ತುಳುನಾಡಿನ ಸಂಸ್ಕೃತಿಯನ್ನು ಸಾರುವ ‘ಕಾಂತಾರ’ (Kantara) ಸಿನಿಮಾ ಭರ್ಜರಿ ಗೆಲುವು ಕಂಡಿದೆ. ಕನ್ನಡ ಚಿತ್ರರಂಗಕ್ಕೆ ಈ ಸಿನಿಮಾ ಹೆಮ್ಮೆ ತಂದಿದೆ. ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಗೆ ಬಹುದೊಡ್ಡ ಗೆಲುವು ಸಿಕ್ಕಿದೆ. ರಿಷಬ್ ಶೆಟ್ಟಿ (Rishab Shetty) ನಟನೆ ಮತ್ತು ನಿರ್ದೇಶನದ ಬಗ್ಗೆ ಪರಭಾಷೆ ಮಂದಿ ಕೂಡ ಶಹಭಾಷ್ ಎಂದಿದ್ದಾರೆ. ಗಲ್ಲಾ ಪೆಟ್ಟಿಗೆಯಲ್ಲಿ ಈ ಸಿನಿಮಾ 300 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಆರಂಭದಲ್ಲಿ ಈ ಕಥೆಯನ್ನು ಪುನೀತ್ ರಾಜ್ಕುಮಾರ್ ಅವರಿಗೆ ಹೇಳಲಾಗಿತ್ತು. ಕಾರಣಾಂತರ ಅವರು ಈ ಚಿತ್ರದಲ್ಲಿ ನಟಿಸಲಿಲ್ಲ. ಒಂದು ವೇಳೆ ನಟಿಸಿದ್ದರೆ ಅವರ ಗೆಟಪ್ ಹೇಗಿರುತ್ತಿತ್ತು? ಕಲಾವಿದರೊಬ್ಬರ ಕಲ್ಪನೆಯಲ್ಲಿ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ‘ಕಾಂತಾರ’ ಗೆಟಪ್ನಲ್ಲಿ ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಪೋಸ್ಟರ್ ಸಿದ್ಧಗೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಡಿಜಿಟಲ್ ಆರ್ಟಿಸ್ಟ್ ಕುಶಾಲ್ ಹಿರೇಮಠ್ ಅವರು ಈ ಪೋಸ್ಟರ್ ರಚಿಸಿದ್ದಾರೆ. ಪುನೀತ್ ಅವರ ಬೇರೆ ಫೋಟೋವನ್ನು ಬಳಸಿಕೊಂಡು ಈ ರೀತಿ ವಿನ್ಯಾಸ ಮಾಡಲಾಗಿದೆ. ‘ಕಾಂತಾರ’ ಚಿತ್ರದ ಕಥಾನಾಯಕ ಶಿವನ ಪಾತ್ರವನ್ನು ಪುನೀತ್ ನಿರ್ವಹಿಸಿದ್ದರೆ ಅವರ ಗೆಟಪ್ ಹೇಗಿರುತ್ತಿತ್ತು ಎಂದು ಈ ರೀತಿಯಾಗಿ ಅವರು ಕಲ್ಪಿಸಿಕೊಂಡಿದ್ದಾರೆ. ಈ ಫೋಟೋ ನೋಡಿ ಅಪ್ಪು ಅಭಿಮಾನಿಗಳು ಎಮೋಷನಲ್ ಆಗುತ್ತಿದ್ದಾರೆ.
‘ಹೊಂಬಾಳೆ ಫಿಲ್ಮ್ಸ್’ ನಿರ್ಮಾಣ ಸಂಸ್ಥೆ ಜೊತೆಗೆ ಪುನೀತ್ ರಾಜ್ಕುಮಾರ್ ಅವರು ಆಪ್ತ ಒಡನಾಟ ಹೊಂದಿದ್ದಾರೆ. ‘ಕಾಂತಾರ’ ಚಿತ್ರವನ್ನು ಅವರೇ ಮಾಡಬೇಕು ಎಂದು ಆರಂಭದಲ್ಲಿ ಅಂದುಕೊಳ್ಳಲಾಗಿತ್ತು. ಆದರೆ ಈ ಪಾತ್ರಕ್ಕೆ ರಿಷಬ್ ಶೆಟ್ಟಿ ಅವರು ಸೂಕ್ತ ಎಂದು ಸ್ವತಃ ಪುನೀತ್ ಸೂಚಿಸಿದ ಬಳಿಕ ಆ ಪಾತ್ರ ರಿಷಬ್ ಪಾಲಾಯಿತು. ಇಂದು ‘ಕಾಂತಾರ’ ಎಲ್ಲೆಡೆ ಜಯಭೇರಿ ಭಾರಿಸುತ್ತಿದೆ. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಪುನೀತ್ ರಾಜ್ಕುಮಾರ್ ಅವರು ನಮ್ಮೊಂದಿಗೆ ಇಲ್ಲವಲ್ಲ ಎಂದು ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.
ಕನ್ನಡ ಪಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗೂ ಡಬ್ ಆಗಿ ‘ಕಾಂತಾರ’ ತೆರೆಕಂಡಿದೆ. ಹಿಂದಿ ಪ್ರೇಕ್ಷಕರು ಈ ಸಿನಿಮಾವನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಉತ್ತರ ಭಾರತದಲ್ಲಿ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಹಿಂದಿ ವರ್ಷನ್ನಿಂದ ಈವರೆಗೂ 70 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ರಿಷಬ್ ಶೆಟ್ಟಿ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಒಂದು ವೇಳೆ ಪುನೀತ್ ರಾಜ್ಕುಮಾರ್ ಅವರು ಇದ್ದಿದ್ದರೆ ಈ ಚಿತ್ರದ ಗೆಲುವನ್ನು ಖಂಡಿತ ಸಂಭ್ರಮಿಸುತ್ತಿದ್ದರು.
ಪುನೀತ್ ರಾಜ್ಕುಮಾರ್ ಅವರ ಕನಸಿನ ಪ್ರಾಜೆಕ್ಟ್ ‘ಗಂಧದ ಗುಡಿ’ ಬಿಡುಗಡೆಯಾಗಿ ಮೆಚ್ಚುಗೆ ಪಡೆದುಕೊಂಡಿದೆ. ಕರ್ನಾಟಕದ ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಬಗ್ಗೆ ತಿಳಿಸಿಕೊಡುವ ಈ ಸಾಕ್ಷ್ಯಚಿತ್ರಕ್ಕೆ ಅಮೋಘವರ್ಷ ನಿರ್ದೇಶನ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:12 am, Fri, 11 November 22