ಕಾಣಿಸುತ್ತಿಲ್ಲ ‘ಕೆಡಿ’ ಸಿನಿಮಾ ಟ್ರೇಲರ್; ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಗೆ ಇನ್ನೊಂದು ವಿಘ್ನ

ಬಹಳ ಅದ್ದೂರಿಯಾಗಿ ‘ಕೆಡಿ’ ಸಿನಿಮಾದ ಟ್ರೇಲರ್ ಲಾಂಚ್ ಮಾಡಲಾಗಿತ್ತು. ಆದರೆ ಎರಡೇ ದಿನದಲ್ಲಿ ಆ ಟ್ರೇಲರ್ ಕಾಣಿಸುತ್ತಿಲ್ಲ! ಯೂಟ್ಯೂಬ್​​ನಿಂದ ಇದನ್ನು ತೆಗೆದುಹಾಕಲಾಗಿದೆ. ಈ ಬಗ್ಗೆ ನಿರ್ಮಾಣ ಸಂಸ್ಥೆ ‘ಕೆವಿಎನ್ ಪ್ರೊಡಕ್ಷನ್ಸ್’ ಪ್ರತಿಕ್ರಿಯೆ ನೀಡಿದೆ. ಪ್ರೇಮ್ ನಿರ್ದೇಶನದ ಈ ಸಿನಿಮಾಗೆ ಹಲವು ವಿಘ್ನಗಳು ಎದುರಾಗುತ್ತಿವೆ.

ಕಾಣಿಸುತ್ತಿಲ್ಲ ‘ಕೆಡಿ’ ಸಿನಿಮಾ ಟ್ರೇಲರ್; ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಗೆ ಇನ್ನೊಂದು ವಿಘ್ನ
Dhruva Sarja

Updated on: Apr 24, 2026 | 8:56 PM

ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾ (KD Movie) ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಗಿತ್ತು. ಬೆಂಗಳೂರಿನ ಸ್ಟಾರ್ ಹೋಟೆಲ್​​ನಲ್ಲಿ ಚಿತ್ರತಂಡದ ಕಲಾವಿದರು ಮತ್ತು ತಂತ್ರಜ್ಞರ ಸಮ್ಮುಖದಲ್ಲಿ ಟ್ರೇಲರ್ (KD Trailer) ಅನಾವರಣ ಮಾಡಲಾಗಿತ್ತು. ಟ್ರೇಲರ್ ನೋಡಿದ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದರು. ಆದರೆ ಈಗ ಒಂದು ಅನಿರೀಕ್ಷಿತ ಸಂಗತಿ ಎದುರಾಗಿದೆ. ಎರಡು ದಿನದ ಹಿಂದೆ ಬಿಡುಗಡೆ ಆಗಿದ್ದ ‘ಕೆಡಿ’ ಚಿತ್ರದ ಟ್ರೇಲರ್ ಈಗ ಕಾಣಿಸುತ್ತಿಲ್ಲ! ಆ ಮೂಲಕ ‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ಸಂಸ್ಥೆಗೆ ಮತ್ತೊಂದು ವಿಘ್ನ ಎದುರಾದಂತೆ ಆಗಿದೆ.

ಕಾಕತಾಳೀಯವೂ ಎಂಬಂತೆ ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣ ಮಾಡಿದ ಸಿನಿಮಾಗಳಿಗೆ ಒಂದಲ್ಲಾ ಒಂದು ಸಮಸ್ಯೆ ಉಂಟಾಗುತ್ತಿದೆ. ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಅನಿರ್ಧಿಷ್ಟಾವಧಿಗೆ ಮುಂದೂಡಿಕೆ ಆಯಿತು. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆಯನ್ನು ಕೂಡ ಯುದ್ಧದ ಕಾರಣಕ್ಕೆ ಮುಂದೂಡುವುದು ಅನಿವಾರ್ಯ ಆಯಿತು. ಈಗ ‘ಕೆಡಿ’ ಸಿನಿಮಾಗೂ ಸಮಸ್ಯೆ ಆಗಿದೆ.

ಈ ಮೊದಲು ಬಿಡುಗಡೆ ಆಗಿದ್ದ ‘ಸರ್ಸೆ ನಿನ್ನ ಸೆರಗ..’ ಹಾಡಿಗೆ ವಿರೋಧ ವ್ಯಕ್ತವಾದ ಕಾರಣಕ್ಕೆ ಡಿಲೀಟ್ ಮಾಡಬೇಕಾಯಿತು. ಕೆಲವೇ ದಿನಗಳ ಹಿಂದೆ ‘ಕೆಡಿ’ ಸಿನಿಮಾಗೆ ಸೆನ್ಸಾರ್ ಸಮಸ್ಯೆ ಆಗುತ್ತಿದೆ ಎಂದು ನಿರ್ದೇಶಕ ಪ್ರೇಮ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಚಿತ್ರತಂಡದವರು ಟ್ರೇಲರ್ ಬಿಡುಗಡೆ ಮಾಡಿದರು. ಆದರೆ ಈಗ ಆ ಟ್ರೇಲರ್ ಅನ್ನು ಪ್ರೈವೇಟ್ ಮಾಡಬೇಕಾದ ಪರಿಸ್ಥಿತಿ ಬಂದಿದೆ.

ಈ ಬಗ್ಗೆ ನಿರ್ಮಾಣ ಸಂಸ್ಥೆಯೇ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ‘ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ‘ಕೆಡಿ: ದಿ ಡೆವಿಲ್’ ಟ್ರೇಲರ್‌ನಲ್ಲಿ ಪ್ರಮಾಣೀಕರಣ ಪ್ರಕ್ರಿಯೆಯ ಸಮಯದಲ್ಲಿ ಅಚಾತುರ್ಯದಿಂದ ಕೆಲವು ಅಪ್ರಮಾಣಿತ ಅಂಶಗಳು ಸೇರ್ಪಡೆಯಾಗಿದ್ದವು. ಆದ್ದರಿಂದ ನಾವು ಈ ಟ್ರೇಲರ್ ತೆಗೆದುಹಾಕಿದ್ದೇವೆ ಮತ್ತು ಪ್ರಮಾಣೀಕರಣದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪರಿಷ್ಕರಿಸಿದ ಆವೃತ್ತಿಯನ್ನು ಶೀಘ್ರದಲ್ಲೇ ಅಪ್‌ಲೋಡ್ ಮಾಡಲಿದ್ದೇವೆ. ಈ ಅಚಾತುರ್ಯಕ್ಕೆ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ ಮತ್ತು ಎಲ್ಲಾ ಪ್ರಮಾಣೀಕರಣ ನಿಯಮಗಳನ್ನು ಪಾಲಿಸಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ’ ಎಂದು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಇದನ್ನೂ ಓದಿ: ‘ಕೆಡಿ’ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್ ಅರವಿಂದ್

ಏಪ್ರಿಲ್ 30ರಂದು ‘ಕೆಡಿ’ ಸಿನಿಮಾ ಬಿಡುಗಡೆ ಆಗಬೇಕಿದೆ. ಅದಕ್ಕಾಗಿ ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ ಟ್ರೇಲರ್ ತೆಗೆದು ಹಾಕಿರುವುದರಿಂದ ಅಭಿಮಾನಿಗಳಿಗೆ ರಿಲೀಸ್ ದಿನಾಂಕದ ಬಗ್ಗೆ ಅನುಮಾನ ಮೂಡುವಂತಾಗಿದೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆ ರೀಷ್ಮಾ ನಾಣಯ್ಯ, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ಪಿ. ರವಿಶಂಕರ್ ಮುಂತಾದವರು ಅಭಿನಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us