ಕಾಂಪೀಟೇಶನ್ ಜಗತ್ತಲ್ಲೂ 50 ದಿನ ಪೂರೈಸಿದ ‘ಕನ್ನೇರಿ’: ಕಾರಣಕರ್ತರಿಗೆ ಚಿತ್ರತಂಡದಿಂದ ಧನ್ಯವಾದ
ಉತ್ತರ ಕರ್ನಾಕಟದ ಮಂದಿ ಸಿನಿಮಾವನ್ನು ಉಳಿಸಿ ಬೆಳೆಸುವುದರಲ್ಲಿ ಸದಾ ಮುಂದು. ಈಗ ಕನ್ನೇರಿಗೂ ಅದೇ ಪ್ರೀತಿ ತೋರಿದ್ದಾರೆ. ರಾಯಬಾಗದ ದತ್ತ ಚಿತ್ರಮಂದಿರದಲ್ಲಿ 50 ದಿನಗಳನ್ನು ಪೂರೈಸಿದೆ.
ಇವತ್ತು ಸಿನಿಮಾ ಮಾಡುವುದು ಕಷ್ಟ ಎನಿಸಿಕೊಳ್ಳುವುದಕ್ಕಿಂತ, ಆ ಸಿನಿಮಾವನ್ನು ಜನರಿಗೆ ತಲುಪಿಸುವುದು ಸುಲಭ ಎನಿಸುತ್ತಿಲ್ಲ. ಕಳೆದ ಐದಾರು ವರ್ಷಗಳ ಹಿಂದೆ ಸಿನಿಮಾವೊಂದು ವಾರಾನುಗಟ್ಟಲೇ ಥಿಯೇಟರ್ ನಲ್ಲಿ ಉಳಿದುಕೊಳ್ಳುತ್ತಿತ್ತು. ಬಾಯಿಂದ ಬಾಯಿಗೆ ಪ್ರಮೋಷನ್ ಆಗಿ ಸಿನಿಮಾ ಒಳ್ಳೆ ಕಲೆಕ್ಷನ್ ಮಾಡುತ್ತಿತ್ತು. ಆದರೆ ಈಗಿನ ಸ್ಥಿತಿ ಹೇಗಿದೆ ಎಂದರೆ ಬಾಯಿಂದ ಬಾಯಿಗೆ ಸಿನಿಮಾ ಬಗ್ಗೆ ಪ್ರಮೋಷನ್ ಆಗುವುದರೊಳಗೆ ಸಿನಿಮಾ ಆ ಥಿಯೇಟರ್ ನಲ್ಲಿ ಇರುವುದೇ ಇಲ್ಲ. ಮತ್ಯಾವುದೊ ಹೊಸ ಸಿನಿಮಾ ಆ ಜಾಗವನ್ನು ಆಕ್ರಮಿಸಿಕೊಂಡಿರುತ್ತದೆ. ಪರಿಸ್ಥಿತಿಯೂ ಅದೇ ರೀತಿ ಇದೆ.
ವಾರಕ್ಕೆ ಏನಿಲ್ಲ ಎಂದರು 9-10 ಸಿನಿಮಾಗಳು ತೆರೆಗೆ ಅಪ್ಪಳಿಸಿದರೆ ವಾರವಾದ ಮೇಲೂ ಉಳಿದುಕೊಳ್ಳುವುದು ಬೆರಳೆಣಿಕೆಯಷ್ಟು. ಇನ್ನು ಯಶಸ್ವಿ ಪಯಣ ಸಾಗಿಸುವುದು ಅದರಲ್ಲೂ ಕಡಿಮೆ. ಆದರೆ ಈ ಎಲ್ಲಾ ಕಾಂಪಿಟೇಷನ್ ನಲ್ಲೂ ಕನ್ನೇರಿ ಗೆದ್ದು ಬೀಗಿದೆ. ಜನಕ್ಕೆ ಕಥೆ ಇಷ್ಟವಾಗಿ ಬಿಟ್ಟರೆ ಸಿನಿಮಾಗೆ ಡಿಮ್ಯಾಂಡ್ ಬರುವುದು ಗ್ಯಾರಂಟಿ ಅಂತಾರಲ್ಲ ಹಂಗೆ ಆಗಿದೆ. ನೈಜ ಘಟನೆಯನ್ನು ಜನ ಅಪ್ಪಿ ಒಪ್ಪಿದ ಕನ್ನೇರಿಗೀಗ 50 ದಿನಗಳ ಸಂಭ್ರಮ.
ಉತ್ತರ ಕರ್ನಾಕಟದ ಮಂದಿ ಸಿನಿಮಾವನ್ನು ಉಳಿಸಿ ಬೆಳೆಸುವುದರಲ್ಲಿ ಸದಾ ಮುಂದು. ಈಗ ಕನ್ನೇರಿಗೂ ಅದೇ ಪ್ರೀತಿ ತೋರಿದ್ದಾರೆ. ರಾಯಬಾಗದ ದತ್ತ ಚಿತ್ರಮಂದಿರದಲ್ಲಿ 50 ದಿನಗಳನ್ನು ಪೂರೈಸಿದೆ. ಈ ಪಯಣದ ಯಶಸ್ಸನ್ನು ಚಿತ್ರತಂಡ ಪ್ರೇಕ್ಷಕರ ಪ್ರೀತಿ ಜೊತೆಗೆ ಆಚರಿಸಿದ್ದಾರೆ. ದತ್ತ ಥಿಯೇಟರ್ ನಲ್ಲಿ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ಕನ್ನೇರಿ ಸಿನಿಮಾ ಮಹಿಳಾ ಪ್ರಧಾನವಾಗಿದ್ದು, ಕಾಡಿನಲ್ಲೇ ನೆಮ್ಮದಿ ಕಂಡುಕೊಂಡು, ಕಾಡನ್ನೇ ಅದ್ಭುತ ಪ್ರಪಂಚ ಎಂದುಕೊಂಡಿದ್ದ ಬುಡಕಟ್ಟು ಮಂದಿಯನ್ನು ಒಕ್ಕಲೆಬ್ಬಿಸಿದ ಕಥೆ ಇದು. ಈ ನೈಜಕಥೆಯನ್ನು ನಿರ್ದೇಶಕ ನೀನಾಸಂ ಮಂಜು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಒಕ್ಕಲೆಬ್ಬಿಸಿದ ಬಳಿಕ ಅಲ್ಲಿನ ಜನರ ಸ್ಥಿತಿಗತಿ, ಮುಖ್ಯವಾಗಿ ಹೆಣ್ಣುಮಕ್ಕಳ ಸ್ಥಿತಿ ಏನಾಯಿತು ಎಂಬೆಲ್ಲಾ ವಿಚಾರಗಳನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಸದ್ಯ ರಾಜ್ಯಾದ್ಯಂತ 10 ಥಿಯೇಟರ್ ನಲ್ಲಿ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ. ಕೆಲವೇ ದಿನಗಳಲ್ಲಿ ಓಟಿಟಿಗೂ ಬರಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಚಿತ್ರದಲ್ಲಿ ಅರ್ಚನಾ ಮಧುಸೂದನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಅನಿತ ಭಟ್, ಕರಿ ಸುಬ್ಬು, ಅರುಣ್ ಸಾಗರ್, ಎಂ.ಕೆ. ಮಠ ಒಳಗೊಂಡ ಅನುಭವಿ ಕಲಾವಿದರ ಅಭಿನಯವಿದೆ. ಬುಡ್ಡಿದೀಪ ಸಿನಿಮಾ ಹೌಸ್ ಬ್ಯಾನರ್ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಈ ಚಿತ್ರಕ್ಕೆ ಪಿ.ಪಿ. ಹೆಬ್ಬಾರ್ ಮತ್ತು ಚಂದ್ರಶೇಖರ್ ನಿರ್ಮಾಪಕರು. ಕೊಟಿಗಾನಹಳ್ಳಿ ರಾಮಯ್ಯ ಕಥೆ ಮತ್ತು ಸಾಹಿತ್ಯ, ಸುಜಿತ್ ಎಸ್ ನಾಯಕ್ ಸಂಕಲನ, ಗಣೇಶ್ ಹೆಗ್ಡೆ ಕ್ಯಾಮೆರಾ ನಿರ್ದೇಶನ ಚಿತ್ರಕ್ಕಿದೆ.
ಇದನ್ನೂ ಓದಿ: 50ನೇ ದಿನದತ್ತ ‘ಕನ್ನೇರಿ’ ಗೆಲುವಿನ ಹೆಜ್ಜೆ