ನಟ ಅಂಬರೀಷ್ (Ambareesh) ಅವರು ಕನ್ನಡ ಚಿತ್ರರಂಗದ ಪಾಲಿಗೆ ಹಿರಿಯಣ್ಣನಂತೆ ಇದ್ದರು. ಅವರು 2018ರ ನವೆಂಬರ್ 24ರಂದು ನಿಧನರಾದರು. ಅವರನ್ನು ಕಳೆದುಕೊಂಡು ಮೂರು ವರ್ಷದ ಮೇಲಾಗಿದೆ. ಅವರ ಅಂತ್ಯಸಂಸ್ಕಾರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದಿತ್ತು. ಅಲ್ಲಿ ಅಂಬರೀಷ್ ಸ್ಮಾರಕ ನಿರ್ಮಾಣ ಆಗಬೇಕು ಎಂಬುದು ಅಭಿಮಾನಿಗಳ ಬೇಡಿಕೆ ಆಗಿತ್ತು. ಇದಕ್ಕೆ ಸರ್ಕಾರ ಸ್ಪಂದಿಸಿದೆ. ಅಂಬರೀಷ್ ಸ್ಮಾರಕ ನಿರ್ಮಾಣಕ್ಕೆ 12 ಕೋಟಿ ರೂಪಾಯಿ ಅನುದಾನ ನೀಡುವ ಬಗ್ಗೆ ಕರ್ನಾಟಕ ಸರ್ಕಾರ (Karnataka Government) ಘೋಷಣೆ ಮಾಡಿದೆ.
‘ನಾಗರಹಾವು’ (1972) ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು ಅಂಬರೀಷ್. ಹೀರೋ ಆಗಿ, ಖಳ ನಟನಾಗಿ ಮತ್ತು ಪೋಷಕ ಪಾತ್ರದ ಮೂಲಕ ಗುರುತಿಸಿಕೊಂಡರು. ರೆಬೆಲ್ ಸ್ಟಾರ್, ಮಂಡ್ಯದ ಗಂಡು ಎಂಬಿತ್ಯಾದಿ ಹೆಸರುಗಳ ಮೂಲಕ ಗುರುತಿಸಿಕೊಂಡರು ಅವರು. ಅಂಬರೀಷ್ ಅವರು ನಂತರ ರಾಜಕೀಯದಲ್ಲೂ ತೊಡಗಿಕೊಂಡರು. ಮೇ 2013ರಿಂದ ಜೂನ್ 2016ರವರೆಗೆ ಸಿದ್ದರಾಮಯ್ಯ ಸಂಪುಟದಲ್ಲಿ ವಸತಿ ಸಚಿವರಾಗಿ ಅಂಬರೀಷ್ ಕಾರ್ಯನಿರ್ವಹಿಸಿದ್ದರು. ಅಂಬರೀಷ್ಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು 63ನೇ ವಾರ್ಷಿಕ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ್ದು ವಿಶೇಷ. ನವೆಂಬರ್ 24ರಂದು ಅಂಬರೀಷ್ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು. ಅವರನ್ನು ಕಳೆದುಕೊಂಡಿದ್ದ ದಿನ ಇಡೀ ಕನ್ನಡ ಚಿತ್ರರಂಗ ದುಃಖದಲ್ಲಿ ಮುಳುಗಿತ್ತು. ಕಂಠೀರವ ಸ್ಟುಡಿಯೋದಲ್ಲಿ ಅವರ ಅಂತ್ಯಸಂಸ್ಕಾರ ಮಾಡಲಾಯಿತು. ಈಗ ಅಲ್ಲಿಯೇ ಸ್ಮಾರಕ ನಿರ್ಮಾಣ ಆಗಲಿದೆ.
ವಿಧಾನಸೌಧದಲ್ಲಿ ಕ್ಯಾಬಿನೆಟ್ ನಿರ್ಣಯಗಳ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ, ‘ನಟ, ರಾಜಕಾರಣಿ ದಿವಂಗತ ಅಂಬರೀಷ್ ಸ್ಮಾರಕ ನಿರ್ಮಾಣಕ್ಕೆ 12 ಕೋಟಿ ಅನುದಾನ ನೀಡಲಾಗುವುದು. ಕಂಠೀರವ ಸ್ವುಡಿಯೋದಲ್ಲೇ ಅಂಬರೀಷ್ ಸ್ಮಾರಕ ನಿರ್ಮಾಣ ಮಾಡಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.
ನಟ ಪುನೀತ್ ರಾಜ್ಕುಮಾರ್ ನಿಧನದ ಬಳಿಕ ಅವರ ಹೆಸರನ್ನು ಅಮರವಾಗಿಸಲು ಅನೇಕ ಕೆಲಸಗಳು ನಡೆಯುತ್ತಿವೆ. ಕೆಲವು ರಸ್ತೆ, ವೃತ್ತಕ್ಕೆ ಪುನೀತ್ ಹೆಸರನ್ನು ಇಡಲಾಗಿದೆ. ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಸಹ ಘೋಷಣೆ ಆಗಿದೆ. ಇದು ಅವರ ಅಭಿಮಾನಿಗಳಿಗೆ ಹೆಮ್ಮೆ ತಂದಿರುವ ವಿಚಾರ. ಅದೇ ರೀತಿ ‘ರೆಬೆಲ್ ಸ್ಟಾರ್’ ಅಂಬರೀಷ್ ಅವರಿಗೂ ಇಂಥ ಗೌರವಗಳು ಸಲ್ಲಬೇಕು ಎಂದು ಅಂಬಿ ಪ್ಯಾನ್ಸ್ ಬೇಡಿಕೆ ಇಟ್ಟಿದ್ದರು. ಆ ಬಗ್ಗೆ ಅವರು ಬಹಿರಂಗವಾಗಿ ಪತ್ರ ಬರೆದಿದ್ದರು. ‘ನಿಮ್ಮ ಭಾವನೆಗಳನ್ನು ನಾನು ಗೌರವಿಸುತ್ತೇನೆ, ಆದರೆ ಪ್ರಸ್ತುತ ಸಂದರ್ಭದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುವುದರಿಂದ ಅಂಬರೀಷ್ ಅವರ ಘನತೆ ಹಾಗೂ ಗೌರವಕ್ಕೆ ಧಕ್ಕೆಯಾಗುತ್ತದೆ. ಯಾವುದೇ ಪ್ರಶಸ್ತಿಯಾದರು ಕೇಳಿ ಪಡೆಯುವುದು ಅತಿಶಯೋಕ್ತಿಯಾಗಬಾರದು’ ಎಂದು ಕೇಳಿದ್ದರು ಅವರು.
ಇದನ್ನೂ ಓದಿ: ಅಂಬರೀಷ್ ಫ್ಯಾನ್ಸ್ ನಿರ್ಧಾರಕ್ಕೆ ಸುಮಲತಾ ಬೇಸರ; ಪುನೀತ್ ಮತ್ತು ಪ್ರಶಸ್ತಿ ಬಗ್ಗೆ ಹೇಳಿದ್ದೇನು?
ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದೆ ಅಂದರೆ ಅಂಬರೀಷ್ಗೂ ಸಿಕ್ಕಿದಂತೆ: ಸಂಸದೆ ಸುಮಲತಾ ಅಂಬರೀಷ್ ಹೇಳಿಕೆ