‘ಬಡ್ಡೀಸ್​’ ಚಿತ್ರದಲ್ಲಿ ಆ್ಯಕ್ಷನ್​ ಹೀರೋ ಆಗಿ ಅಬ್ಬರಿಸ್ತಾರೆ ‘ಕನ್ನಡತಿ’ ನಟ ಕಿರಣ್​ ರಾಜ್​; ಜೂನ್​ 24ಕ್ಕೆ ರಿಲೀಸ್​

‘ಬಡ್ಡೀಸ್​’ ಚಿತ್ರದಲ್ಲಿ ಆ್ಯಕ್ಷನ್​ ಹೀರೋ ಆಗಿ ಅಬ್ಬರಿಸ್ತಾರೆ ‘ಕನ್ನಡತಿ’ ನಟ ಕಿರಣ್​ ರಾಜ್​; ಜೂನ್​ 24ಕ್ಕೆ ರಿಲೀಸ್​
ಕಿರಣ್​ ರಾಜ್​, ಸಿರಿ ಪ್ರಹ್ಲಾದ್​

Buddies Kannada Movie: ಕಿರಣ್​ ರಾಜ್​ ನಟಿಸಿರುವ ‘ಬಡ್ಡೀಸ್​’ ಸಿನಿಮಾದ ರಿಲೀಸ್​ ದಿನಾಂಕ ಹತ್ತಿರವಾಗಿದೆ. ಈ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

TV9kannada Web Team

| Edited By: Madan Kumar

May 18, 2022 | 7:30 AM

ಕಿರುತೆರೆಯ ಖ್ಯಾತ ನಟ ಕಿರಣ್​ ರಾಜ್​ ಅವರು ಸಿನಿಮಾದಲ್ಲೂ ಸಕ್ರಿಯರಾಗಿದ್ದಾರೆ. ‘ಕನ್ನಡತಿ’ (Kannadathi Serial) ಧಾರಾವಾಹಿಯಲ್ಲಿ ಹರ್ಷ ಎಂಬ ಪಾತ್ರ ಮಾಡುತ್ತಿರುವ ಅವರು ಕರುನಾಡಿನಲ್ಲಿ ಮನೆಮಾತಾಗಿದ್ದಾರೆ. ಈ ನಡುವೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ ಅನುಭವ ಅವರಿಗೆ ಇದೆ. ಆದರೆ ಸೋಲೋ ಹೀರೋ ಆಗಿ ಅವರು ನಟಿಸಿದ ಮೊದಲ ಸಿನಿಮಾ ‘ಬಡ್ಡೀಸ್​’ (Buddies Kannada Movie) ಈಗ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ಅವರು ಆ್ಯಕ್ಷನ್​ ಹೀರೋ ಆಗಿ ಮಿಂಚಲಿದ್ದಾರೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ. ಇದರಲ್ಲಿ ಫ್ರೆಂಡ್​ಶಿಪ್​ ಕುರಿತಾದ ಕಥೆ ಇದೆ. ಹಾಗಾಗಿ, ‘ಬಡ್ಡೀಸ್​’ ಶೀರ್ಷಿಕೆಯ ಜೊತೆಯಲ್ಲಿ ‘ಸ್ನೇಹಕ್ಕೆ ಸಾವಿಲ್ಲ ಅಣ್ತಮ್ಮ’ ಎಂಬ ಅಡಿಬರಹ​ ಹೈಲೈಟ್​ ಆಗಿದೆ. ಈ ಚಿತ್ರಕ್ಕೆ ಗುರು ತೇಜ್​ ಶೆಟ್ಟಿ ನಿರ್ದೇಶನ ಮಾಡಿದ್ದು, ಭಾರತಿ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಕಿರಣ್​ ರಾಜ್​ಗೆ (Kiran Raj) ಜೋಡಿಯಾಗಿ ಸಿರಿ ಪ್ರಹ್ಲಾದ್​​ ನಟಿಸಿದ್ದಾರೆ. ‘ಬಡ್ಡೀಸ್​’ ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ನಿಭಾ ಶೆಟ್ಟಿ ಛಾಯಾಗ್ರಹಣ ಮಾಡಿದ್ದಾರೆ. ಗೋಪಾಲ ದೇಶಪಾಂಡೆ, ಅರವಿಂದ್​ ಬೋಳಾರ್​, ಗಿರೀಶ್​ ಜಟ್ಟಿ, ಉದಯ್​ ಸೂರ್ಯ, ರೋಹನ್​ ಸಾಯಿ ಮುಂತಾದವರು ಕೂಡ ನಟಿಸಿದ್ದಾರೆ.

‘ಬಡ್ಡೀಸ್​’ ಚಿತ್ರದ ಬಗ್ಗೆ ನಟ ಕಿರಣ್​ ರಾಜ್​ ಹೆಚ್ಚು ಭರವಸೆ ಇಟ್ಟುಕೊಂಡಿದ್ದಾರೆ. ‘ನಾನು ಈ ಹಿಂದೆ ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿದ್ದೇನೆ. ಆದರೆ ನನಗೆ ಹೆಸರು ತಂದುಕೊಟ್ಟದ್ದು ‘ಕನ್ನಡತಿ’. ನಂತರ ಒಳ್ಳೆಯ ಚಿತ್ರದಲ್ಲಿ ನಟಿಸಬೇಕೆಂಬ ಆಸೆ ಹೊಂದಿದ್ದ ನನಗೆ ಗುರುತೇಜ್ ಶೆಟ್ಟಿ ಅವರು ಹೇಳಿದ ಕಥೆ ಹಿಡಿಸಿತು. ಈ ಹಿಂದೆ ‘ಮಾರ್ಚ್ 22’ ಸೇರಿದಂತೆ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಆದರೆ ನಾಯಕನಾಗಿ ‘ಬಡ್ಡೀಸ್​’ ಮೊದಲ ಚಿತ್ರ. ಸ್ನೇಹದ ಮಹತ್ವ ಸಾರುವ ಈ ಚಿತ್ರದಲ್ಲಿ ಮನರಂಜನೆಗೆ ಬೇಕಾದ ಎಲ್ಲಾ ಅಂಶಗಳು ಇವೆ’ ಎಂದಿದ್ದಾರೆ ಕಿರಣ್​ ರಾಜ್​.

ಇದನ್ನೂ ಓದಿ: ಹಿಂದಿಗೆ ಡಬ್​ ಆಗುತ್ತಿದೆ ‘ಕನ್ನಡತಿ’ ಧಾರಾವಾಹಿ; ಕಿರಣ್​ ರಾಜ್​-ರಂಜನಿ ರಾಘವನ್ ಫ್ಯಾನ್ಸ್​ಗೆ ಹೆಮ್ಮೆ​

ಗುರುತೇಜ್​ ಶೆಟ್ಟಿ ಅವರು ಈ ಚಿತ್ರ ಶುರು ಆಗಿದ್ದು ಹೇಗೆ ಎಂಬುದನ್ನು ತಿಳಿಸಿದ್ದಾರೆ. ‘ಕಥೆ ಸಿದ್ದಮಾಡಿಕೊಂಡು, ನಿರ್ಮಾಪಕರ ಹುಡುಕಾಟದಲ್ಲಿದ್ದಾಗ, ಸ್ನೇಹಿತರ ಮೂಲಕ ದುಬೈ ನಿವಾಸಿ ಭಾರತಿ ಶೆಟ್ಟಿ ಅವರ ಪರಿಚಯವಾಯಿತು. ಕಥೆ ಮೆಚ್ಚಿದ ಅವರು ನಿರ್ಮಾಣಕ್ಕೆ ಮುಂದಾದರು’ ಎಂದಿದ್ದಾರೆ ನಿರ್ದೇಶಕರು. ‘ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುವ ಕಥಾಹಂದರ ಈ ಸಿನಿಮಾದಲ್ಲಿ ಇದೆ. ‘ಬಡ್ಡೀಸ್’ ಎಂದರೆ ಕಾಲೇಜಿನಲ್ಲಿ ಈಗಿನ ಹುಡುಗರು ಸ್ನೇಹಿತರನ್ನು ಕರೆಯುವ ಪದ. ಎಲ್ಲಾ ತಂದೆ ಸಾಮಾನ್ಯವಾಗಿ ಮಕ್ಕಳಿಗೆ ಕಾರು, ಬೈಕು ನೀಡುತ್ತಾರೆ. ಆದರೆ ನಮ್ಮ ಚಿತ್ರದಲ್ಲಿ ಶ್ರೀಮಂತ ತಂದೆಯು ತನ್ನ ಮಗನಿಗೆ ಸ್ನೇಹಿತರನ್ನೇ ಉಡುಗೊರೆಯಾಗಿ ನೀಡುತ್ತಾನೆ. ನಾಯಕ ಹಾಗೂ ಮೂವರು ಸ್ನೇಹಿತರ ನಡುವೆ ನಡೆಯುವ ಕಥಾಹಂದರ ಇದರಲ್ಲಿ ಇದೆ. ಪ್ರೇಮಕಥೆಯೊಂದಿಗೆ, ಸೆಂಟಿಮೆಂಟ್ ಸನ್ನಿವೇಶಗಳು ಕೂಡ ಪ್ರೇಕ್ಷಕರಿಗೆ ಇಷ್ಟ ಆಗಲಿವೆ’ ಎಂದು ನಿರ್ದೇಶಕರು ಹೇಳಿದ್ದಾರೆ.

ಇದನ್ನೂ ಓದಿ: ಅಮ್ಮನ ಮಾತು ಕೇಳಿ ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಅತ್ತ ‘ಕನ್ನಡತಿ’ ಹೀರೋ ಕಿರಣ್​ ರಾಜ್​!

ಮೂಲತಃ ಬೆಂಗಳೂರಿನವರಾದ ನಿರ್ಮಾಪಕಿ ಭಾರತಿ ಶೆಟ್ಟಿ ಅವರು ದುಬೈನಲ್ಲಿ ನೆಲೆಸಿದ್ದಾರೆ. ಅಲ್ಲಿ ಅವರು ಜಾಹೀರಾತು ಸಂಸ್ಥೆ ನಡೆಸುತ್ತಿದ್ದಾರೆ. ‘ಚಿಕ್ಕಂದಿನಿಂದಲೇ ಸಿನಿಮಾ ಮಾಡಬೇಕೆಂಬ ಹಂಬಲ. ರಾಜ್​ಕುಮಾರ್ ಮುಂತಾದವರ ಚಿತ್ರಗಳನ್ನು ‌ನೋಡಿಕೊಂಡು ಬಂದು ಅಪ್ಪ-ಅಮ್ಮ ನಮಗೆ ಕಥೆ ಹೇಳುತ್ತಿದ್ದರು. ಆಗಿನಿಂದಲೂ ನನಗೆ ಸಿನಿಮಾ ಆಸಕ್ತಿ. ಗೆಳೆಯರೊಬ್ಬರ ಮೂಲಕ ಗುರುತೇಜ್ ಶೆಟ್ಟಿ ಪರಿಚಯವಾಗಿ, ಕಥೆ ಕಳುಹಿಸಿದ್ದರು. ಕಥೆ ಹಿಡಿಸಿತು. ಸಿನಿಮಾ ನಿರ್ಮಾಣಕ್ಕೆ ಮುಂದಾದೆ. ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಾಯದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ’ ಎಂದಿದ್ದಾರೆ ನಿರ್ಮಾಪಕಿ ಭಾರತಿ ಶೆಟ್ಟಿ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada