ಕರ್ನಾಟಕ ಬಜೆಟ್ 2025: ಚಿತ್ರರಂಗಕ್ಕೆ ಸಿಕ್ಕಿದ್ದೇನು?
Karnataka Budget 2025: ಸಿಎಂ ಸಿದ್ದರಾಮಯ್ಯ ಅವರು ಇಂದು ಕರ್ನಾಟಕ ಬಜೆಟ್ ಮಂಡನೆ ಮಾಡಿದರು. ಹಲವು ಕ್ಷೇತ್ರಗಳು ಹಲವು ಯೋಜನೆಗಳು, ಅನುದಾನಗಳನ್ನು ನೀಡಿದರು. ಅದರಂತೆ ಕನ್ನಡ ಚಿತ್ರರಂಗಕ್ಕೂ ಸಹ ಕೆಲ ಅನುದಾನಗಳನ್ನು ನೀಡಿದ್ದಾರೆ. ಈ ಬಜೆಟ್ನಲ್ಲಿ ಚಿತ್ರರಂಗಕ್ಕೆ ಸಿಕ್ಕಿದ್ದೇನು? ಇಲ್ಲಿದೆ ಮಾಹಿತಿ...

ಸಿಎಂ ಸಿದ್ದರಾಮಯ್ಯ ಅವರು ಇಂದು 2025-26ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಮಾಡಿದರು. ಹಲವು ಕ್ಷೇತ್ರಗಳಿಗೆ ಹಲವು ಅನುದಾನಗಳನ್ನು ಸಿದ್ದರಾಮಯ್ಯ ಘೋಷಣೆ ಮಾಡಿದರು. ಈ ಬಾರಿ ಕನ್ನಡ ಚಿತ್ರರಂಗಕ್ಕೂ ಸಹ ಸಿದ್ದರಾಮಯ್ಯ ಅವರು ಕೆಲವು ಸಿಹಿ ಸುದ್ದಿಗಳನ್ನು ಬಜೆಟ್ನಲ್ಲಿ ನೀಡಿದ್ದಾರೆ. ಚಿತ್ರರಂಗದ ಕೆಲ ಬೇಡಿಕೆಗಳನ್ನು ಸಿದ್ದರಾಮಯ್ಯ ಅವರು ಈ ಬಾರಿಯ ಬಜೆಟ್ನಲ್ಲಿ ಈಡೇರಿಸಿದ್ದಾರೆ. ಒಟ್ಟಾರೆಯಾಗಿ ಈ ಬಾರಿಯ ಬಜೆಟ್ನಲ್ಲಿ ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದೇನು? ಇಲ್ಲಿದೆ ಮಾಹಿತಿ…
ಮೈಸೂರಿನಲ್ಲಿ ಫಿಲಂ ಸಿಟಿ
ಕನ್ನಡ ಚಿತ್ರರಂಗದ ದಶಕಗಳ ಬೇಡಿಕೆಯಾದ ಫಿಲಂ ಸಿಟಿ ನಿರ್ಮಾಣಕ್ಕೆ 500 ಕೋಟಿ ರೂಪಾಯಿ ಹಣವನ್ನು ಮೀಸಲಿಡಲಿರುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಫಿಲಂ ಸಿಟಿ ನಿರ್ಮಾಣಕ್ಕೆ ಮೈಸೂರಿನಲ್ಲಿ 150 ಎಕರೆ ಜಾಗವನ್ನು ಕಾಯ್ದಿರಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕನ್ನಡ ಸಿನಿಮಾಗಳಿಗೆ OTT ವೇದಿಕೆ
ಕನ್ನಡ ಸಿನಿಮಾಗಳನ್ನು ಯಾವ ಒಟಿಟಿಗಳೂ ಖರೀದಿಸುತ್ತಿಲ್ಲ ಎಂಬ ದೂರು ಕಳೆದ ಕೆಲ ವರ್ಷಗಳಿಂದ ಕೇಳಿ ಬರುತ್ತಿದೆ. ಹಾಗಾಗಿ ಈಗ ಸರ್ಕಾರವೇ ಮುಂದಾಗಿ ಒಟಿಟಿ ವೇದಿಕೆ ಸೃಷ್ಟಿಸಲು ಮುಂದಾಗಿದ್ದು, ಇಲ್ಲಿ ಕನ್ನಡ ಸಿನಿಮಾಗಳನ್ನು ಪ್ರದರ್ಶನ ಮಾಡಲಿದೆ. ಕೇರಳದಲ್ಲಿ ಈಗಾಗಲೇ ಈ ಮಾದರಿ ಚಾಲ್ತಿಯಲ್ಲಿದೆ.
ಸಿನಿಮಾ ಕ್ಷೇತ್ರ ಕೈಗಾರಿಕಾ ನೀತಿ ಅಡಿ ತರಲು ನಿರ್ಧಾರ
ಸಿನಿಮಾ ಉದ್ಯಮವನ್ನು ಸಿನಿಮಾ ಕೈಗಾರಿಕೆ ಎಂದು ಘೋಷಿಸಲಾಗಿದೆ. ಸಿನಿಮಾ ರಂಗವನ್ನು ಕೈಗಾರಿಕೆಯನ್ನಾಗಿ ಗುರುತಿಸುವ ಮೂಲಕ ಕೈಗಾರಿಕಾ ನೀತಿಯ ಅಡಿ ಸರ್ಕಾರ ನೀಡುವ ಸವಲತ್ತುಗಳು, ನಿಯಮಗಳು ಸಿನಿಮಾ ರಂಗಕ್ಕೂ ಅನ್ವಯ ಆಗಲಿದೆ.
ಮಲ್ಟಿಫ್ಲೆಕ್ಸ್ಗಳಲ್ಲಿ ಏಕರೂಪದ ದರ
ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ಗಳು ಬಹಳ ದುಬಾರಿ ಬೆಲೆಗೆ ಟಿಕೆಟ್ ಮಾರಾಟ ಮಾಡುತ್ತಿವೆ. ಮಲ್ಟಿಪ್ಲೆಕ್ಸ್ಗಳು ದುಬಾರಿ ಬೆಲೆಗೆ ಟಿಕೆಟ್ ಮಾರಾಟ ಮಾಡುತ್ತಿರುವುದರ ವಿರುದ್ಧ ಕ್ರಮಕ್ಕೆ ಬಹಳ ದಿನಗಳಿಂದಲೂ ಒತ್ತಾಯ ಕೇಳಿ ಬಂದಿತ್ತು. ಇದೀಗ ಸರ್ಕಾರವು, ಮಲ್ಟಿಪ್ಲೆಕ್ಸ್ಗಳ ಟಿಕೆಟ್ ದರವನ್ನು 200 ರೂಪಾಯಿಗೆ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.
ಇದನ್ನೂ ಓದಿ:ಕನ್ನಡ ಸಿನಿಮಾಗಳಿಗಾಗಿ ಒಟಿಟಿ, ಕೈಗಾರಿಕಾ ನೀತಿಯಡಿ ಚಿತ್ರರಂಗ; ಬಜೆಟ್ನಲ್ಲಿ ಘೋಷಣೆ ಮಾಡಿದ ಸಿದ್ದರಾಮಯ್ಯ
ಚಲನಚಿತ್ರ ಅಕಾಡೆಮಿ ಅಭಿವೃದ್ಧಿ
ಬೆಂಗಳೂರಿನ ನಂದಿನಿ ಲೇಔಟ್ನಲ್ಲಿರುವ ಚಲನಚಿತ್ರ ಅಕಾಡೆಮಿಯನ್ನು ಅಭಿವೃದ್ಧಿಪಡಿಸುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಖಾಸಗಿ ಸಹಭಾಗಿತ್ವದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಭಿವೃದ್ಧಿ ಮಾಡಲಾಗುತ್ತದೆಯಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ