ಕನ್ನಡ ಚಿತ್ರರಂಗದ (Sandalwood) ಖ್ಯಾತ ನಟಿ ಆಶಿತಾ ಅವರು ಮೀಟೂ (Me Too) ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಅವರು ಈ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಎಲ್ಲದರ ಬಗ್ಗೆ ‘ಟಿವಿ9 ಕನ್ನಡ’ ಜೊತೆ ಮಾತನಾಡಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಸಾಮಾನ್ಯವಾಗಿ ನಾವೆಲ್ಲ ಕಲಾವಿದರು ಈ ರೀತಿ ಕಷ್ಟ ಅನುಭವಿಸುತ್ತೇವೆ. ನನ್ನ ಜೊತೆಯೇ ಹೀಗೆಲ್ಲ ಆಯ್ತು ಅಂತ ನಾನು ಹೇಳಿಲ್ಲ. ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗಳಿಗೆ ನಾನು ಉತ್ತರ ನೀಡಿದ್ದೇನೆ. ಅನೇಕ ಅವಕಾಶಗಳು ಬಂದಾಗ ನನಗೆ ಇಷ್ಟ ಆಗಿಲ್ಲ. ಬರೀ ಮೀಟೂ ಎನ್ನುವುದು ಮಾತ್ರವೇ ಕಾರಣ ಅಲ್ಲ’ ಎಂದು ಆಶಿತಾ (Ashitha) ಹೇಳಿದ್ದಾರೆ.
‘ವೈಯಕ್ತಿಕವಾಗಿ ನನಗೆ ಈ ರೀತಿ ಆಗಿದೆ ಎನ್ನಲಾರೆ. ನಟಿ ಎಂದಮೇಲೆ ಕೆಲವು ಘಟನೆಗಳ ಬಗ್ಗೆ ಕೇಳಿರುತ್ತೇವೆ. ಬೇರೆ ಬೇರೆ ಚಿತ್ರರಂಗದಿಂದ ಬಂದು ಮೀಟೂ ಆಫರ್ ನೀಡುವವರು ಇದ್ದರು. ಆದರೆ ನಾನು ಅದಕ್ಕೆ ಒಪ್ಪಿಕೊಳ್ಳಲಿಲ್ಲ. ಅದರಿಂದ ನಾನು ಚಿತ್ರರಂಗದಿಂದ ಹೊರಬಂದೆ. ಆಗಿನ ಕಾಲದಲ್ಲಿ ಆಗಿದ್ದು ಅಲ್ಲಿಯೇ ಬಿಟ್ಟೆ. ಹಾಗೇನಾದರೂ ಆಗಿದ್ದರೆ ನಾನು ಇನ್ನೂ ಇಂಡಸ್ಟ್ರಿಯಲ್ಲಿ ಇರಬೇಕಾಗಿತ್ತು’ ಎಂದು ಆಶಿತಾ ಹೇಳಿದ್ದಾರೆ.
‘ನಾನು ಚಿತ್ರರಂಗ ತೊರೆಯಲು ಮೀಟೂ ಮಾತ್ರವೇ ಕಾರಣವಲ್ಲ. ಬೇರೆ ಬೇರೆ ಕಾರಣಗಳು ಇದ್ದವು. ನಾನು ವಿದ್ಯಾಭ್ಯಾಸ ಮಾಡುತ್ತಿದ್ದರಿಂದ ಕೆಲವು ಸಿನಿಮಾದ ಅವಕಾಶಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದಿದ್ದಾರೆ ಆಶಿತಾ. ‘ಆಕಾಶ್’, ‘ತವರಿನ ಸಿರಿ’, ‘ಬಾ ಬಾರೋ ರಸಿಕ’, ‘ರೋಡ್ ರೋಮಿಯೋ’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಆಶಿತಾ ಫೇಮಸ್ ಆಗಿದ್ದರು. ‘ರೋಡ್ ರೋಮಿಯೋ’ ಚಿತ್ರದ ಬಳಿಕ ಅವರು ಬಣ್ಣದ ಲೋಕದಲ್ಲಿ ಹೆಚ್ಚಾಗಿ ಸಕ್ರಿಯವಾಗಲಿಲ್ಲ.
ಯೂಟ್ಯೂಬ್ ಸಂದರ್ಶನದಲ್ಲಿ ಆಶಿತಾ ಹೇಳಿದ್ದೇನು?
ನಟ, ನಿರ್ದೇಶಕ ರಘುರಾಮ್ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಹಲವು ವಿಚಾರಗಳ ಬಗ್ಗೆ ಆಶಿತಾ ನೇರವಾಗಿ ಮಾತಾಡಿದ್ದಾರೆ. ಶೂಟಿಂಗ್ ಸೆಟ್ನಲ್ಲಿ ಎದುರಾದ ಎಲ್ಲ ಕಷ್ಟದ ಅನುಭವವನ್ನು ಅವರು ತೆರೆದಿಟ್ಟಿದ್ದಾರೆ.
‘ದೊಡ್ಡ ದೊಡ್ಡ ಚಿತ್ರಗಳ ಅವಕಾಶ ಬಂದರೂ ನನಗೆ ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ಕೇಳಿದ್ದನ್ನು ನಾನು ಮಾಡುತ್ತಿಲ್ಲ ಎಂಬ ಕಾರಣಕ್ಕೆ ಸೆಟ್ನಲ್ಲಿ ನನಗೆ ಕಷ್ಟ ಕೊಟ್ಟಿದ್ದಾರೆ. ಟೇಕ್ ಸರಿಯಿದ್ದರೂ ಕೂಡ ರೀಟೇಕ್ ಕೇಳುತ್ತಿದ್ದರು. ಇದನ್ನು ಮಾಡಿದರೆ ಮಾತ್ರ ಚಾನ್ಸ್ ಕೊಡುತ್ತೇವೆ, ಹೆಚ್ಚಿನ ಪೇಮೆಂಟ್ ಕೊಡುತ್ತೇವೆ ಎನ್ನುತ್ತಿದ್ದರು. ಹಾಗಾಗಿ ನನಗೆ ಈ ಕ್ಷೇತ್ರ ಬೇಡ ಎನಿಸಿತು’ ಎಂದು ಆಶಿತಾ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:22 pm, Fri, 16 September 22