ಚರಣ್ (Charan) ಎಂಬುವವರು ಕಿಚ್ಚ ಸುದೀಪ್ (Kichcha Sudeep) ಬಗ್ಗೆ ಅವಹೇಳನಕಾರಿಯಾದಂತಹ ಮಾತುಗಳನ್ನು ಆಡಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಚಿತ್ರರಂಗದ ಅನೇಕರು ಚರಣ್ ವಿರುದ್ಧ ಕಿಡಿಕಾರಿದ್ದರು. ಸುದೀಪ್ ಫ್ಯಾನ್ಸ್ ಕೂಡ ಕೋಪಗೊಂಡಿದ್ದರು. ಈಗ ಈ ವಿಚಾರಕ್ಕೆ ಸಂಬಂಧಿಸಿ ವಾಣಿಜ್ಯ ಮಂಡಳಿಯವರು ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಕೆ ಮಾಡಲಾಗಿದೆ. ಈ ದೂರಿನ ಪ್ರತಿ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ.
ಸುದೀಪ್ ವಿರುದ್ಧ ಚರಣ್ ಬಳಕೆ ಮಾಡಿದ್ದ ಶಬ್ದ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ನಿರ್ದೇಶಕ ನಂದ ಕಿಶೋರ್ ಅವರು ಕೂಡ ಚರಣ್ ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ನಂದ ಕಿಶೋರ್ ವಿರುದ್ಧವೂ ಚರಣ್ ಹರಿಹಾಯ್ದಿದ್ದರು. ಈಗ ಚರಣ್ ವಿರುದ್ಧ ದೂರು ನೀಡಲಾಗಿದೆ.
‘ಭಾರತೀಯ ಚಿತ್ರರಂಗದ ಹೆಸರಾಂತ ಕಲಾವಿದ ಕಿಚ್ಚ ಸುದೀಪ್ ವಿರುದ್ಧ ಅಹೋರಾತ್ರ ಮತ್ತು ಚರಣ್ ಎಂಬುವರು ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ, ಅವಹೇಳನಕಾರಿಯಾಗಿ ಪದಬಳಕೆ ಮಾಡಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗ ಹಾಗೂ ಸುದೀಪ್ ಘನತೆ, ಗೌರವಕ್ಕೆ ಚ್ಯುತಿ ತಂದಿದ್ದು ಬೇಸರದ ಸಂಗತಿ. ಇಂತಹ ಹೇಳಿಕೆಗಳಿಂದ ಕನ್ನಡ ಚಿತ್ರರಂಗ ಹಾಗೂ ಕಲಾವಿದರ ಬಗ್ಗೆ ಸಾರ್ವಜನಿಕರಲ್ಲಿ ಇಲ್ಲಸಲ್ಲದ ಗೊಂದಲಗಳಿಗೆ ಎಡೆಮಾಡಿಕೊಟ್ಟಂತಾಗುತ್ತದೆ. ಹೀಗಾಗಿ ಅಹೋರಾತ್ರ ಮತ್ತು ಚರಣ್ ವಿರುದ್ಧ ಕಾನೂನು ಕ್ರಮ ಜರುಗಿಸಿ, ಚಿತ್ರರಂಗದ ಹಾಗೂ ಕಲಾವಿದರ ಬೆಳವಣಿಗೆಗೆ ಯಾವುದೇ ರೀತಿಯ ಚ್ಯುತಿ ಬರದಂತೆ ಸಹಕರಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೋರುತ್ತೇವೆ’ ಎಂದು ವಾಣಿಜ್ಯ ಮಂಡಳಿಯವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಕಿಚ್ಚ ಸುದೀಪ್ ಬಗ್ಗೆ ಅವಹೇಳನಕಾರಿ ವಿಡಿಯೋ ಮಾಡಿದ ವ್ಯಕ್ತಿ ವಿರುದ್ಧ ನಿರ್ದೇಶಕ ನಂದ ಕಿಶೋರ್ ಆಕ್ರೋಶ
ಕಿಚ್ಚ ಸುದೀಪ್ ಬಗ್ಗೆ ಚರಣ್ ಅವಹೇಳನಕಾರಿಯಾಗಿ ಮಾತನಾಡಿರುವುದು ನಿರ್ದೇಶಕ ನಂದ ಕಿಶೋರ್ ಗಮನಕ್ಕೆ ಬಂದಿತ್ತು. ಆ ಬಗ್ಗೆ ಅವರು ಸಿಟ್ಟಾಗಿದ್ದರು. ಅವಹೇಳನಕಾರಿಯಾಗಿ ಮಾತನಾಡಿದ ಚರಣ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ‘ಕನ್ನಡ ಚಿತ್ರರಂಗದ ಯಾವುದೇ ಕಲಾವಿದರ ಬಗ್ಗೆ ಮಾತನಾಡುವುದಕ್ಕೂ ಮುನ್ನ ಎಚ್ಚರಿಕೆ ಇರಲಿ’ ಎಂದು ಖಡಕ್ ವಾರ್ನಿಂಗ್ ನೀಡಿದ್ದರು.
Published On - 4:55 pm, Mon, 11 July 22