ಸಿನಿಮಾ ನಿರ್ಮಾಣದಲ್ಲಿ ‘ಹೊಂಬಾಳೆ ಫಿಲ್ಮ್ಸ್’ (Hombale Films) ಸಂಸ್ಥೆ ಹಲವು ಸಾಧನೆಗಳನ್ನು ಮಾಡುತ್ತಿದೆ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದಿಂದ ಜಗತ್ತಿನಾದ್ಯಂತ ಖ್ಯಾತಿ ಪಡೆದಿರುವ ಈ ಸಂಸ್ಥೆಯಿಂದ ಈಗ ಹೊಸ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ರಾಘವೇಂದ್ರ ರಾಜ್ಕುಮಾರ್ ಅವರ ಎರಡನೇ ಪುತ್ರನಾದ ಯುವ ರಾಜ್ಕುಮಾರ್ (Yuva Rajkumar) ಮತ್ತು ನಿರ್ದೇಶಕ ಸಂತೋಷ್ ಆನಂದ್ರಾಮ್ ಜೊತೆ ಸಿನಿಮಾ ಮಾಡಲು ನಿರ್ಮಾಪಕ ವಿಜಯ್ ಕಿರಗಂದೂರು ಸಜ್ಜಾಗಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಳ್ಳಲಾಗಿದೆ. ‘ಬೆಳ್ಳಿ ಪರದೆಗೆ ಹೊಸದೊಂದು ಪರ್ವ’ ಎಂಬ ಸ್ಲೋಗನ್ ಮೂಲಕ ದೊಡ್ಡ ಸುದ್ದಿ ನೀಡುವುದಾಗಿ ಮಂಗಳವಾರವೇ (ಏ.26) ಸೂಚನೆ ನೀಡಲಾಗಿತ್ತು. ಅದೇನು ಎಂಬ ಕೌತುಕ ಅಭಿಮಾನಿಗಳಲ್ಲಿ ನಿರ್ಮಾಣ ಆಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ನಿರ್ಮಾಪಕ ವಿಜಯ್ ಕಿರಗಂದೂರು, ನಟ ಯುವ ರಾಜ್ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ (Santhosh Ananddram) ಕಾಂಬಿನೇಷನ್ ಬಗ್ಗೆ ಕೆಲವು ದಿನಗಳ ಹಿಂದೆಯೇ ಗುಸುಗುಸು ಕೇಳಿಬಂದಿತ್ತು. ಅದೀಗ ಅಧಿಕೃತ ಆಗಿದೆ.
ಪುನೀತ್ ರಾಜ್ಕುಮಾರ್ ಮತ್ತು ಸಂತೋಷ್ ಆನಂದ್ ರಾಮ್ ಅವರು ಕಾಂಬಿನೇಷನ್ನಲ್ಲಿ ‘ರಾಜಕುಮಾರ’ ಮತ್ತು ‘ಯುವರತ್ನ’ ಸಿನಿಮಾ ಮೂಡಿಬಂದಿದ್ದವು. ಆ ಎರಡೂ ಸಿನಿಮಾಗಳಿಗೆ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ಬಂಡವಾಳ ಹೂಡಿತ್ತು. ಅದೇ ಕಾಂಬಿನೇಷನ್ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರಬೇಕಿತ್ತು. ಅದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಆಗಿರಲಿದೆ ಎಂಬ ಮಾಹಿತಿ ಕೂಡ ಹೊರಬಿದ್ದಿತ್ತು. ಇನ್ನೇನು ಆ ಚಿತ್ರ ಸೆಟ್ಟೇರಬೇಕು ಅನ್ನೋದಕ್ಕೂ ಮುನ್ನವೇ ಪುನೀತ್ ರಾಜ್ಕುಮಾರ್ ನಿಧನರಾದರು. ಈಗ ಅದೇ ಕಥೆಗೆ ಯುವ ರಾಜ್ಕುಮಾರ್ ಹೀರೋ ಆಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ.
ಅಭಿಮಾನದಿಂದ ಅಭಿಮಾನಕ್ಕಾಗಿ ಈ ನಮ್ಮ ಪಯಣ.
ಇರಲಿ ನಿಮ್ಮ ಅಪ್ಪುಗೆ
The legacy continues..@yuva_rajkumar @SanthoshAnand15 @VKiragandur @hombalefilms#IntroducingYuvaRajKumar #YuvaRajKumar pic.twitter.com/c4vsklAYFj— Hombale Films (@hombalefilms) April 27, 2022
‘ಅಭಿಮಾನದಿಂದ ಅಭಿಮಾನಕ್ಕಾಗಿ ಈ ನಮ್ಮ ಪಯಣ. ಇರಲಿ ನಿಮ್ಮ ಅಪ್ಪುಗೆ. ಲೆಗೆಸಿ ಮುಂದುವರಿಯುತ್ತದೆ. ಯುವ ರಾಜ್ಕುಮಾರ್ ಅವರನ್ನು ಹೊಂಬಾಳೆ ಫಿಲ್ಮ್ಸ್ ಹೆಮ್ಮೆಯಿಂದ ಪರಿಚಯಿಸುತ್ತಿದೆ’ ಎಂದು ಪೋಸ್ಟ್ ಮಾಡಲಾಗಿದೆ. ಯುವ ರಾಜ್ಕುಮಾರ್ ಅವರ ಹೊಸ ಪೋಸ್ಟರ್ಗಳನ್ನು ಕೂಡ ಹಂಚಿಕೊಳ್ಳಲಾಗಿದೆ. ಈ ಸುದ್ದಿ ಕೇಳಿ ಡಾ. ರಾಜ್ಕುಮಾರ್ ಕುಟುಂಬದ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಯುವ ರಾಜ್ಕುಮಾರ್ ನಟನೆಯ ಮೊದಲ ಸಿನಿಮಾ ‘ಯುವ ರಣಧೀರ ಕಂಠೀರವ’ ಚಿತ್ರ ಈ ಹಿಂದೆ ಅನೌನ್ಸ್ ಆಗಿತ್ತು. ಟೀಸರ್ ಮೂಲಕ ಭಾರಿ ಕೌತುಕವನ್ನೂ ಮೂಡಿಸಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆ ಚಿತ್ರ ಸಿದ್ಧವಾಗಿರಬೇಕಿತ್ತು. ಕಾರಣಾಂತರಗಳಿಂದ ಆ ಸಿನಿಮಾ ಕೆಲಸಗಳು ವಿಳಂಬ ಆಗಿವೆ. ಹಾಗಾಗಿ ‘ಹೊಂಬಾಳೆ ಫಿಲ್ಮ್ಸ್’ ನಿರ್ಮಾಣ ಮಾಡುವ ಚಿತ್ರವೇ ಯುವ ರಾಜ್ಕುಮಾರ್ ಅವರ ಮೊದಲ ಸಿನಿಮಾ ಆಗಿರಲಿದೆ.
ಇನ್ನು, ಸಂತೋಷ್ ಆನಂದ್ ರಾಮ್ ಅವರು ‘ರಾಜಕುಮಾರ’, ‘ಯುವರತ್ನ’, ‘ರಾಘವೇಂದ್ರ ಸ್ಟೋರ್ಸ್’ ಬಳಿಕ ನಾಲ್ಕನೇ ಬಾರಿಗೆ ‘ಹೊಂಬಾಳೆ ಫಿಲ್ಮ್ಸ್’ ಜೊತೆ ಸಿನಿಮಾ ಮಾಡುತ್ತಿದ್ದಾರೆ.
ಇದನ್ನೂ ಓದಿ:
‘ಹೊಂಬಾಳೆ ಫಿಲ್ಮ್ಸ್’ ಹೊಸ ಚಿತ್ರ ಅನೌನ್ಸ್; ಈ ಬಾರಿ ಚಾನ್ಸ್ ಪಡೆದಿದ್ದು ಲೇಡಿ ಡೈರೆಕ್ಟರ್ ಸುಧಾ ಕೊಂಗರ
ಟೀಸರ್ ಮೂಲಕ ಗಮನ ಸೆಳೆದ ‘ಕಾಂತಾರ’, ‘ರಾಘವೇಂದ್ರ ಸ್ಟೋರ್ಸ್’; ಹೊಂಬಾಳೆ ಫಿಲ್ಮ್ಸ್ ಪ್ರಯತ್ನಕ್ಕೆ ಸಿಕ್ತು ಮೆಚ್ಚುಗೆ
Published On - 9:57 am, Wed, 27 April 22