AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂತಾರ ತಂಡ ನಿಯಮ ಉಲ್ಲಂಘಿಸಿದ್ದರೆ ಶೂಟಿಂಗ್ ನಿರ್ಬಂಧ: ಅರಣ್ಯ ಸಚಿವ ಈಶ್ವರ ಖಂಡ್ರೆ

ದೊಡ್ಡ ಬಜೆಟ್​ನಲ್ಲಿ ಮೂಡಿಬರುತ್ತಿರುವ ‘ಕಾಂತಾರ: ಚಾಪ್ಟರ್​ 1’ ಸಿನಿಮಾಗೆ ಶೂಟಿಂಗ್ ನಡೆಯುತ್ತಿದೆ. ಚಿತ್ರೀಕರಣದ ಸಂದರ್ಭದಲ್ಲಿ ಕೆಲವು ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪ ಇದೆ. ಈ ಬಗ್ಗೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಪ್ರತಿಕ್ರಿಯಿಸಿದ್ದಾರೆ. ಚಿತ್ರೀಕರಣದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದ್ದಾರೆ.

ಕಾಂತಾರ ತಂಡ ನಿಯಮ ಉಲ್ಲಂಘಿಸಿದ್ದರೆ ಶೂಟಿಂಗ್ ನಿರ್ಬಂಧ: ಅರಣ್ಯ ಸಚಿವ ಈಶ್ವರ ಖಂಡ್ರೆ
Rishab Shetty, Eshwar Khandre
ಮದನ್​ ಕುಮಾರ್​
|

Updated on: Jan 20, 2025 | 5:48 PM

Share

ರಿಷಬ್​ ಶೆಟ್ಟಿ ನಟಿಸಿ, ನಿರ್ದೇಶನ ಮಾಡುತ್ತಿರುವ ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ ವಿಘ್ನ ಎದುರಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ಧವಾಗುತ್ತಿರುವ ಈ ಸಿನಿಮಾದ ಶೂಟಿಂಗ್ ವೇಳೆ ನಿಯಮ ಉಲ್ಲಂಘನೆ ಮಾಡಿದ ಆರೋಪ ಎದುರಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಕಾಂತಾರ: ಚಾಪ್ಟರ್​ 1’ ಚಿತ್ರತಂಡದವರು ಒಂದು ವೇಳೆ ಷರತ್ತು ಉಲ್ಲಂಘನೆ ಮಾಡಿದ್ದರೆ ಚಿತ್ರೀಕರಣವನ್ನು ನಿರ್ಬಂಧಿಸಿ, ಕ್ರಮ ಜರುಗಿಸಲಾಗುವುದು ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಯಸಳೂರು ವಲಯದ ಶನಿವಾರ ಸಂತೆ ಬಳಿ ಹೇರೂರು ಗ್ರಾಮದ ಗವಿಬೆಟ್ಟ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ತಂಡ ಶೂಟಿಂಗ್ ನಡೆಸುತ್ತಿದೆ. ಇದಕ್ಕೆ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ವಿಧಾನಸೌಧದಲ್ಲಿ ಇಂದು (ಜನವರಿ 20) ಈಶ್ವರ ಖಂಡ್ರೆ ಅವರು ಉತ್ತರ ನೀಡಿದರು.

‘ಗವಿಬೆಟ್ಟ ಮತ್ತು ಸುತ್ತಮುತ್ತಲ ಪರಿಭಾವಿತ ಅರಣ್ಯದ ಅಂಚಿನ ಗೋಮಾಳದಲ್ಲಿ 23 ದಿನ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಚಿತ್ರೀಕರಣ ನಡೆಸಲು ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಯವರು ಅನುಮತಿ ಕೋರಿದ್ದರು. ಇದಕ್ಕೆ ಹಾಸನ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಷರತ್ತುಬದ್ಧ ಅನುಮತಿ ನೀಡಿದ್ದಾರೆ ಎಂದರು. ಆದರೆ ಕಾಂತಾರ ಚಿತ್ರತಂಡ ಚಿತ್ರೀಕರಣದ ವೇಳೆ ಸ್ಫೋಟಕ ಬಳಸುತ್ತಿದ್ದು, ಇದರಿಂದ ವನ್ಯಜೀವಿಗಳು ವಿಚಲಿತವಾಗುತ್ತಿವೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿರುತ್ತದೆ’ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.

‘ಈ ವಿಷಯ ತಿಳಿಯುತ್ತಿದ್ದಂತೆಯೇ ನಾನು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇಂದೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ತಿಳಿಸಿದ್ದೇನೆ. ಚಿತ್ರತಂಡದಿಂದ ಒಂದೊಮ್ಮೆ ಷರತ್ತುಗಳ ಉಲ್ಲಂಘನೆ ಆಗಿದ್ದರೆ, ವನ್ಯಜೀವಿಗಳಿಗೆ ಅಥವಾ ಸಸ್ಯ ಸಂಕುಲಕ್ಕೆ ಯಾವುದೇ ಹಾನಿ ಆಗಿದ್ದಲ್ಲಿ ಕೂಡಲೇ ಚಿತ್ರೀಕರಣ ಸ್ಥಗಿತಗೊಳಿಸಲು ಮತ್ತು ಕ್ರಮ ಜರುಗಿಸಲು ಸೂಚಿಸಿದ್ದೇನೆ’ ಎಂದಿದ್ದಾರೆ ಸಚಿವ ಈಶ್ವರ ಖಂಡ್ರೆ.

ಇದನ್ನೂ ಓದಿ: ‘ಕಾಂತಾರ 2’ ಚಿತ್ರದ ಶೂಟ್ ವೇಳೆ ಅರಣ್ಯಕ್ಕೆ ಹಾನಿ? ಎಚ್ಚರಿಕೆ ಕೊಟ್ಟ ಗ್ರಾಮಸ್ಥರು

ಇನ್ನು, ಟಾಕ್ಸಿಕ್ ಚಿತ್ರತಂಡಕ್ಕೆ ಎಚ್.ಎಂ.ಟಿ.ಯಿಂದ ಭೂಮಿ ಖರೀದಿಸಿರುವ ಕೆನರಾ ಬ್ಯಾಂಕ್ ಗುತ್ತಿಗೆ ನೀಡಿದ್ದು, ಮೂರೂ ಸಂಸ್ಥೆ ಮೇಲೆ ಎಫ್.ಐ.ಆರ್. ಆಗಿದೆ. ಪ್ರಕರಣ ನ್ಯಾಯಾಲಯದಲ್ಲಿದೆ. ಘನ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ಇದರ ತೆರವಿಗೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.