ಕನ್ನಡ ಚಿತ್ರರಂಗದ ಹಿರಿಯ ನಟ ದೇವರಾಜ್ ಅವರಿಗೆ ಇಂದು (ಸೆ.20) ಜನ್ಮದಿನದ ಸಂಭ್ರಮ. ಸೆಲೆಬ್ರಿಟಿಗಳು, ಅಭಿಮಾನಿಗಳು ಮತ್ತು ಸ್ನೇಹಿತರು ಅವರಿಗೆ ಹುಟ್ಟುಹಬ್ಬದ ಶುಭಕೋರುತ್ತಿದ್ದಾರೆ. ಈ ಖುಷಿಯನ್ನು ಹೆಚ್ಚಿಸಲು ದೇವರಾಜ್ಗೆ ಈ ಬಾರಿ ಸೈಮಾ ಅವಾರ್ಡ್ ಕೂಡ ಸಿಕ್ಕಿದೆ. ಹುಟ್ಟುಹಬ್ಬದ ಹೊಸ್ತಿಲಲ್ಲೇ ಅವರಿಗೆ ಈ ಪ್ರಶಸ್ತಿ ಸಿಕ್ಕಿರುವುದು ವಿಶೇಷ. ‘ಯಜಮಾನ’ ಸಿನಿಮಾದಲ್ಲಿನ ನಟನೆಗೆ ಅವರು ‘ಅತ್ಯುತ್ತಮ ಪೋಷಕ ನಟ’ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಸಂಭ್ರಮಕ್ಕಾಗಿ ಎಲ್ಲರಿಂದಲೂ ಅಭಿನಂದನೆ ಸಲ್ಲಿಕೆ ಆಗುತ್ತಿದೆ.
1985ರಿಂದಲೂ ದೇವರಾಜ್ ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಖಳನಟನಾಗಿ, ಹೀರೋ ಆಗಿ, ಪೋಷಕ ಪಾತ್ರಧಾರಿಯಾಗಿ ಅವರು ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ. ಇಂದಿಗೂ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಮನಸ್ಸಿಗೆ ಒಪ್ಪುವಂತಹ ಪಾತ್ರಗಳನ್ನು ಮಾತ್ರ ಅವರೀಗ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ದರ್ಶನ್ ನಟನೆಯ ಬಹುತೇಕ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ತಾರಕ್, ಯಜಮಾನ, ರಾಬರ್ಟ್ ಚಿತ್ರಗಳಲ್ಲಿ ಅವರು ಗಮನಾರ್ಹ ಪಾತ್ರ ಮಾಡಿದ್ದಾರೆ.
ಯಜಮಾನ ಸಿನಿಮಾದಲ್ಲಿ ಕಥಾನಾಯಕಿಯ ತಂದೆ ಪಾತ್ರದಲ್ಲಿ ದೇವರಾಜ್ ನಟಿಸಿದ್ದಾರೆ. ಆ ಪಾತ್ರಕ್ಕಾಗಿ ಅವರಿಗೆ ಸೈಮಾ ಸಮಾರಂಭದಲ್ಲಿ ಈಗ ‘ಅತ್ಯುತ್ತಮ ಪೋಷಕ ನಟ’ ಪ್ರಶಸ್ತಿ ಸಿಕ್ಕಿದೆ. ಅವರ ಮಕ್ಕಳಾದ ಪ್ರಜ್ವಲ್ ದೇವರಾಜ್, ಪ್ರಣವ್ ದೇವರಾಜ್, ಸೊಸೆ ರಾಗಿಣಿ ಚಂದ್ರನ್ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ‘ಜಂಟಲ್ ಮನ್’ ಸಿನಿಮಾದ ನಟನೆಗಾಗಿ ಪ್ರಜ್ವಲ್ ದೇವರಾಜ್ ಅವರು ಈ ಬಾರಿ ‘ಅತ್ಯುತ್ತಮ ನಟ’ ಕ್ರಿಟಿಕ್ಸ್ ಅವಾರ್ಡ್ ಪಡೆದಿರುವುದು ವಿಶೇಷ. ಒಟ್ಟಿನಲ್ಲಿ ದೇವರಾಜ್ ಅವರ ಬರ್ತ್ಡೇ ಸಮಯಕ್ಕೆ ಅವರ ಕುಟುಂಬದಲ್ಲಿ ಸೈಮಾ ಪ್ರಶಸ್ತಿಗಳಿಂದ ಸಂಭ್ರಮ ಹೆಚ್ಚಿದೆ.
ನೂರಾರು ಸಿನಿಮಾಗಳಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದವರು ದೇವರಾಜ್. ಕನ್ನಡ ಮಾತ್ರವಲ್ಲದೆ ತೆಲುಗು ಮತ್ತು ತಮಿಳಿನ ಅನೇಕ ಸಿನಿಮಾಗಳಲ್ಲೂ ಅವರು ಬಣ್ಣ ಹಚ್ಚಿದ್ದಾರೆ. 1991ರಲ್ಲಿ ‘ವೀರಪ್ಪನ್’ ಚಿತ್ರದ ನಟನೆಗಾಗಿ ಅವರಿಗೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. 1987ರಲ್ಲಿ ‘ಆಗಂತುಕ’ ಚಿತ್ರದಲ್ಲಿನ ನಟನೆಗೆ ‘ಅತ್ಯುತ್ತಮ ಪೋಷಕ ನಟ’ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು. ಈಗ ಅವರ ಮುಡಿಗೆ ಸೈಮಾ ಗರಿ ಸೇರ್ಪಡೆ ಆಗಿದೆ. ಅವರು ನಿಭಾಯಿಸಿದ ಪೊಲೀಸ್ ಆಫೀಸರ್ ಪಾತ್ರಗಳನ್ನು ಅಭಿಮಾನಿಗಳು ಎಂದಿಗೂ ಮರೆಯುವಂತಿಲ್ಲ.
ಇದನ್ನೂ ಓದಿ:
‘ಕಳೆದ ರಾತ್ರಿ ಸ್ಪೆಷಲ್ ಆಗಿತ್ತು..’; ಸೈಮಾ ಡಬಲ್ ಸಂಭ್ರಮದ ಬಗ್ಗೆ ರಶ್ಮಿಕಾ ಮನದ ಮಾತು
SIIMA Awards 2021: ಸೈಮಾ ಅವಾರ್ಡ್ಸ್ ವೇದಿಕೆಯ ಕಲರ್ಫುಲ್ ಫೋಟೋಗಳು