ಸಲ್ಮಾನ್ ಖಾನ್, ಸಂಜಯ್ ದತ್ ಹೊಸ ಸಿನಿಮಾಗೆ ‘ಗಂಗಾ ರಾಮ್’ ಶೀರ್ಷಿಕೆ?
ಸಂಜಯ್ ದತ್ ಮತ್ತು ಸಲ್ಮಾನ್ ಖಾನ್ ಅವರು ಹೊಸ ಸಿನಿಮಾದಲ್ಲಿ ಒಟ್ಟಾಗಿ ನಟಿಸಲಿದ್ದಾರೆ. ಆ ಚಿತ್ರದ ಶೀರ್ಷಿಕೆ ಬಗ್ಗೆಯೂ ಸುದ್ದಿ ಬಹಿರಂಗ ಆಗಿದೆ. ಹೊಸ ಡೈರೆಕ್ಟರ್ ಕ್ರಿಶ್ ಆಹಿರ್ ಅವರು ನಿರ್ದೇಶನ ಮಾಡಲಿದ್ದಾರೆ. ಸಲ್ಮಾನ್ ಖಾನ್ ಅವರ ನಿರ್ಮಾಣ ಸಂಸ್ಥೆಯೇ ಬಂಡವಾಳ ಹೂಡಲಿದೆ.

ನಟ ಸಲ್ಮಾನ್ ಖಾನ್ ಅವರ ‘ಸಿಕಂದರ್’ (Sikandar) ಸಿನಿಮಾಗೆ ನಿರೀಕ್ಷಿತ ಪ್ರಮಾಣದ ಕಲೆಕ್ಷನ್ ಆಗುತ್ತಿಲ್ಲ. ಹಾಗಾಗಿ ಅವರ ಅಭಿಮಾನಿಗಳಿಗೆ ಬೇಸರ ಆಗಿದೆ. ಹಾಗಂತ ಬೇಸರ ಮಾಡಿಕೊಂಡೇ ಕೂರಲು ಸಾಧ್ಯವಿಲ್ಲ. ಮುಂದಿನ ಸಿನಿಮಾ ಮೇಲೆ ಗಮನ ಹರಿಸಲೇಬೇಕು. ಸಲ್ಮಾನ್ ಖಾನ್ (Salman Khan) ಅವರ ಹೊಸ ಸಿನಿಮಾ ಬಗ್ಗೆ ಈಗ ಒಂದು ಅಪ್ಡೇಟ್ ಸಿಕ್ಕಿದೆ. ಸಂಜಯ್ ದತ್ (Sanjay Dutt) ಜೊತೆ ಸಲ್ಮಾನ್ ಖಾನ್ ಅವರು ಸಿನಿಮಾ ಮಾಡುವುದು ಖಚಿತ ಆಗಿದೆ. ಆ ಸಿನಿಮಾದ ಟೈಟಲ್ ಬಗ್ಗೆಯೂ ಈಗ ಮಾಹಿತಿ ಕೇಳಿಬಂದಿದೆ. ‘ಗಂಗಾ ರಾಮ್’ ಎಂದು ಈ ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.
‘ಚಲ್ ಮೇರೆ ಭಾಯ್’, ‘ಸಾಜನ್’ ಮುಂತಾದ ಸಿನಿಮಾಗಳಲ್ಲಿ ಸಂಜಯ್ ದತ್ ಮತ್ತು ಸಲ್ಮಾನ್ ಖಾನ್ ಅವರು ಜೊತೆಯಾಗಿ ಅಭಿನಯಿಸಿದ್ದರು. ಹಲವು ವರ್ಷಗಳ ಬಳಿಕ ಅವರು ಮತ್ತೆ ಜೊತೆಯಾಗಿ ನಟಿಸುತ್ತಾರೆ ಎಂಬುದನ್ನು ತಿಳಿದು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇದು ಒಂದು ಆ್ಯಕ್ಷನ್ ಸಿನಿಮಾ ಆಗಿರಲಿದ್ದು, ಹೊಸ ನಿರ್ದೇಶಕ ಕ್ರಿಶ್ ಆಹಿರ್ ಅವರು ಆ್ಯಕ್ಷನ್-ಕಟ್ ಹೇಳಲಿದ್ದಾರೆ.
ಸಲ್ಮಾನ್ ಖಾನ್ ಅವರ ನಿರ್ಮಾಣ ಸಂಸ್ಥೆಯಿಂದಲೇ ‘ಗಂಗಾ ರಾಮ್’ ಸಿನಿಮಾ ನಿರ್ಮಾಣ ಆಗಲಿದೆ. ಈ ಕಥೆಗೆ ದೊಡ್ಡ ಬಜೆಟ್ ಬೇಕಿರುವುದರಿಂದ ಇನ್ನೊಂದು ನಿರ್ಮಾಣ ಸಂಸ್ಥೆಯ ಜೊತೆಗೆ ಕೈ ಜೋಡಿಸಲು ಸಲ್ಮಾನ್ ಖಾನ್ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಆದರೆ ‘ಗಂಗಾ ರಾಮ್’ ಎಂಬ ಟೈಟಲ್ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬೀಳುವುದು ಬಾಕಿ ಇದೆ.
ನಿರ್ದೇಶಕ ಕ್ರಿಶ್ ಆಹಿರ್ ಅವರು ಕಳೆದ 5 ವರ್ಷಗಳಿಂದ ಸಲ್ಮಾನ್ ಖಾನ್ ಅವರ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ಕಾಂಬಿನೇಷನ್ನ ಸಿನಿಮಾಗೆ ಅವರು ಭರ್ಜರಿಯಾದ ಕಥೆ ಸಿದ್ಧಪಡಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಇಬ್ಬರು ಹೀರೋಗಳ ಪಾತ್ರ ಆಲ್ಫಾ ಮೇಲ್ ರೀತಿ ಇರಲಿದೆ ಮಾಹಿತಿ ಕೇಳಿಬಂದಿದೆ. ಜೂನ್ ಅಥವಾ ಜುಲೈನಲ್ಲಿ ಈ ಸಿನಿಮಾದ ಶೂಟಿಂಗ್ ಶುರುವಾಗಲಿದೆ.
ಇದನ್ನೂ ಓದಿ: ಪಾತಾಳ ಕಾಣುತ್ತಿದೆ ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಕಲೆಕ್ಷನ್; ಮೂರು ದಿನದ ಗಳಿಕೆ ಇಷ್ಟೇನಾ?
ಇತ್ತೀಚೆಗೆ ಸಂಜಯ್ ದತ್ ಮತ್ತು ಸಲ್ಮಾನ್ ಖಾನ್ ಅವರ ಅಭಿಮಾನಿಗಳಿಗೆ ಇನ್ನೊಂದು ಭರ್ಜರಿ ಸುದ್ದಿ ಸಿಕ್ಕಿತ್ತು. ಹಾಲಿವುಡ್ನ ಸಿನಿಮಾವೊಂದರಲ್ಲಿ ಅವರಿಬ್ಬರು ಅತಿಥಿ ಪಾತ್ರ ಮಾಡಿದ್ದಾರೆ. ಕೆಲವೇ ದಿನಗಳ ಹಿಂದೆ ದುಬೈನಲ್ಲಿ ಆ ಚಿತ್ರದ ಶೂಟಿಂಗ್ ನಡೆದಿತ್ತು. ಆ ಬಗ್ಗೆ ಕೂಡ ಅಪ್ಡೇಟ್ ತಿಳಿಯಲು ಅಭಿಮಾನಿಗಳು ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.