ನಟ ಕಿರಣ್ ರಾಜ್ ಅವರಿಗೆ ಕನ್ನಡ ಕಿರುತೆರೆಯಲ್ಲಿ ಸಖತ್ ಬೇಡಿಕೆ ಇದೆ. ‘ಕನ್ನಡತಿ’ ಸೀರಿಯಲ್ (Kannadathi Serial) ಮೂಲಕ ಅವರು ತುಂಬ ಫೇಮಸ್ ಆಗಿದ್ದಾರೆ. ಹಾಗಂತ ಅವರು ಕಿರುತೆರೆಗೆ ಮಾತ್ರ ಸೀಮಿತವಾಗಿಲ್ಲ. ಕನ್ನಡ ಚಿತ್ರರಂಗದಲ್ಲೂ ಅವರು ಸಕ್ರಿಯರಾಗಿದ್ದಾರೆ. ಕಿರಣ್ ರಾಜ್ (Kiran Raj) ಹೀರೋ ಆಗಿ ನಟಿಸಿದ್ದ ‘ಬಡ್ಡೀಸ್’ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಗಮನ ಸೆಳೆಯಿತು. ಅವರು ಮುಖ್ಯಭೂಮಿಕೆ ನಿಭಾಯಿಸಿರುವ ‘ಭರ್ಜರಿ ಗಂಡು’ ಸಿನಿಮಾ ಕೂಡ ಶೀಘ್ರದಲ್ಲೇ ತೆರೆಕಾಣಲಿದೆ. ಅದೇ ಚಿತ್ರದ ನಿರ್ದೇಶಕ ಪ್ರಸಿದ್ಧ್ ಜೊತೆ ಸೇರಿ ಕಿರಣ್ ರಾಜ್ ಅವರು ಹೊಸ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಈ ಚಿತ್ರಕ್ಕೆ ‘ಶೇರ್’ (Sher Kannada Movie) ಎಂದು ಶೀರ್ಷಿಕೆ ಇಡಲಾಗಿದೆ. ಬೆಂಗಳೂರಿನ ಕಂಠೀರವ ಸ್ಡುಡಿಯೋದಲ್ಲಿ ಇತ್ತೀಚೆಗೆ ಈ ಸಿನಿಮಾದ ಮುತೂರ್ಹ ನೆರವೇರಿದೆ. ಸದ್ಯದಲ್ಲೇ ಶೂಟಿಂಗ್ ಆರಂಭಿಸಲು ಸಕಲ ತಯಾರಿ ಮಾಡಿಕೊಳ್ಳಲಾಗಿದೆ.
ಬೀದರ್ ಮೂಲದ ಡಾ. ಸುದರ್ಶನ್ ಸುಂದರರಾಜ್ ಅವರು ‘ಶೇರ್’ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಮುಹೂರ್ತ ಸಂದರ್ಭದಲ್ಲಿ ಮೊದಲ ಸನ್ನಿವೇಶಕ್ಕೆ ಅವರೇ ಆರಂಭ ಫಲಕ ತೋರಿದ್ದಾರೆ. ಅನೇಕ ಗಣ್ಯರು ಆಗಮಿಸಿ ಕಿರಣ್ ರಾಜ್ ಮತ್ತು ಇಡೀ ‘ಶೇರ್’ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಬಳಿಕ ಸುದ್ದಿಗೋಷ್ಠಿ ನಡೆಸಿ, ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಳ್ಳಲಾಯಿತು.
ಈ ಸಿನಿಮಾದಲ್ಲಿ ಕಿರಣ್ ರಾಜ್ಗೆ ಜೋಡಿಯಾಗಿ ಸುರೇಖಾ ನಟಿಸಲಿದ್ದಾರೆ. ಇದೊಂದು ಆ್ಯಕ್ಷನ್-ಥ್ರಿಲ್ಲರ್ ಸಿನಿಮಾ. ಹೆಚ್ಚಿನ ದೃಶ್ಯಗಳು ಅನಾಥಾಶ್ರಮದಲ್ಲಿ ನಡೆಯುತ್ತದೆ. ನಾಯಕ-ನಾಯಕಿ ಅನಾಥರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಿರಣ್ ರಾಜ್ ಅವರಿಗೆ ಈ ಸಿನಿಮಾದಲ್ಲಿ ಮಾಸ್ ಹೀರೋ ಗೆಟಪ್ ಇರಲಿದೆ ಎಂಬುದು ವಿಶೇಷ. ಆ ಬಗ್ಗೆ ನಿರ್ದೇಶಕ ಪ್ರಸಿದ್ಧ್ ಮಾತನಾಡಿದ್ದಾರೆ.
‘ಕಿರಣ್ ರಾಜ್ ಅವರು ಲವರ್ ಬಾಯ್ ರೀತಿ ಫೇಮಸ್ ಆದವರು. ಅವರಿಗೆ ರಗಡ್ ಲುಕ್ ಸರಿ ಹೊಂದುತ್ತಾ ಅಂತ ಅನೇಕರು ಕೇಳಿದ್ದರು. ಆದರೆ ಮಾಸ್ ಪಾತ್ರಕ್ಕೆ ಬೇಕಾದ ಕಿಕ್ ಬಾಕ್ಸಿಂಗ್, ಮಾರ್ಷಲ್ ಆರ್ಟ್ಸ್ ಮುಂತಾದವುಗಳನ್ನು ಕಿರಣ್ ರಾಜ್ ಅಭ್ಯಾಸ ಮಾಡಿದ್ದಾರೆ. ನನ್ನ ಹಾಗೂ ಕಿರಣ್ ರಾಜ್ ಕಾಂಬಿನೇಶನ್ನಲ್ಲಿ ಮೂಡಿಬಂದಿರುವ ‘ಭರ್ಜರಿ ಗಂಡು’ ಸಿನಿಮಾ ಸೆಪ್ಟೆಂಬರ್ನಲ್ಲಿ ಬಿಡುಗಡೆ ಆಗಲಿದೆ. ಆ ಚಿತ್ರದಲ್ಲಿ ಭಾಗಿಯಾಗಿದ್ದ ಬಹುತೇಕ ತಂಡವೇ ಈಗ ‘ಶೇರ್’ ಚಿತ್ರಕ್ಕಾಗಿ ಕೆಲಸ ಮಾಡುತ್ತಿದೆ’ ಎಂದು ಪ್ರಸಿದ್ಧ್ ಹೇಳಿದ್ದಾರೆ.
ಆಗಸ್ಟ್ 22ರಂದು ‘ಶೇರ್’ ಚಿತ್ರಕ್ಕೆ ಶೂಟಿಂಗ್ ಆರಂಭ ಆಗಲಿದೆ. ‘ಭರ್ಜರಿ ಗಂಡು’ ಸಿನಿಮಾದಲ್ಲೂ ಸಾಹಸ ದೃಶ್ಯಗಳಲ್ಲಿ ನಟಿಸಿರುವ ಕಿರಣ್ ರಾಜ್ ಅವರು ಈಗ ಮತ್ತೆ ಕ್ಯಾಮೆರಾ ಎದುರು ಫೈಟಿಂಗ್ ಮಾಡುವ ಉತ್ಸಾಹದಲ್ಲಿದ್ದಾರೆ. ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿ ತನೀಶಾ ಕಾಣಿಸಿಕೊಳ್ಳಲಿದ್ದಾರೆ. ಕಿಟ್ಟಿ ಕೌಶಿಕ್ ಛಾಯಾಗ್ರಹಣ, ಗುಮ್ಮಿನೇನಿ ವಿಜಯ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಮೂಲತಃ ಬೀದರ್ನವರಾದ ಸುದರ್ಶನ್ ಸುಂದರರಾಜ್ ಅವರು ವಕೀಲರಾಗಿ ಕೆಲಸ ಮಾಡುತ್ತಿದ್ದಾರೆ. ನಿರ್ದೇಶಕರು ಹೇಳಿದ ಕಥೆ ಇಷ್ಟಪಟ್ಟು ಅವರು ಈ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.