ್ಲದೇ ಕಳೆಯಿತು ಎರಡು ತಿಂಗಳು:
ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಅವರು ಇಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳಲು ಯಾರಿಗೂ ಸಾಧ್ಯವಾಗುತ್ತಿಲ್ಲ. ಭೌತಿಕವಾಗಿ ಪುನೀತ್ ನಮ್ಮೊಂದಿಗೆ ಇಲ್ಲದೇ ಇರಬಹುದು. ಆದರೆ ಅಭಿಮಾನಿಗಳ ಎದೆಯಲ್ಲಿ ಪುನೀತ್ ಎಂದೆಂದಿಗೂ ಅಮರ. ಕಂಠೀರವ ಸ್ಡುಡಿಯೋ ಆವರಣದಲ್ಲಿ ಇರುವ ಅಪ್ಪು ಸಮಾಧಿಗೆ ಪ್ರತಿದಿನ ನೂರಾರು ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ. ಪುನೀತ್ ನಿಧನರಾಗಿ ಎರಡು ತಿಂಗಳು ಕಳೆದಿದ್ದರೂ ಕೂಡ ಸಮಾಧಿಗೆ ಭೇಟಿ ನೀಡುವ ಜನರ ಸಂಖ್ಯೆ ಕಡಿಮೆ ಆಗಿಲ್ಲ.
ಪುನೀತ್ ನಿಧನರಾಗಿ ಎರಡು ತಿಂಗಳು ಕಳೆದ ಹಿನ್ನೆಲೆಯಲ್ಲಿ ಡಿ.29ರಂದು ಅವರ ಕುಟುಂಬದವರು ಬಂದು ಸಮಾಧಿಗೆ ಪೂಜೆ ಸಲ್ಲಿಸಿದ್ದರು. ಪುನೀತ್ ಅವರ ಪ್ರೇರಣೆಯಿಂದ ಅನೇಕರು ನೇತ್ರದಾನ ಮಾಡುತ್ತಿದ್ದಾರೆ. ಆ ಮೂಲಕ ಅಪ್ಪು ಅಭಿಮಾನಿಗಳು ಎಲ್ಲರಿಗೂ ಮಾದರಿ ಆಗುತ್ತಿದ್ದಾರೆ. ಪುನೀತ್ ನಿಧನದ ಬಳಿಕ ಜನರಲ್ಲಿ ನೇತ್ರದಾನದ ಬಗ್ಗೆ ಜಾಗೃತಿ ಹೆಚ್ಚಿದೆ. ನೇತ್ರದಾನಕ್ಕೆ ನೋಂದಣಿ ಮಾಡಿಕೊಳ್ಳುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದು ಸಂತಸದ ವಿಚಾರ.
ಇದನ್ನೂ ಓದಿ:
ಅಪ್ಪು ಇಲ್ಲದೇ 2 ತಿಂಗಳು: ಪುನೀತ್ ನಿಧನದ ಬಳಿಕ ನಡೆದ 10 ಪ್ರಮುಖ ಘಟನೆಗಳೇನು?
ಅಪ್ಪು ಸಮಾಧಿ ಬಳಿ ಅಶ್ವಿನಿ ಮತ್ತು ಮಕ್ಕಳ ಕಣ್ಣೀರು; ಪುನೀತ್ ನಿಧನರಾಗಿ ಇಂದಿಗೆ 2 ತಿಂಗಳು
Published On - 9:54 am, Fri, 31 December 21