
ಚಿತ್ರಮಂದಿರ ಮಾಲೀಕರು ಮತ್ತು ನಿರ್ಮಾಪಕರ ನಡುವೆ ಭಾರತದ ಬಹುತೇಕ ಎಲ್ಲ ಪ್ರಮುಖ ಚಿತ್ರರಂಗಗಳಲ್ಲೂ ಭಿನ್ನಾಭಿಪ್ರಾಯ ಚಾಲ್ತಿಯಲ್ಲಿದೆ. ವಿಶೇಷವಾಗಿ ಸಿನಿಮಾದ ಲಾಭ ಹಂಚಿಕೆ ವಿಚಾರದಲ್ಲಿ ದೊಡ್ಡ ಮಟ್ಟದ ಭಿನ್ನಾಭಿಪ್ರಾಯಗಳು ಚಾಲ್ತಿಯಲ್ಲಿವೆ. ಕರ್ನಾಟಕದಲ್ಲಿ ಬಹುತೇಕ ಸಿಂಗಲ್ ಚಿತ್ರಮಂದಿರಗಳಲ್ಲಿ ಬಾಡಿಗೆ ಆಧಾರದಲ್ಲಿ ಸಿನಿಮಾ ಪ್ರದರ್ಶನ ಮಾಡಲಾಗುತ್ತದೆ. ನಿರ್ಮಾಪಕರು ಅಥವಾ ವಿತರಕರು ಚಿತ್ರಮಂದಿರವನ್ನು ಇಂತಿಷ್ಟು ದಿನಗಳಿಗೆಂದು ಬಾಡಿಗೆ ಪಡೆದು ಸಿನಿಮಾ ಪ್ರದರ್ಶಿಸುತ್ತಾರೆ. ಆದರೆ ಮಲ್ಟಿಪ್ಲೆಕ್ಸ್ನಲ್ಲಿ ಅದೇ ನಿರ್ಮಾಪಕರು ಲಾಭ ಹಂಚಿಕೆ ವಿಧಾನದಲ್ಲಿ ಸಿನಿಮಾ ಪ್ರದರ್ಶಿಸುತ್ತಾರೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರದ ಮಾಲೀಕರು ಸಹ ತಮಗೂ ಲಾಭ ಹಂಚಿಕೆ ವಿಧಾನವೇ ಬೇಕೆಂದು ಆಗ್ರಹಿಸಿದ್ದರು. ಅದರ ಬಗ್ಗೆ ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಲು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಹಲವು ಸಂಘ ಸಂಸ್ಥೆಗಳೊಟ್ಟಿಗೆ ಇಂದು ಸಭೆ ನಡೆಸಿದ ಬಳಿಕ ಮಾತನಾಡಿದ ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲಾ, ‘ಪ್ರದರ್ಶಕ ವಲಯದ ಅಧ್ಯಕ್ಷರು ಫಿಲಂ ಚೇಂಬರ್ಗೆ ಪತ್ರ ನೀಡಿ ಬದಲಾವಣೆಗೆ ಕೋರಿದ್ದರು. ಹಾಗಾಗಿ ಚಿತ್ರಮಂದಿರಗಳಲ್ಲಿ ಶೇಕಡವಾರು ಪದ್ಧತಿಯಲ್ಲಿ ಸಿನಿಮಾ ಪ್ರದರ್ಶನ ಮಾಡುವ ಬಗ್ಗೆ ಸಂಘ ಸಂಸ್ಥೆಗಳ ಪ್ರಮುಖರನ್ನು ಕರೆಸಿ ಸಭೆ ನಡೆಸಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಜಯಮಾಲಾ ಹೇಳಿದರು.
‘ಕನ್ನಡ ಚಿತ್ರ ರಂಗದಲ್ಲಿ ವರ್ಷಕ್ಕೆ 250 ಸಿನಿಮಾಗಳನ್ನು ನಿರ್ಮಾಣ ಮಾಡಲಾಗುತ್ತದೆ. ಅವುಗಳಲ್ಲಿ 200 ಹೊಸಬರ ಸಿನಿಮಾಗಳೇ ಇರುತ್ತವೆ. ಹೀಗಾಗಿ ಎಲ್ಲರಿಗೂ ಸಹಾಯ ಆಗಬೇಕು. ಅದರಲ್ಲೂ ಹೊಸ ನಿರ್ಮಾಪಕರಿಗೆ ಹಾಗೂ ಕಡಿಮೆ ಬಜೆಟ್ ನಲ್ಲಿ ಸಿನಿಮಾ ಮಾಡುವ ನಿರ್ಮಾಪಕರಿಗೆ ಒಳ್ಳೇದು ಆಗಬೇಕು ಅನ್ನುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಿಗೆ ಕೂತು ಚರ್ಚೆ ಮಾಡಿ ನಿರ್ಧಾರ ಮಾಡಿದೀವಿ. ಇನ್ನು ಮುಂದೆ ಚಿತ್ರಮಂದಿರಗಳು ಬಾಡಿಗೆ ಮಾದರಿ ಕೈಬಿಟ್ಟು ಶೇಕಡವಾರು ಪದ್ಧತಿಯಲ್ಲಿ ಸಿನಿಮಾ ಪ್ರದರ್ಶಿಸಬೇಕು. ಮುಂದಿನ ಶುಕ್ರವಾರದಿಂದ ಇದು ಜಾರಿ ಆಗಬೇಕು’ ಎಂದರು.
ಇದನ್ನೂ ಓದಿ:ಆಸ್ಕರ್ಗೆ ಆಯ್ಕೆಯಾದ ಮರಾಠಿ ಸಿನಿಮಾ ‘ಗೋಂಧಳ್’ ಈಗ ಚಿತ್ರಮಂದಿರಕ್ಕೆ
ಇಷ್ಟು ದಿನ ಚಿತ್ರಮಂದಿರಗಳನ್ನು ಬಾಡಿಗೆ ಪಡೆದು ಸಿನಿಮಾ ಪ್ರದರ್ಶನ ಮಾಡಲಾಗಿತ್ತು. ಸಿನಿಮಾದ ಕಲೆಕ್ಷನ್ಗೂ ಚಿತ್ರಮಂದಿರಗಳಿಗೂ ಸಂಬಂಧ ಇರಲಿಲ್ಲ. ಆದರೆ ಈಗ ಲಾಭ ಹಂಚಿಕೆ ಮಾದರಿಯಲ್ಲಿ ಯಾವುದೇ ಸಿನಿಮಾ, ನಿರ್ದಿಷ್ಟ ಚಿತ್ರಮಂದಿರದಲ್ಲಿ ಮಾಡುವ ಗಳಿಕೆಯ ನಿರ್ದಿಷ್ಟ ಭಾಗ ಚಿತ್ರಮಂದಿರಗಳ ಮಾಲೀಕರಿಗೆ ಹೋಗುತ್ತದೆ. ಮಲ್ಟಿಪ್ಲೆಕ್ಸ್ಗಳಲ್ಲಿ ಈಗಾಗಲೇ ಈ ಮಾದರಿ ಚಾಲ್ತಿಯಲ್ಲಿದೆ. ನೆರೆಯ ರಾಜ್ಯಗಳಲ್ಲಿಯೂ ಪ್ರದರ್ಶಕರು ಇದೇ ಶೇಕಡವಾರು ಮಾದರಿಯಲ್ಲೇ ಲಾಭ ಹಂಚಿಕೆ ಆಗಬೇಕೆಂದು ಪಟ್ಟು ಹಿಡಿದಿದ್ದಾರೆ. ಇದೀಗ ಕರ್ನಾಟಕದಲ್ಲೂ ಇದೇ ಮಾದರಿ ಅನುಸರಿಯಲು ಫಿಲಂ ಚೇಂಬರ್ ಒತ್ತಾಯಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ