‘ಕಾಂತಾರ’ ಸಿನಿಮಾ (Kantara Movie) ಕನ್ನಡದಲ್ಲಿ ಅಬ್ಬರಿಸಿದೆ. ಆ ಬಳಿಕ ಪರಭಾಷೆಗಳಲ್ಲೂ ರಿಲೀಸ್ ಆಗಿ ಸಿನಿಮಾ ಮೆಚ್ಚುಗೆ ಪಡೆದುಕೊಂಡಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಈ ಸಿನಿಮಾ ಸೆಪ್ಟೆಂಬರ್ 30ರಂದು ರಿಲೀಸ್ ಆಯಿತು. ಚಿತ್ರ ರಿಲೀಸ್ ಆಗಿ 18 ದಿನ ಕಳೆದರೂ ಅನೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಟಿಕೆಟ್ ಬುಕಿಂಗ್ ಆ್ಯಪ್ ಬುಕ್ ಮೈ ಶೋನಲ್ಲಿ(Book My Show) ‘ಕಾಂತಾರ’ದ ಕನ್ನಡ ವರ್ಷನ್ 9.9 ರೇಟಿಂಗ್ ಉಳಿಸಿಕೊಂಡಿದೆ. ಬರೋಬ್ಬರಿ 92 ಸಾವಿರ ಜನರು ವೋಟ್ ಮಾಡಿದ ಹೊರತಾಗಿಯೂ ಇಷ್ಟು ರೇಟಿಂಗ್ ಉಳಿಸಿಕೊಂಡ ಏಕೈಕ ಸಿನಿಮಾ ಎಂದರೆ ಅದು ‘ಕಾಂತಾರ’ ಅನ್ನೋದು ವಿಶೇಷ. ಪರಭಾಷೆಗಳಲ್ಲೂ ಚಿತ್ರಕ್ಕೆ ಮೆಚ್ಚುಗೆ ಸಿಗುತ್ತಿದೆ.
‘ಕಾಂತಾರ’ ಚಿತ್ರಕ್ಕೆ ಕನ್ನಡದವರು ನೀಡಿದ ಪ್ರತಿಕ್ರಿಯೆ ನೋಡಿ ಪರಭಾಷೆಯವರಿಗೂ ಕುತೂಹಲ ಮೂಡಿತು. ಕನ್ನಡದಲ್ಲೇ ಈ ಚಿತ್ರವನ್ನು ನೋಡಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಿದರು. ಆ ಬಳಿಕ ಬೇರೆ ಭಾಷೆಗೂ ಡಬ್ ಮಾಡಿ ಸಿನಿಮಾ ರಿಲೀಸ್ ಮಾಡುವ ಒತ್ತಾಯ ಹೆಚ್ಚಿದ್ದರಿಂದ ಚಿತ್ರವನ್ನು ಹಿಂದಿ, ತೆಲುಗು, ತಮಿಳಿನಲ್ಲಿ ರಿಲೀಸ್ ಮಾಡಲಾಯಿತು. ಅಲ್ಲಿನವರಿಂದಲೂ ಸಿನಿಮಾಗೆ ಶಹಭಾಷ್ಗಿರಿ ಸಿಕ್ಕಿದೆ.
ಹಿಂದಿಯಲ್ಲಿ ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ರಿಷಬ್ ಸಿನಿಮಾ ಕೋಟಿಕೋಟಿ ಕಲೆಕ್ಷನ್ ಮಾಡುತ್ತಿದೆ. ಬುಕ್ ಮೈ ಶೋನಲ್ಲಿ ಹಿಂದಿ ವರ್ಷನ್ಗೆ 26.5 ಸಾವಿರ ಮಂದಿ ವೋಟ್ ಮಾಡಿದ್ದು 9.5 ರೇಟಿಂಗ್ ಪಡೆದುಕೊಂಡಿದೆ. ತಮಿಳಿನಲ್ಲಿ ಈ ಸಿನಿಮಾಗೆ 5.8 ಸಾವಿರ ವೋಟ್ ಬಿದ್ದಿದ್ದು, 9.1 ರೇಟಿಂಗ್ ಸಿಕ್ಕಿದೆ. ತೆಲುಗಿನವರಂತೂ ಚಿತ್ರವನ್ನು ಸಖತ್ ಇಷ್ಟಪಟ್ಟಿದ್ದಾರೆ. 25 ಸಾವಿರಕ್ಕೂ ಅಧಿಕ ವೋಟಿಂಗ್ ಸಿಕ್ಕಿದ್ದು, 9.4 ರೇಟಿಂಗ್ ಸಿಕ್ಕಿದೆ. ಅಕ್ಟೋಬರ್ 20ರಂದು ಚಿತ್ರ ಮಲಯಾಳಂನಲ್ಲಿ ತೆರೆಗೆ ಬರುತ್ತಿದೆ.
ಇದನ್ನೂ ಓದಿ: ಜನಮೆಚ್ಚಿದ ‘ಕಾಂತಾರ’ ಬಗ್ಗೆ ರಶ್ಮಿಕಾ ಮೌನ; ಮೊದಲ ಚಿತ್ರದ ನಿರ್ದೇಶಕರನ್ನೇ ಮರೆತ್ರಾ ಕಿರಿಕ್ ಪಾರ್ಟಿ ನಟಿ?
‘ಕಾಂತಾರ’ ಸಿನಿಮಾ ಮಾಡುತ್ತಿರುವ ದಾಖಲೆಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಭಾನುವಾರ (ಅಕ್ಟೋಬರ್ 17) ಈ ಸಿನಿಮಾ ಒಂದೇ ದಿನ 15 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮುಂದಿನ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ಮತ್ತೂ ಹೆಚ್ಚಲಿದೆ. ಈಗಾಗಲೇ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ ಅನ್ನೋದು ವಿಶೇಷ. ‘ಕಾಂತಾರ’ ಶೀಘ್ರವೇ ಈ ಚಿತ್ರ 200 ಕೋಟಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.