‘ಕಾಂತಾರ 2’ ಚಿತ್ರದ ಶೂಟ್ ವೇಳೆ ಅರಣ್ಯಕ್ಕೆ ಹಾನಿ? ಎಚ್ಚರಿಕೆ ಕೊಟ್ಟ ಗ್ರಾಮಸ್ಥರು

| Updated By: ರಾಜೇಶ್ ದುಗ್ಗುಮನೆ

Updated on: Jan 20, 2025 | 9:59 AM

ರಿಷಬ್ ಶೆಟ್ಟಿ ಅವರ ‘ಕಾಂತಾರ 2’ ಚಿತ್ರೀಕರಣದ ಸಂದರ್ಭದಲ್ಲಿ ಅರಣ್ಯ ಪ್ರದೇಶದಲ್ಲಿ ಬೆಂಕಿ ಹಚ್ಚಲಾಗಿದೆ ಎಂಬ ಆರೋಪದಿಂದಾಗಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರತಂಡದ ವಿರುದ್ಧ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಲಾಗಿದೆ. ಪರಿಸರ ಹಾನಿ ಹಾಗೂ ವನ್ಯಜೀವಿಗಳಿಗೆ ಉಂಟಾಗಬಹುದಾದ ಅಪಾಯದ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

‘ಕಾಂತಾರ 2’ ಚಿತ್ರದ ಶೂಟ್ ವೇಳೆ ಅರಣ್ಯಕ್ಕೆ ಹಾನಿ? ಎಚ್ಚರಿಕೆ ಕೊಟ್ಟ ಗ್ರಾಮಸ್ಥರು
ಕಾಂತಾರ
Follow us on

‘ಕಾಂತಾರ’ ಸಿನಿಮಾ ಹಿಟ್ ಆದ ಬಳಿಕ ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇದು ಚಿತ್ರದ ಪ್ರೀಕ್ವೆಲ್. ಈ ಸಿನಿಮಾದ ಶೂಟಿಂಗ್ ಕುಂದಾಪುರದ ಸುತ್ತಮುತ್ತ ಸಾಗುತ್ತಿದೆ. ಇದರಲ್ಲಿಯೂ ಮಣ್ಣಿನ ಕಥೆ ಹೇಳಲು ರಿಷಬ್ ಶೆಟ್ಟಿ ರೆಡಿ ಆಗಿದ್ದಾರೆ. ಹೀಗಿರುವಾಗಲೇ ಅರಣ್ಯ ಜಾಗದಲ್ಲಿ ಬೆಂಕಿ ಹಚ್ಚಿ ಪರಿಸರಕ್ಕೆ ಹಾನಿಮಾಡುತ್ತಿರುವ ಆರೋಪ ತಂಡದ ಮೇಲೆ ಬಂದಿದೆ. ಸಿನಿಮಾ ತಂಡದ ವಿರುದ್ಧ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದ್ದಾರೆ.

‘ಕಾಂತಾರ’ ಯಶಸ್ಸಿನ ಬಳಿಕ ಹೊಂಬಾಳೆ ಫಿಲ್ಮ್ಸ್ ‘ಕಾಂತಾರ 2’ ಮಾಡುವ ಆಸಕ್ತಿ ತೋರಿಸಿತು. ರಿಷಬ್ ಶೆಟ್ಟಿ ಅವರು ಹೊಸ ಕಥೆಯೊಂದಿಗೆ ಎರಡನೇ ಪಾರ್ಟ್ ಮಾಡಲು ರೆಡಿ ಆಗಿದ್ದಾರೆ. ಚಿತ್ರದ ಶೂಟಿಂಗ್ ಹಾಗೂ ಅದರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕುಂದಾಪುರದಲ್ಲೇ ನಡೆಯುತ್ತಿದೆ. ಈ ಕಾರಣಕ್ಕೆ ರಿಷಬ್ ಅವರು ತಮ್ಮ ಹುಟ್ಟೂರಿಗೆ ಶಿಫ್ಟ್ ಆಗಿದ್ದಾರೆ.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆರೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಶೂಟಿಂಗ್ ನಡೆಸಲಾಗುತ್ತಿದೆ. ಜನವರಿ 2ರಿಂದ ಈ ಭಾಗದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಚಿತ್ರತಂಡ, ಶೂಟಿಂಗ್​ಗಾಗಿ ಗೋಮಾಳ ಜಾಗಕ್ಕೆ ಪರವಾನಗಿ ಪಡೆದಿದೆ. ಆದರೆ, ಅರಣ್ಯ ಜಾಗದಲ್ಲಿ ಬೆಂಕಿ ಹಚ್ಚಿ ಪರಿಸರಕ್ಕೆ ಹಾನಿಮಾಡುತ್ತಿರುವ ಆರೋಪವನ್ನು ಗ್ರಾಮಸ್ಥರು ಮಾಡಿದ್ದು, ಚಿತ್ರತಂಡದ ನಡೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಾಂತಾರ ಚಿತ್ರದ ಕಲಾವಿದರು ತೆರಳುತ್ತಿದ್ದ ಬಸ್ ಪಲ್ಟಿ; 6 ಜನರಿಗೆ ಗಂಭೀರ ಗಾಯ

‘ಚಿತ್ರೀಕರಣಕ್ಕೆ ಯಾವೆಲ್ಲಾ ಪರವಾನಿಗೆ ನೀಡಿದ್ದಾರೆ ಎಂಬ ಮಾಹಿತಿ ಕೊಡಬೇಕು. ಅರಣ್ಯ, ಕಂದಾಯ ಇಲಾಖೆಯವರು ಮಾಹಿತಿ ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ. ಸದ್ಯ ಕಾಡಿನಲ್ಲಿ ಬೆಂಕಿ ಹಚ್ಚಿದ್ದರಿಂದ ಕಾಡುಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಬರುತ್ತಿವೆ ಎನ್ನಲಾಗಿದೆ. ವನ್ಯಜೀವಿಗಳಿರುವ ಪ್ರದೇಶದಲ್ಲಿ ಚಿತ್ರೀಕರಣ ನಡೆಸಬಾರದು ಎಂಬುದು ಗ್ರಾಮಸ್ಥರ ಆಗ್ರಹ. ‘ಕೂಡಲೇ ಶೂಟಿಂಗ್​​ ಸ್ಥಗಿತಗೊಳಿಸಿ ಪರಿಸರ ಉಳಿಸಿ. ಇಲ್ಲವಾದರೆ ಡಿಸಿ ಕಚೇರಿ ಮುಂದೆ ಧರಣಿ ನಡೆಸುತ್ತೇವೆ’ ಎಂದು ಗ್ರಾಮಸ್ಥರ ಎಚ್ಚರಿಕೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.