
ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸುವವರಿಗೆ ಏಕರೂಪ ಟಿಕೆಟ್ ದರ ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಏಕಪರದೆ ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ (Multiplex) ಟಿಕೆಟ್ ದರ 200 ರೂಪಾಯಿ ಮೀರದಂತೆ ಆದೇಶದಲ್ಲಿ ತಿಳಿಸಲಾಗಿದೆ. ಈ ಆದೇಶವನ್ನು ಚಿತ್ರರಂಗದವರು ಹಾಗೂ ಪ್ರೇಕ್ಷಕರು ಸ್ವಾಗತಿಸಿದ್ದಾರೆ. ಆದರೆ, ಈ ಆದೇಶಕ್ಕೆ ದೊಡ್ಡ ನಿರ್ಮಾಣ ಸಂಸ್ಥೆ ಹಾಗೂ ಸ್ಟಾರ್ ನಟರ ಆಕ್ಷೇಪ ಇದೆ ಎಂಬ ಮಾತಿದೆ. ಸರ್ಕಾರದ ಆದೇಶದ ಬಗ್ಗೆ ಪ್ರದರ್ಶಕರ ಸಂಘದ ಅಧ್ಯಕ್ಷರಾದ ಕೆ.ವಿ. ಚಂದ್ರಶೇಖರ್ ಮಾತನಾಡಿದ್ದಾರೆ.
‘ನಾವು ಸರ್ಕಾರದ ಆದೇಶವನ್ನ ಸ್ವಾಗತ ಮಾಡುತ್ತೇವೆ. ನಾವು ಇದಕ್ಕಾಗಿ ತುಂಬಾ ಹೋರಾಟ ಮಾಡಿದ್ದೆವು. ಇದರಿಂದ ನಶಿಸಿ ಹೋಗುತ್ತಿರುವ ಕನ್ನಡ ಚಿತ್ರರಂಗಕ್ಕೆ ಒಳ್ಳೆಯದಾಗುತ್ತದೆ. ಎಲ್ಲರೂ ಇದನ್ನು ಸ್ವಾಗತ ಮಾಡಬೇಕು. ಮಲ್ಟಿಪ್ಲೆಕ್ಸ್ ಹಾಗೂ ಕನ್ನಡ ಚಿತ್ರರಂಗದವರಿಂದ ಇದಕ್ಕೆ ಆಕ್ಷೇಪ ಇದ್ದರೆ ಇನ್ನು 15 ದಿನದಲ್ಲಿ ಹೇಳಬೇಕಾಗುತ್ತದೆ’ ಎಂದು ಅವರು ಹೇಳಿದ್ದಾರೆ.
‘ಅಣ್ಣಾವ್ರು ವಿಷ್ಣುವರ್ಧನ್ ಹಾಗೂ ಅಂಬರೀಷ್ ಅವರ ಸಿನಿಮಾಗಳು ಬರೋವಾಗ ಟಿಕೆಟ್ ಬೆಲೆ 50 ರೂಪಾಯಿ ಇತ್ತು. ಆಗಲೇ ಅವರು ದೊಡ್ಡ ಸ್ಟಾರ್ ಆದರೂ ಆಕ್ಷೇಪ ವ್ಯಕ್ತಪಡಿಸಿರಿಲಿಲ್ಲ’ ಎಂದಿದ್ದಾರೆ ಚಂದ್ರಶೇಖರ್.
ವೀರೇಶ್ ಥೀಯೇಟರ್ ಮಾಲೀಕ ಕುಶಾಲ್ ಗೌಡ ಕೂಡ ಈ ನಿರ್ಧಾರದ ಬಗ್ಗೆ ಮಾತನಾಡಿದ್ದಾರೆ. ‘ನಾನು ಈ ಆದೇಶವನ್ನ ಸ್ವಾಗತ ಮಾಡುತ್ತೇನೆ. ನಾವು ಕೆಜಿಎಫ್ ಚಿತ್ರಕ್ಕೆ ಮಾತ್ರ 200ಕ್ಕಿಂತ ಹೆಚ್ಚಿನ ಟಿಕೆಟ್ ಬೆಲೆ ನಿಗದಿ ಮಾಡಿದ್ದೆವು. ಈ ರೀತಿ ಮಾಡಿರುವುದರಿಂದ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗುತ್ತದೆ. ಈಗಾಗಲೇ ಮಲ್ಟಿಪ್ಲೆಕ್ಸ್ ಅವರು ಜನ ಬರುತ್ತಿಲ್ಲ ಎಂದು ದೂರುತ್ತಿದ್ದಾರೆ. ಜನ ಬಂದರೆ ಎಲ್ಲರಿಗೂ ಒಳ್ಳೆಯದು. ಕನ್ನಡ ಚಿತ್ರ ರಂಗಕ್ಕೆ ಇದರಿಂದ ಉಪಯೋಗ ಆಗುತ್ತದೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳಲ್ಲಿ ಟಿಕೆಟ್ ದರ 200 ರೂ. ಮೀರದಂತೆ ಸರ್ಕಾರ ಆದೇಶ
ಈಗಾಗಲೇ ತೆಲುಗು ರಾಜ್ಯಗಳಲ್ಲಿ ಈ ರೀತಿಯ ಆದೇಶ ಇದೆ. ದೊಡ್ಡ ಬಜೆಟ್ ಸಿನಿಮಾಗಳು ಬರುವಾಗ ಸರ್ಕಾರದಿಂದ ಅನುಮತಿ ಪಡೆದು ಕೆಲವು ದಿನಗಳ ಕಾಲ ಟಿಕೆಟ್ ಬೆಲೆ ಏರಿಸಿಕೊಳ್ಳಲು ಅವಕಾಶ ಇದೆ. ಇಲ್ಲಿಯೂ ಅದೇ ರೀತಿ ಮಾಡುತ್ತಲಾಗುತ್ತದೆಯೇ ಎಂಬುದು ಸದ್ಯದ ಪ್ರಶ್ನೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.