AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳಲ್ಲಿ ಟಿಕೆಟ್ ದರ 200 ರೂ. ಮೀರದಂತೆ ಸರ್ಕಾರ ಆದೇಶ

ರಾಜ್ಯದಲ್ಲಿ ದುಬಾರಿಯಾಗಿದ್ದ ಸಿನಿಮಾ ಟಿಕೆಟ್​ ಬೆಲೆಗೆ ರಾಜ್ಯ ಸರ್ಕಾರ ಕಡಿವಾಣ ಹಾಕಿದೆ. ಇನ್ಮುಂದೆ ಟಿಕೆಟ್ ಬೆಲೆ 200 ರೂಪಾಯಿ ಮೀರಬಾರದು ಎಂದು ಆದೇಶ ಹೊರಡಿಸಲಾಗಿದೆ. ಕನ್ನಡ ಸಿನಿಮಾಗಳು ಮಾತ್ರವಲ್ಲದೇ ಬೇರೆ ಭಾಷೆಯ ಸಿನಿಮಾಗಳಿಗೂ ಈ ನಿಯಮ ಅನ್ವಯ ಆಗಲಿದೆ. ಆ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..

ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳಲ್ಲಿ ಟಿಕೆಟ್ ದರ 200 ರೂ. ಮೀರದಂತೆ ಸರ್ಕಾರ ಆದೇಶ
Movie Theatre
Malatesh Jaggin
| Edited By: |

Updated on:Jul 15, 2025 | 9:22 PM

Share

ಸಿನಿಪ್ರಿಯರಿಗೆ ಇದು ಗುಡ್ ನ್ಯೂಸ್. ರಾಜ್ಯದ ಎಲ್ಲ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ (Multiplex) ಇನ್ಮುಂದೆ ಏಕರೂಪದ ದರ ಇರಬೇಕು ಎಂದು ಸರ್ಕಾರ ಆದೇಶಿಸಿದೆ. ಆ ಮೂಲಕ ರಾಜ್ಯಾದ್ಯಂತ ಒಂದೇ ದರ ನಿಗದಿ ಮಾಡಲಾಗಿದೆ. ಸಿನಿಮಾ ಪ್ರದರ್ಶನದ ಟಿಕೆಟ್ (Cinema Ticket Price) ಬೆಲೆ 200 ರೂ. ಮೀರಬಾರದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದು ಎಲ್ಲ ಭಾಷೆಯ ಸಿನಿಮಾಗಳಿಗೂ ಅನ್ವಯ ಆಗಲಿದೆ. ಈ ಬಗ್ಗೆ ರಾಜ್ಯ ಸರ್ಕಾರ (Karnataka Government) ಅಧಿಕೃತ ಆದೇಶ ನೀಡಿದೆ.

ಕನ್ನಡ ಚಿತ್ರರಂಗ ಕಷ್ಟದಲ್ಲಿದೆ. ನಿರೀಕ್ಷಿತ ಪ್ರಮಾಣದ ಪ್ರೇಕ್ಷಕರು ಬಾರದೇ ಇರುವುದರಿಂದ ಅನೇಕ ಚಿತ್ರಮಂದಿರಗಳನ್ನು ಮುಚ್ಚಲಾಗಿದೆ. ಕರ್ನಾಟಕದಲ್ಲಿಯೇ ಪರಭಾಷೆ ಸಿನಿಮಾಗಳು ಬಹುಕೋಟಿ ರೂಪಾಯಿ ಮಾಡಿಕೊಳ್ಳುತ್ತವೆ. ಪರಭಾಷೆ ಸಿನಿಮಾಗಳ ಟಿಕೆಟ್​ಗಳು ಸಾವಿರ ರೂಪಾಯಿ ಮೀರಿದ ಉದಾಹರಣೆ ಕೂಡ ಇದೆ. ಆದ್ದರಿಂದ ಟಿಕೆಟ್ ಬೆಲೆ ಕಡಿಮೆ ಆಗಬೇಕು ಎಂಬುದು ಬಹುದಿನಗಳ ಬೇಡಿಕೆ ಆಗಿತ್ತು.

ಏಕಪರದೆ ಚಿತ್ರಮಂದಿರಗಳಿಗೆ ಹೋಲಿಸಿದರೆ ಮಲ್ಟಿಪ್ಲೆಕ್ಸ್​ಗಳಲ್ಲಿ ಸಿನಿಮಾಗಳ ಟಿಕೆಟ್ ಬೆಲೆ ದುಬಾರಿ ಆಗಿರುತ್ತದೆ. ಆ ಕಾರಣದಿಂದಲೇ ಜನರು ಚಿತ್ರಮಂದಿರಗಳಿಂದ ದೂರ ಉಳಿದುಕೊಂಡಿದ್ದಾರೆ ಎಂಬುದು ಅನೇಕರ ಅಭಿಪ್ರಾಯ ಆಗಿತ್ತು. ಹಾಗಾಗಿ ಸಿನಿಮಾಗಳ ಟಿಕೆಟ್ ಬೆಲೆ ತಗ್ಗಿಸಬೇಕು ಎಂದು ಹೇಳಲಾಗುತ್ತಿತ್ತು. ಅದಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿದೆ.

2025-26ನೇ ಸಾಲಿನ ರಾಜ್ಯ ಬಜೆಟ್​ನಲ್ಲಿ ಸರ್ಕಾರ ಈ ಬಗ್ಗೆ ಪ್ರಕಟಿಸಿತ್ತು. ಮಲ್ಟಿಪ್ಲೆಕ್ಸ್​ಗಳಲ್ಲಿ ಎಗ್ಗಿಲ್ಲದೇ ಏರಿಕೆ ಆಗುತ್ತಿದ್ದ ಟಿಕೆಟ್ ಬೆಲೆಗೆ ಕಡಿವಾಳ ಹಾಕಲು ಸರ್ಕಾರ ಮುಂದಾಗಿತ್ತು. ಆ ಸುದ್ದಿ ಕೇಳಿ ಸಿನಿಮಾ ಪ್ರಿಯರಿಗೆ ಖುಷಿ ಆಗಿತ್ತು. ಈಗ ಅಧಿಕೃತವಾಗಿ ಆದೇಶ ಹೊರಡಿಸಿದ್ದು, ಇನ್ಮುಂದೆ ಪ್ರೇಕ್ಷಕರಿಗೆ ಟಿಕೆಟ್ ಬೆಲೆಯ ಹೊರೆ ಕಡಿಮೆ ಆಗಲಿದೆ. ಇದರಿಂದ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ.

ಇದನ್ನೂ ಓದಿ: ಜನರು ಹೊರಗಿನ ಆಹಾರ ತರದಂತೆ ನಿರ್ಬಂಧಿಸುವ ಹಕ್ಕು ಚಿತ್ರಮಂದಿರದ ಮಾಲೀಕರಿಗೆ ಇದೆ: ಸುಪ್ರೀಂ ಕೋರ್ಟ್​

ಕೊವಿಡ್ ಬಳಿಕ ಒಟಿಟಿ ಪ್ರಭಾವ ಹೆಚ್ಚಾಯಿತು. ಮನೆಯಲ್ಲೇ ಹೊಸ ಸಿನಿಮಾಗಳನ್ನು ವೀಕ್ಷಿಸಲು ಜನರು ಆರಂಭಿಸಿದರು. ಒಟಿಟಿ ಬಿಸ್ನೆಸ್ ಕೂಡ ಹೆಚ್ಚಿತು. ಚಿತ್ರಮಂದಿರದಲ್ಲಿ ಬಿಡುಗಡೆ ಆದ ಕೆಲವೇ ವಾರಗಳಲ್ಲಿ ಹೊಸ ಸಿನಿಮಾಗಳು ಒಟಿಟಿಗೆ ಬರಲು ಆರಂಭಿಸಿದವು. ಇದು ಕೂಡ ಚಿತ್ರಮಂದಿರಗಳ ವ್ಯವಹಾರಕ್ಕೆ ಪೆಟ್ಟು ನೀಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:54 pm, Tue, 15 July 25