
ಕನ್ನಡದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಧ್ರುವ ಸರ್ಜಾ (Dhruva Sarja) ನಟನೆಯ ‘ಕೆಡಿ’ ಸಿನಿಮಾದ ಕನ್ನಡ ಟೀಸರ್ ಇಂದು (ಜುಲೈ 12) ಬೆಂಗಳೂರಿನಲ್ಲಿ ಬಿಡುಗಡೆ ಆಯ್ತು. ಪ್ರೇಮ್ ನಿರ್ದೇಶನ ಮಾಡಿರುವ ‘ಕೆಡಿ’ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಎರಡು ದಿನಗಳ ಹಿಂದಷ್ಟೆ ಇದೇ ಸಿನಿಮಾದ ಹಿಂದಿ ಟೀಸರ್ ಮುಂಬೈನಲ್ಲಿ ಬಿಡುಗಡೆ ಮಾಡಲಾಯ್ತು. ಟೀಸರ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯ್ತು. ಇಂದು ಕನ್ನಡ ಟೀಸರ್ ಬಿಡುಗಡೆ ಮಾಡಲಾಗಿದೆ. ಬಹುತಾರಾಗಣದ ಸಿನಿಮಾ ಇದಾಗಿದ್ದು, ಇಂದು ನಡೆದ ಕಾರ್ಯಕ್ರಮದಲ್ಲಿ ಹಲವು ತಾರೆಯರು ವೇದಿಕೆ ಮೇಲೆ ಒಟ್ಟಿಗೆ ಕಾಣಿಸಿಕೊಂಡರು.
‘ಕೆಡಿ’ ಸಿನಿಮಾನಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್, ರವಿಚಂದ್ರನ್, ಸಂಜಯ್ ದತ್ ಇನ್ನೂ ಕೆಲವು ಪ್ರತಿಭಾವಂತ ನಟರು ನಟಿಸಿದ್ದಾರೆ. ಇಂದು ನಡೆದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಎಲ್ಲ ತಾರೆಯರು ಒಟ್ಟಿಗೆ ವೇದಿಕೆ ಮೇಲೆ ಕಾಣಿಸಿಕೊಂಡರು. ಸಿನಿಮಾದ ಬಗ್ಗೆ ಮಾತನಾಡುವ ಜೊತೆಗೆ ಹಳೆಯ ದಿನಗಳನ್ನು ಸಹ ನೆನಪು ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ್ ಅರವಿಂದ್, ‘ನಾನು ದಶಕಗಳಿಂದ ಚಿತ್ರರಂಗದಲ್ಲಿದ್ದೇನೆ, ಆದರೆ ಎಂದೂ ಶೂಟಿಂಗ್ ಬ್ಲಡ್ ಬಳಸಿಲ್ಲ. ಇದ್ದರೂ ನನ್ನ ಮೇಲೆ ಬಳಸುತ್ತಿರಲಿಲ್ಲ. ಆದರೆ ಇಷ್ಟು ವರ್ಷದಲ್ಲಿ ಬಳಸದೇ ಇರದ ಅಷ್ಟೂ ಶೂಟಿಂಗ್ ಬ್ಲಡ್ ಅನ್ನು ಇದೊಂದೇ ಸಿನಿಮಾನಲ್ಲಿ ನನ್ನ ಮೇಲೆ ಬಳಸಿದ್ದಾರೆ’ ಎಂದು ಚಟಾಕಿ ಹಾರಿಸಿದರು ನಟ ರಮೇಶ್ ಅರವಿಂದ್.
ಇದನ್ನೂ ಓದಿ:‘ಕೆಡಿ’ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾದ ಸತ್ಯವತಿ ಶಿಲ್ಪಾ ಶೆಟ್ಟಿ
ಇನ್ನು ನಟ ಸಂಜಯ್ ದತ್ ಮಾತನಾಡಿ, ‘ನನಗೆ 398 ಮಂದಿ ಗರ್ಲ್ ಫ್ರೆಂಡ್ಸ್ ಇದ್ದಾರೆಂದು ತಮಾಷೆ ಮಾಡುತ್ತಾರೆ. ಆದರೆ ರವಿಚಂದ್ರನ್ ಅವರಿಗೆ ಅದಕ್ಕಿಂತಲೂ ಹೆಚ್ಚು ಗರ್ಲ್ಫ್ರೆಂಡ್ಸ್ ಇದ್ದಾರಂತೆ. ಬ್ಯೂಟಿಫುಲ್ ಹೀರೋಯಿನ್ಗಳನ್ನು ತಂದಿದ್ದೇ ಅವರಂತೆ’ ಎಂದು ಹಾಸ್ಯ ಮಾಡಿದರು. ನಟ ಧ್ರುವ ಸರ್ಜಾ ಬಗ್ಗೆ ಮಾತನಾಡಿ, ‘ನಾನು ನಾಯಕನಾಗಿ ನಟಿಸುವಾಗ ನನ್ನ ಹಿರಿಯರಿಗೆ ಹೇಗೆ ಗೌರವ ಕೊಡುತ್ತಿದ್ದೆನೊ ಹಾಗೆಯೇ ಧ್ರುವ ನನಗೆ ಗೌರವ ಕೊಟ್ಟರು’ ಎಂದರು.
ಇನ್ನು ನಟ ರವಿಚಂದ್ರನ್ ಮಾತುಗಳಂತೂ ಸಭೆಯಲ್ಲಿ ನಗುವಿನ ಅಲೆಯನ್ನೇ ಎಬ್ಬಿಸಿದರು. ನಟಿ ಶಿಲ್ಪಾ ಶೆಟ್ಟಿ ಜೊತೆಗೆ ದಶಕಗಳ ಬಳಿಕ ವೇದಿಕೆ ಹಂಚಿಕೊಂಡ ನಟ ರವಿಚಂದ್ರನ್, ಶಿಲ್ಪಾ ಶೆಟ್ಟಿ ಜೊತೆಗೆ ನಟಿಸಿದ ‘ಪ್ರೀತ್ಸೋದ್ ತಪ್ಪಾ’ ಸಿನಿಮಾ ಬಗ್ಗೆ ಮಾತನಾಡಿದರು. ‘ಪುಣ್ಯಕ್ಕೆ ಇನ್ನೂ ನನ್ನ ವಯಸ್ಸು, ಬೆಳೆದ ಹೊಟ್ಟೆ ಬಗ್ಗೆ ಮಾತನಾಡಿಲ್ಲ’ ಎಂದು ತಮಾಷೆ ಮಾಡಿದರು. ಅದಕ್ಕೆ ಶಿಲ್ಪಾ ಸಹ, ‘ಆಗ ಒಟ್ಟಿಗೆ ನಟಿಸುವಾಗ ಹೊಗಳುತ್ತಿರಲಿಲ್ಲ, ಈಗ ಹೊಗಳುತ್ತಿದ್ದಾರೆ’ ಎಂದು ತಮಾಷೆ ಮಾಡಿದರು. ಇಬ್ಬರೂ ಸಹ ‘ಪ್ರೀತ್ಸೋದ್ ತಪ್ಪಾ’ ಹಾಡಿಗೆ ಡ್ಯಾನ್ಸ್ ಮಾಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ