ಕನ್ನಡದಲ್ಲೇ ಡೈಲಾಗ್ ಹೊಡೆದು ‘ಕೆಡಿ’ ಸಿನಿಮಾ ಬಗ್ಗೆ ಮಾತಾಡಿದ ಸಂಜಯ್ ದತ್
ಬಹಳ ಅದ್ದೂರಿಯಾಗಿ ‘ಕೆಡಿ: ದಿ ಡೆವಿಲ್’ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಈ ವೇಳೆ ಚಿತ್ರತಂಡದ ಕಲಾವಿದರೆಲ್ಲರೂ ಭಾಗಿಯಾಗಿದ್ದರು. ಮುಂಬೈನಿಂದ ಬಂದ ನಟ ಸಂಜಯ್ ದತ್ ಅವರು ಕನ್ನಡದಲ್ಲಿ ಡೈಲಾಗ್ ಹೇಳಿ ಗಮನ ಸೆಳೆದರು. ‘ಕೆಡಿ’ ತಂಡದ ಬಗ್ಗೆ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದರು.

ಬಹುತಾರಾಗಣದ ಕಾರಣದಿಂದ ‘ಕೆಡಿ: ದಿ ಡೆವಿಲ್’ (KD The Devil) ಸಿನಿಮಾ ಗಮನ ಸೆಳೆಯುತ್ತಿದೆ. ಧ್ರುವ ಸರ್ಜಾ ಮುಖ್ಯ ಭೂಮಿಕೆ ನಿಭಾಯಿಸಿರುವ ಈ ಚಿತ್ರದಲ್ಲಿ ಹಲವು ಕಲಾವಿದರು ನಟಿಸಿದ್ದಾರೆ. ಬಾಲಿವುಡ್ ನಟ ಸಂಜಯ್ ದತ್, ನಟಿ ಶಿಲ್ಪಾ ಶೆಟ್ಟಿ ಅವರು ಪ್ರಮುಖ ಆಕರ್ಷಣೆ ಆಗಿದ್ದಾರೆ. ರವಿಚಂದ್ರನ್, ರಮೇಶ್ ಅರವಿಂದ್ ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಲ್ಲರೂ ಭಾಗಿಯಾಗಿದ್ದರು. ನಟ ಸಂಜಯ್ ದತ್ (Sanjay Dutt) ಅವರು ಈ ಸಿನಿಮಾ ತಂಡದ ಬಗ್ಗೆ ಮನಸಾರೆ ಮಾತನಾಡಿದರು. ಕೊನೆಯಲ್ಲಿ ಕನ್ನಡದಲ್ಲೇ ಡೈಲಾಗ್ ಹೇಳುವ ಮೂಲಕ ಚಪ್ಪಾಳೆ ಗಿಟ್ಟಿಸಿದರು.
‘ಕೆಡಿ: ದಿ ಡೆವಿಲ್’ ಸಿನಿಮಾಗೆ ಜೋಗಿ ಪ್ರೇಮ್ ಅವರು ನಿರ್ದೇಶನ ಮಾಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ವೆಂಕಟ್ ಕೆ. ನಾರಾಯಣ್ ಅವರು ಬಂಡವಾಳ ಹೂಡಿದ್ದಾರೆ. ಕನ್ನಡ, ತೆಲುಗು, ಮಲಯಾಳಂ, ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ ಟೀಸರ್ ಬಿಡುಗಡೆ ಆಗಿದೆ. ಈ ಟೀಸರ್ನಲ್ಲಿ ಸಂಜಯ್ ದತ್ ಅವರ ಡೈಲಾಗ್ ಹೈಲೈಟ್ ಆಗಿದೆ.
‘ಈ ಸಿನಿಮಾದ ಪ್ರತಿ ಕ್ಷಣ ನನಗೆ ಇಷ್ಟ. ನನ್ನದು ಒಂದು ಡೇಂಜಸರ್ ಪಾತ್ರ. ಈ ಸಿನಿಮಾದಲ್ಲಿ ನಾನು ರಮೇಶ್, ರವಿಚಂದ್ರನ್, ರೀಷ್ಮಾ ನಾಣಯ್ಯ, ಧ್ರುವ ಸರ್ಜಾ ಮುಂತಾದವರ ಜೊತೆ ಕೆಲಸ ಮಾಡಲು ಅದೃಷ್ಟ ಮಾಡಿದ್ದೆ. ಧ್ರುವ ಸರ್ಜಾ ನನ್ನ ತಮ್ಮ ಇದ್ದಂತೆ. ಅವರ ಡೆಡಿಕೇಷನ್ ನಾನು ನೋಡುತ್ತಿದ್ದೇನೆ. ಮುಂದೆ ಅವರು ಇಡೀ ದೇಶದಲ್ಲಿ ದೊಡ್ಡ ಸ್ಟಾರ್ ಆಗುತ್ತಾರೆ’ ಎಂದು ಸಂಜಯ್ ದತ್ ಹೇಳಿದರು.
‘ನಿರ್ದೇಶಕ ಪ್ರೇಮ್ ಅವರಿಗೆ ನಾನು ಧನ್ಯವಾದ ಹೇಳಬೇಕು. ಅವರು ನನಗೆ ಅವಕಾಶ ನೀಡಿದ್ದಾರೆ. ನಿರ್ಮಾಪಕ ವೆಂಕಟ್ ಅವರಿಗೂ ನಾನು ಧನ್ಯವಾದ ಹೇಳಬೇಕು. ಯಾಕೆಂದರೆ, ಹಣಕ್ಕಿಂತಲೂ ಪ್ಯಾಷನ್ ಹೆಚ್ಚು ಬೇಕಿರುವ ಸಿನಿಮಾ ಕೆಡಿ. ಅಂತಹ ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಪ್ಯಾಷನ್ ಇರುವುದು ವೆಂಕಟ್ ಅವರಿಗೆ. ಭಾರತದಲ್ಲಿ ಅವರಂತಹ ನಿರ್ಮಾಪಕರು ಇರಬೇಕು’ ಎಂದರು ಸಂಜಯ್ ದತ್.
ಇದನ್ನೂ ಓದಿ: ‘ಕೆಡಿ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಬಾಲಿವುಡ್ ಬಗ್ಗೆ ಸಂಜಯ್ ದತ್ ಬೇಸರ
ಕನ್ನಡ ಸಿನಿಮಾದಲ್ಲಿ ನಟಿಸಿದ್ದಕ್ಕೆ ಸಂಜಯ್ ದತ್ ಅವರಿಗೆ ಖುಷಿ ಇದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಅವರು ಕನ್ನಡದಲ್ಲಿ ಡೈಲಾಗ್ ಹೇಳಿದರು. ‘ಬರ್ಕಳಿ ಸಾರ್. ತಲೆ ಸಿಕ್ಕಿದೆ. ಬಾಡಿ ಸಿಕ್ಕಿಲ್ಲ’ ಎಂದು ಡೈಲಾಗ್ ಹೊಡೆದರು. ಅವರಿಗೆ ನಿರ್ದೇಶಕ ಪ್ರೇಮ್ ಸಹಾಯ ಮಾಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








