
ಕಮಲ್ ಹಾಸನ್ (Kamal Haasan) ಅವರು ಕನ್ನಡ ಭಾಷೆಯ ಬಗ್ಗೆ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿದೆ. ಕಮಲ್ ಹಾಸನ್ ಕ್ಷಮೆ ಕೇಳದ ಹೊರತು ಅವರ ನಟನೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಮಾಡಲು ಬಿಡೆವು ಎಂದು ಕನ್ನಡಪರ ಸಂಘಟನೆಗಳು ಪಟ್ಟು ಹಿಡಿದಿವೆ. ಸಿನಿಮಾ ಬಿಡುಗಡೆಗೆ ಅವಕಾಶ ಮಾಡಿಸಿಕೊಡಬೇಕೆಂದು ಕಮಲ್ ಹಾಸನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದೆಲ್ಲದರ ನಡುವೆ ಕಮಲ್ ಹಾಸನ್ ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು ಅವರಿಗೆ ಪತ್ರ ಬರೆದಿದ್ದಾರೆ.
ಥಗ್ ಲೈಫ್ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ದಂತಕಥೆ ಡಾ. ರಾಜ್‌ಕುಮಾರ್ ಹಾಗು ಶಿವರಾಜ್‌ಕುಮಾರ್ ಅವರ ಬಗ್ಗೆ ಪ್ರೀತಿಯಿಂದ ಹೇಳಲಾದ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ, ನನ್ನ ಉದ್ದೇಶದ ವಿರುದ್ಧವಾಗಿ ಅದನ್ನು ಅರ್ಥ ಮಾಡಿಕೊಳ್ಳಲಾಗಿದೆ. ನಾವೆಲ್ಲರೂ ಒಂದೇ ಕುಟುಂಬದವರು ಎಂಬುದು ನನ್ನ ಉದ್ದೇಶವಾಗಿತ್ತು, ಕನ್ನಡ ಭಾಷೆಯ ಹಿರಿಮೆಯನ್ನು ಕುಗ್ಗಿಸುವುದು ನನ್ನ ಉದ್ದೇಶ ಆಗಿರಲಿಲ್ಲ. ಕನ್ನಡ ಭಾಷೆಯ ಶ್ರೀಮಂತ ಇತಿಹಾಸದ ಬಗ್ಗೆ ಯಾವುದೇ ಅನುಮಾನ ಇಲ್ಲ’ ಎಂದಿದ್ದಾರೆ ಕಮಲ್.
‘ತಮಿಳಿನ ರೀತಿಯೇ ಕನ್ನಡ ಸಹ ಶ್ರೀಮಂತ ಸಂಸ್ಕೃತಿ, ಸಾಹಿತ್ಯ ಮತ್ತು ಪರಂಪರೆಯನ್ನು ಹೊಂದಿದ್ದು, ಅದನ್ನು ನಾನು ವರ್ಷಗಳಿಂದಲೂ ಗೌರವಿಸುತ್ತಾ ಬಂದಿದ್ದೇನೆ. ಕನ್ನಡ ಭಾಷಿಕರು, ನನ್ನ ವೃತ್ತಿ ಜೀವನದಲ್ಲಿ ನನಗೆ ತೋರಿದ ಪ್ರೀತಿ ಮತ್ತು ಗೌರವ ನನ್ನ ಎದೆಯಲ್ಲಿ ಭದ್ರವಾಗಿದೆ. ಭಾಷೆಯ ಬಗ್ಗೆ ನನಗಿರುವ ಪ್ರೀತಿ ಸ್ಪಟಿಕದಂಥಹದ್ದು, ಅದನ್ನು ನಾನು ಯಾವುದೇ ಭೀತಿ ಇಲ್ಲದೆ ಹೇಳುವೆ. ಅದರಂತೆ ಕನ್ನಡಿಗರಿಗೆ ಅವರ ಭಾಷೆಯ ಬಗ್ಗೆ ಇರುವ ಅದಮ್ಯ ಪ್ರೀತಿಯ ಬಗ್ಗೆಯೂ ನನಗೆ ಗೌರವ ಇದೆ’ ಎಂದಿದ್ದಾರೆ.
‘ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಈ ನೆಲದ ಎಲ್ಲ ಭಾಷೆಗಳ ಜೊತೆಗೆ ನನಗೆ ಇರುವ ನಂಟು ಅಭೇದ್ಯವಾದುದು. ಭಾಷೆಗಳ ಸಮಾನ ಗೌರವಕ್ಕಾಗಿ ನಾನು ಸದಾ ಒತ್ತಾಯಿಸಿದ್ದೇನೆ ಹಾಗೂ ಯಾವುದೇ ಒಂದು ಭಾಷೆಯ ಹೇರಿಕೆಯನ್ನು ಹಾಗೂ ಒಂದು ಭಾಷೆ ಮತ್ತೊಂದು ಭಾಷೆಯ ಮೇಲೆ ಮಾಡುವ ದೌರ್ಜನ್ಯವನ್ನು ವಿರೋಧಿಸುತ್ತಲೇ ಬಂದಿದ್ದೇನೆ. ದೇಶದ ಭಾಷಾ ಸಾಮರಸ್ಯವನ್ನು ಹಾಳು ಮಾಡುವ ಯಾವುದೇ ಪ್ರಯತ್ನದ ವಿರುದ್ಧ ನಾನಿದ್ದೇನೆ’ ಎಂದಿದ್ದಾರೆ ಕಮಲ್.
ಇದನ್ನೂ ಓದಿ:‘ನಿಮ್ಮ ತಪ್ಪಿಗೆ ಪೊಲೀಸರು ಭದ್ರತೆ ನೀಡಬೇಕೇ?’; ಕಮಲ್ ಹಾಸನ್ಗೆ ಕೋರ್ಟ್ ತರಾಟೆ
‘ನನಗೆ ಸಿನಿಮಾ ಭಾಷೆ ಗೊತ್ತು, ನಾನು ಅದನ್ನೇ ಮಾತನಾಡುತ್ತೇನೆ. ಸಿನಿಮಾ ಭಾಷೆ ವಿಶ್ವಭಾಷೆ. ಆ ಭಾಷೆಗೆ ಪ್ರೀತಿಸುವುದು ಮಾತ್ರವೇ ಗೊತ್ತು. ನನ್ನ ಹೇಳಿಕೆ ಸಹ ನಮ್ಮ ನಡುವೆ ಇರುವ ಪ್ರೀತಿ ಮತ್ತು ಬಾಂಧವ್ಯ ಹಾಗೂ ಒಗ್ಗಟ್ಟನ್ನು ತೋರ್ಪಡಿಸುವ ಉದ್ದೇಶವನ್ನೇ ಹೊಂದಿತ್ತು. ನನ್ನ ಹಿರಿಯರು ನನಗೆ ಕಲಿಸಿಕೊಟ್ಟ ಪ್ರೀತಿ ಮತ್ತು ಗೌರವವನ್ನೇ ನಾನು ಪಾಲಿಸುತ್ತಿದ್ದೇನೆ. ಅದೇ ಪ್ರೀತಿ ಮತ್ತು ಗೌರವದ ಭಾಗವಾಗಿ ಶಿವಣ್ಣ, ಆಡಿಯೋ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆದರೆ ಆ ಕಾರಣಕ್ಕಾಗಿ ಅವರು ಮುಜುಗರ ಅನುಭವಿಸಬೇಕಾಗಿ ಬಂದಿರುವುದಕ್ಕೆ ನನಗೆ ವಿಷಾಧವಿದೆ. ಆದರೆ ನಮ್ಮಿಬ್ಬರ ನಡುವಿನ ಪ್ರೀತಿ ಮತ್ತು ವಿಶ್ವಾಸ ಹೀಗೆಯೇ ಮುಂದುವರೆಯುತ್ತದೆ ಎಂಬ ವಿಶ್ವಾಸ ನನಗೆ ಇದೆ’ ಎಂದಿದ್ದಾರೆ.
ಸಿನಿಮಾ ಜನರ ನಡುವೆ ಸೇತುವೆಯಾಗಿ ಇರಬೇಕು, ಜನರ ಬೇರ್ಪಡಿಸುವ ಗೋಡೆ ಆಗಬಾರದು. ಇದು ನನ್ನ ಹೇಳಿಕೆಯ ಉದ್ದೇಶವಾಗಿತ್ತು ಮತ್ತು ನಾನು ಎಂದಿಗೂ ಸಾರ್ವಜನಿಕ ಅಶಾಂತಿ ಮತ್ತು ದ್ವೇಷಕ್ಕೆ ಅವಕಾಶ ನೀಡಿಲ್ಲ ಮತ್ತು ಎಂದಿಗೂ ನೀಡಲು ಬಯಸುವುದಿಲ್ಲ. ನನ್ನ ಮಾತುಗಳ ಉದ್ದೇಶವನ್ನು ಗ್ರಹಿಸಿ, ಕರ್ನಾಟಕದ ಬಗ್ಗೆ, ಅದರ ಜನರ ಬಗ್ಗೆ ಮತ್ತು ಅವರ ಭಾಷೆಯ ಬಗ್ಗೆ ನನಗಿರುವ ನಿರಂತರ ಪ್ರೀತಿಯನ್ನು ಗುರುತಿಸಲಾಗುವುದು ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ. ಈ ತಪ್ಪು ತಿಳುವಳಿಕೆ ತಾತ್ಕಾಲಿಕ ಮತ್ತು ನಮ್ಮ ಪರಸ್ಪರ ಪ್ರೀತಿ ಮತ್ತು ಗೌರವವನ್ನು ಮತ್ತೆ ಎತ್ತಿಹಿಡಿಯಲು ಒಂದು ಅವಕಾಶ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ’ ಎಂದಿದ್ದಾರೆ ಕಮಲ್ ಹಾಸನ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ