ಮೀಟೂ ಕೇಸ್: ಶ್ರುತಿ ಹರಿಹರನ್ಗೆ ಹಿನ್ನಡೆ ಬಳಿಕ ಧ್ರುವ ಸರ್ಜಾ, ಮೇಘನಾ ರಾಜ್ ಪ್ರತಿಕ್ರಿಯೆ ಏನು?
Me Too: ‘ಅರ್ಜುನ್ ಸರ್ಜಾ ಯಾವಾಗಲೂ ಜಂಟಲ್ಮ್ಯಾನ್’ ಎಂದು ಮೇಘನಾ ರಾಜ್ ಅವರು ಇನ್ಸ್ಟಾಗ್ರಾಮ್ ಸ್ಟೋರಿ ಪೋಸ್ಟ್ ಮಾಡಿದ್ದಾರೆ. ‘ಧರ್ಮೋ ರಕ್ಷತಿ ರಕ್ಷಿತಃ’ ಎಂದು ಧ್ರುವ ಸರ್ಜಾ ಬರೆದುಕೊಂಡಿದ್ದಾರೆ.
ನಟ ಅರ್ಜುನ್ ಸರ್ಜಾ (Arjun Sarja) ಅವರ ಮೇಲೆ ಶ್ರುತಿ ಹರಿಹರನ್ (Sruthi Hariharan) ಅವರು 2018ರಲ್ಲಿ ಮೀಟೂ (Me Too) ಆರೋಪ ಹೊರಿಸಿದ್ದರು. ಅಲ್ಲದೇ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಅವರ ಆರೋಪಗಳಿಗೆ ಸೂಕ್ತ ಸಾಕ್ಷಿ ಸಿಗದ ಕಾರಣ ಪೊಲೀಸರು ಬಿ ರಿಪೋರ್ಟ್ ಸಿದ್ಧಪಡಿಸಿದ್ದಾರೆ ಎಂಬ ಮಾಹಿತಿ ಕೆಲವೇ ದಿನಗಳ ಹಿಂದೆ ಕೇಳಿಬಂದಿತ್ತು. ಬಿ ರಿಪೋರ್ಟ್ ಸಲ್ಲಿಕೆ ಮಾಡುವುದಕ್ಕೂ ಮುನ್ನ ಶ್ರುತಿ ಹರಿಹರನ್ ಅವರಿಗೆ ನೋಟಿಸ್ ಕೂಡ ನೀಡಲಾಗಿತ್ತು. ಒಟ್ಟಿನಲ್ಲಿ ಮೀಟೂ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶ್ರುತಿ ಹರಿಹರನ್ ಅವರಿಗೆ ಹಿನ್ನಡೆ ಆಗಿದೆ. ಈ ಸಂದರ್ಭದಲ್ಲಿ ಧ್ರುವ ಸರ್ಜಾ (Dhruva Sarja) ಮತ್ತು ಮೇಘನಾ ರಾಜ್ (Meghana Raj) ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಸ್ಟೋರಿಗಳು ಗಮನ ಸೆಳೆಯುತ್ತಿವೆ. ಈ ಮೂಲಕ ಅವರು ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
‘ಅರ್ಜುನ್ ಸರ್ಜಾ ಯಾವಾಗಲೂ ಜಂಟಲ್ಮ್ಯಾನ್’ ಎಂದು ಮೇಘನಾ ರಾಜ್ ಅವರು ಇನ್ಸ್ಟಾಗ್ರಾಮ್ ಸ್ಟೋರಿ ಪೋಸ್ಟ್ ಮಾಡಿದ್ದಾರೆ. ‘ಧರ್ಮೋ ರಕ್ಷತಿ ರಕ್ಷಿತಃ’ ಎಂದು ಧ್ರುವ ಸರ್ಜಾ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರು ವ್ಯಂಗ್ಯವಾಗಿ ಇನ್ನೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಸೊಳ್ಳೆ ಬ್ಯಾಟ್ನಿಂದ ಕೀಟಗಳನ್ನು ಸಾಯಿಸುತ್ತಿರುವ ದೃಶ್ಯ ಅದರಲ್ಲಿದ್ದು, ‘ಸೊಳ್ಳೆ ಕ್ರಿಮಿ ಕೀಟ’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ಹಿಂದೆ ಅರ್ಜುನ್ ಸರ್ಜಾ ಮೇಲಿನ ಮೀಟೂ ಆರೋಪಕ್ಕೆ ಸಂಬಂಧಿಸಿದಂತೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡುವಾಗ ಧ್ರುವ ಸರ್ಜಾ ಅವರು ‘ನಾಯಿ ನರಿ ಸೊಳ್ಳೆ ಕ್ರಿಮಿ ಕೀಟ’ ಎಂಬ ಪದಗಳನ್ನು ಬಳಸಿದ್ದು ಚರ್ಚೆ ಆಗಿತ್ತು. ಈಗ ಮತ್ತೆ ಅದೇ ಪದಗಳನ್ನು ಅವರು ತಮ್ಮ ಸ್ಟೋರಿಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ ಏನು?
ಅರುಣ್ ವೈದ್ಯನಾಥನ್ ನಿರ್ದೇಶನದ ‘ವಿಸ್ಮಯ’ ಸಿನಿಮಾದಲ್ಲಿ ಶ್ರುತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ಅವರು ಗಂಡ-ಹೆಂಡತಿ ಪಾತ್ರದಲ್ಲಿ ನಟಿಸಿದ್ದರು. ಚಿತ್ರೀಕರಣದ ವೇಳೆ ಅರ್ಜುನ್ ಸರ್ಜಾ ಅವರು ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಶ್ರುತಿ ಹರಿಹರನ್ ಆರೋಪ ಹೊರಿಸಿದ ಬಳಿಕ ಇಡೀ ಸ್ಯಾಂಡಲ್ವುಡ್ನಲ್ಲಿ ವಿವಾದದ ಬೆಂಕಿ ಹೊತ್ತಿಕೊಂಡಿತ್ತು. ಕೆಲವರು ಶ್ರುತಿ ಪರವಾಗಿ ಮಾತನಾಡಿದ್ದರೆ, ಅನೇಕರು ಅರ್ಜುನ್ ಸರ್ಜಾಗೆ ಬೆಂಬಲ ನೀಡಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈ ಬಗ್ಗೆ ಸಭೆ ನಡೆಸಲಾಗಿತ್ತು.
2018ರಲ್ಲಿ ಈ ವಿವಾದ ಬಗೆಹರಿಸಲು ‘ರೆಬೆಲ್ ಸ್ಟಾರ್’ ಅಂಬರೀಷ್ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಆದರೆ ಶ್ರುತಿ ಹರಿಹರನ್ ಅವರು ಸಭೆಯ ಅರ್ಧದಲ್ಲೇ ಹೊರ ನಡೆದಿದ್ದರು. ಕಾನೂನಿನ ಮೂಲಕವೇ ನ್ಯಾಯ ಪಡೆಯುವುದಾಗಿ ಅವರು ಹೇಳಿದ್ದರು. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಅರ್ಜುನ್ ಸರ್ಜಾ ವಿರುದ್ಧ ದೂರು ನೀಡಿದ್ದರು. ಮಹಿಳೆಯ ಗೌರವಕ್ಕೆ ಧಕ್ಕೆ (354, 509), ಲೈಂಗಿಕ ಕಿರುಕುಳ (ಐಪಿಸಿ 354ಎ) ಹಾಗೂ ಜೀವಬೆದರಿಕೆ (ಐಪಿಸಿ 506) ಆರೋಪದಡಿ ಕೇಸ್ ದಾಖಲಾಗಿತ್ತು.
ಇದನ್ನೂ ಓದಿ:
ರಾಯನ್ ರಾಜ್ ಸರ್ಜಾ ಹುಟ್ಟುಹಬ್ಬದ ಫೋಟೋ ಗ್ಯಾಲರಿ; ಸೆಲೆಬ್ರಿಟಿಗಳ ಜೊತೆ ಚಿರು-ಮೇಘನಾ ಪುತ್ರ ಮಿಂಚಿಂಗ್
ಮೇಘನಾ ರಾಜ್-ಚಿರು ಸರ್ಜಾ ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ತಿಳಿಸಿದ ರಾಯನ್ ರಾಜ್ ಸರ್ಜಾ
Published On - 8:53 am, Tue, 30 November 21